ದೂರದ ಹಾಸನದಿಂದ ಮಲೆನಾಡಿನ ಸಾಗರಕ್ಕೆ ಬಂದು ಕ್ಲೀನರ್ ಆಗಿ ಕೆಲಸ ಮಾಡಿ ದೊಡ್ಡ ಸಾರಿಗೆ ಸಂಸ್ಥೆ ಕಟ್ಟಿದ್ದ ಪ್ರಕಾಶ್ ಟ್ರಾವೆಲ್ಸ್‌ನ ಪ್ರಕಾಶ್ ಕೊನೆಗೂ ಕಾಣದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಶರಾವತಿ ಹಿನ್ನೀರಿನ ಪಟಗುಪ್ಪಾ ಸೇತುವೆ ಬಳಿ ಸೋಮವಾರ ಪ್ರಕಾಶ್ ಶವ ಪತ್ತೆಯಾಗಿದೆ.
ಶುಕ್ರವಾರ ರಾತ್ರಿ ಪಟಗುಪ್ಪಾ ಸೇತುವೆ ಬಳಿ ತಮ್ಮ ಕಾರು, ಮೊಬೈಲ್ ಹಾಗೂ ಚಪ್ಪಲಿ ಬಿಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕಾಶ್ ಜೀವಂತವಾಗಿ ಬರಲಿ ಎಂದು ಜನ ಪ್ರಾರ್ಥಿಸಿದ್ದರು. ಆದರೆ ಭವದ ಜಂಜಾಟ ಸಾಕು ಎಂದೇ ನಿರ್ಧರಿಸಿದ್ದ ಪ್ರಕಾಶ್, ಇಹದ ಕಾಯಕ ಮುಗಿಸಿ ಅವರನ್ನು ನಂಬಿದ ಕುಟುಂಬ ಮತ್ತು ಸಾರಿಗೆ ಸಂಸ್ಥೆಯ ಸಿಬ್ಬಂದಿ ಮತ್ತು ಜತನದಿಂದ ಬೆಳೆಸಿದ್ದ ಸಂಸ್ಥೆಯನ್ನು ಬಿಟ್ಟು ಹೋಗಿದ್ದಾರೆ.
ಹಾಸನದಿಂದ ಸಾಗರಕ್ಕೆ
ಹಾಸನ ಜಿಲ್ಲೆಯ ಕಾಣಗೆರೆಯವರಾದ ಪ್ರಕಾಶ್ ಸಾಗರಕ್ಕೆ ಡ್ರೈವಿಂಗ್ ಸ್ಕೂಲ್‌ನಲ್ಲಿ ಚಾಲಕರಾಗಿದ್ದರು. ಮೊದಲು ಗೀತಾ ಬಸ್‌ನ ಕ್ಲೀನರ್ ಆಗಿದ್ದ ಅವರು ಬಳಿಕ ಕ್ಲೀನರ್, ಕಂಡಕ್ಟರ್ ಹೀಗೆ ಎಲ್ಲ ಹಂತದ ಕೆಲಸ ಮಾಡಿದ ಅನುಭವ ಹೊಂದಿದ್ದರು. ಹೀಗೆ ತಮ್ಮ ಬದುಕು ಹಸನು ಮಾಡಿಕೊಳ್ಳಲು ಹಾಸನದಿಂದ ಬಂದಿದ್ದ ಪ್ರಕಾಶ್ ೧೯೯೭ ರಲ್ಲಿ ಸಾಗರದಲ್ಲಿ ತಮ್ಮ ಸೋದರ ಗಂಗರಾಜು ಎನ್ನುವವರೊಂದಿಗೆ ಸೇರಿ ಪ್ರಕಾಶ್ ಟ್ರಾವೆಲ್ಸ್ ಎಂಬ ಸಂಸ್ಥೆ ಕಟ್ಟಿದರು. ಸಾಗರದಲ್ಲಿಯೇ ಗಜಾನನ ಸಾರಿಗೆ ಸಂಸ್ಥೆ, ಕೊಪ್ಪ ಸಹಕಾರ ಸಾರಿಗೆ. ಹೊಸನಗರದ ಭಾಗ್ಯ ಲಕ್ಷ್ಮಿ ಟ್ರಾವೆಲ್ಸ್ , ಶಿವಮೊಗ್ಗದ ವಿಜಯ ಬಸ್ ಹೀಗೆ ಖಾಸಗಿ ವಲಯದಲ್ಲಿ ದೊಡ್ಡ ಪೈಪೋಟಿ ಇರುವಾಗಲೇ ಸೊರಬ ಮತ್ತು ಸಾಗರ ನಡುವೆ ಸಂಚರಿಸಲು ಪ್ರಕಾಶ್ ಟ್ರಾವೆಲ್ಸ್ ಮೊದಲ ಬಸ್ ಬಂದು ನಿಂತಿತ್ತು.
ಆಧುನಿಕಸ್ಪರ್ಶ:
ಮಲೆನಾಡಿನಲ್ಲಿಪ್ರಕಾಶ್‌ಟ್ರಾವೆಲ್ಸ್ಲಕ್ಸುರಿಬಸ್‌ಗಳನ್ನುಪರಿಚಯಿಸಿದಶ್ರೇಯಪ್ರಕಾಶವರಿಗೆಸಲ್ಲುತ್ತದೆ. ಒಂದು ಬಸ್‌ನಿಂದ ಆರಂಭವಾದ ಸಂಸ್ಥೆ ಕೊನೆಗೆ ೫೦ ಬಸ್‌ಗಳನ್ನು ಹೊಂದಿತ್ತು. ತಮ್ಮದೇ ಬಸ್‌ಗೂ ಕ್ಲೀನರ್, ಚಾಲಕ, ಕಂಡಕ್ಟರ್ ಹಾಗೂ ಮಾಲೀಕರಾಗಿದ್ದ ಪ್ರಕಾಶ್ ಸಂಸ್ಥೆ ನೌಕರರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ೫೦೦ ಕುಟುಂಬಗಳಿಗೆ ನೆರಳಾಗಿದ್ದ ಸಾರಿಗೆ ಸಂಸ್ಥೆ ಇಂದು ತನ್ನ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದೆ.
ಆರ್ಥಿಕ ಹೊರೆ:
ಮಲೆನಾಡಿನಲ್ಲಿ ಮದುವೆ ಸೇರಿದಂತೆ ಖಾಸಗಿ ಸಮಾರಂಭಗಳಿಗೆ ಹೆಚ್ಚು ಜನ ನೆಚ್ಚಿಕೊಂಡಿದ್ದೇ ಪ್ರಕಾಶ್ ಟ್ರಾವೆಲ್ಸ್ ಬಸ್‌ಗಳನ್ನು. ಮಲೆನಾಡಿನ ಸಮಾರಂಭಗಳಿಗೆ ಅದ್ಧೂರಿತನ ನೀಡುವುದು ಮಾತ್ರವಲ್ಲದೆ, ಸ್ಥಳೀಯರಿಗೇ ಉದ್ಯೋಗ ಕೊಡುವ ಮೂಲಕ ಸಂಸ್ಥೆ ಮಲೆನಾಡಿನ ಆರ್ಥಿಕತೆ ವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿತ್ತು. ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಂಕಷ್ಟ ಹಾಗೂ ಕೊರೊನದಿಂದಾಗಿ ಸಾರಿಗೆ ಉದ್ಯಮ ಭಾರೀ ನಷ್ಟ ಅನುಭವಿಸಿತು. ತಮಗೆ ಆದಾಯ ಇಲ್ಲದೇ ಇದ್ದರೂ ಪ್ರಕಾಶ್ ಅವರು ಸಿಬ್ಬಂದಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದರಂತೆ.ಕೊರೊನ ಪೆಟ್ಟಿನ ಮೇಲೆ ಪೆಟ್ಟುಕೊಟ್ಟಿದ್ದು, ಮಾತ್ರವಲ್ಲದೆ, ಪ್ರಕಾಶ್ ಮಾಡಿಕೊಂಡಿದ್ದ ಸಾಲ ಬೆಳೆಯುತ್ತಲೇ ಹೋಯಿತು. ಇತ್ತೀಚೆಗೆ ಎರಡು ಬಸ್ ರೂಟ್‌ಗಳನ್ನು ಅವರು ಮಾರಾಟ ಮಾಡಿದ್ದರು ಎಂದು ಹೇಳಲಾಗಿದೆ.
ಸಾವಿನ ತನಿಖೆ ಆಗಲಿ:
ಪ್ರಕಾಶ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೊ, ಅಥವಾ ಮತ್ತೇನಾದರೂ ಅನಾಹುತ ಆಗಿದೆಯೊ ಎಂಬ ಬಗ್ಗೆ ತನಿಖೆ ಆಗಬೇಕು. ಏನೇ ಆಗಲಿ ಪ್ರಕಾಶ್ ಸಾವು ಅನ್ಯಾಯವಾಗಿದೆ. ಈ ವ್ಯವಸ್ಥೆಯೇ ಅವರನ್ನು ಬಲಿ ತೆಗೆದುಕೊಂಡಿದೆ ಎನ್ನುವುದರಲ್ಲಿ ಯಾವುದೇ ಆನುಮಾನವಿಲ್ಲ. ಸಾವು ಮತ್ತು ಅದರ ಹಿಂದಿನ ಸತ್ಯಾಸತ್ಯತೆಯ ತನಿಖೆಯಾಗಬೇಕಿದೆ.