ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿ ನಾಡು ವಜ್ರ, ವೈಡೂರ್ಯಗಳನ್ನು ರಸ್ತೆಯಲ್ಲಿ ಮಾರಾಟ ಮಾಡುವಷ್ಟು ಶ್ರೀಮಂತವಾಗಿತ್ತು,ಈಗ ಮಾತ್ರ ಸಾಲ ಮಾಡ್ತಿರೋದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ರಾಜ್ಯಸರ್ಕಾರ ಸಾಲದಲ್ಲಿ ಮುಳುಗಿದೆ ಎಂಬ ಸಿದ್ದರಾಮಯ್ಯ ಟೀಕೆಗೆ ಶಿವಮೊಗ್ಗದಲ್ಲಿ ಉತ್ತರಿಸಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ೧ ರೂ. ಸಾಲ ಮಾಡಿಲ್ಲ ಎಂದು ಬಹಿರಂಗವಾಗಿ ಹೇಳಲಿ. ಸರ್ಕಾರ ಅಂದ್ರೆ ಸಾಲ ಮಾಡೋದು ಇರುತ್ತೆ, ಸಾಲ ತೀರಿಸೋದು ಇರುತ್ತೆ. ಅರ್ಥ ಸಚಿವರಾಗಿದ್ದ ಅವರಿಗೆ ನಾನು ಹೇಳೋಕೆ ಆಗುತ್ತಾ, ಅರ್ಥ ಮಾಡ್ಕೋಬೇಕು ಎಂದರು.
ಸಾಲ ಮಾಡದೇ ಆಡಳಿತ ನಡೆಸಿದ್ರೆ, ಯಾಕೆ ಸೋಲಬೇಕಿತ್ತು. ಯಾಕೆ ಸರ್ಕಾರ ಕಳೆದುಕೊಂಡ್ರಿ. ಚಾಮುಂಡೇಶ್ವರಿಯಲ್ಲಿ ಯಾಕೆ ಸೋತಿರಿ. ಸಿಎಂ ಸ್ಥಾನ ಯಾಕೇ ಕಳೆದುಕೊಂಡ್ರಿ? ಸೋತ ಮೇಲೆ ಬಹಳ ಪಾಠ ಹೇಳುವ ಅಭ್ಯಾಸವನ್ನು ಸಿದ್ದರಾಮಯ್ಯ ಕಲಿತಿದ್ದಾರೆ. ರಾಜ್ಯದ ಜನ ಎಲ್ಲಾ ಪಾಠಗಳಿಗೆ ಉತ್ತರ ಕೊಡುತ್ತಿದ್ದಾರೆ. ಅದನ್ನು ಜನ ಒಪ್ಪಲ್ಲ. ಪಾಠ ಬಿಟ್ಟು, ಸರ್ಕಾರದ ತಪ್ಪು ಬಹಿರಂಗವಾಗಿ ತಿಳಿಸಿ, ಹೋರಾಟ ಮಾಡಿ ಒಪ್ಕೋತ್ತೇವೆ ಎಂದು ಈಶ್ವರಪ್ಪ ಸವಾಲು ಹಾಕಿದರು.
ಮೇಕೆದಾಟು ಪಾದಯಾತ್ರೆಯಿಂದ ಕೊರೊನಾ ಹರಡಲು ಕಾಂಗ್ರೆಸ್ ಕಾರಣವಾಗಿದೆ. ಖರ್ಗೆ, ರೇವಣ್ಣ ಸೇರಿದಂತೆ ಅನೇಕರು ಪಾದಯಾತ್ರೆಯಿಂದ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ದೇವರಂತೆ ಹೈಕೋರ್ಟ್ ಮಧ್ಯ ಪ್ರವೇಶಿಸಿದ ಕಾರಣ ಪಾದಯಾತ್ರೆ ನಿಂತಿದೆ. ಇದೀಗ ಮತ್ತೆ ಮಹದಾಯಿ ವಿಷಯ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುವುದಾಗಿ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಕಿಡಿಕಾರಿದರು.
ಪಲ್ಲಕ್ಕಿ ಹೊರಲು ಎಡಕ್ಕಾದ್ರೇನು, ಬಲಕ್ಕಾದರೇನು?
ಪಲ್ಲಕ್ಕಿ ಹೊರುವವರಿಗೆ ಎಡ ಆದ್ರೇನು, ಬಲ ಆದ್ರೇನು … ಇದು ಉಸ್ತುವಾರಿ ಬದಲು ಮಾಡಿರುವ ಸಿಎಂ ನಿರ್ಧಾರ ಕುರಿತು ಈಶ್ವರಪ್ಪ ಕೊಟ್ಟ ಉತ್ತರ. ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ತಮಗಿರುವ ಅಸಮಾಧಾನವನ್ನು ಬಹಿರಂಗಪಡಿಸದೇ ಇದ್ದರೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಆಗಬಾರದು, ಆದರೂ ಆಗಿದೆ. ಶೀಘ್ರದಲ್ಲೇ ಅದು ತಿಳಿಯಾಗುತ್ತೆ. ನಾನು ಬರೀ ಶಿವಮೊಗ್ಗ ಜಿಲ್ಲೆಯಲ್ಲಿ ಇದ್ದೆ. ಇದೀಗ ಚಿಕ್ಕಮಗಳೂರು ಹೋಗುತ್ತಿದ್ದೇನೆ. ಅಲ್ಲಿನ ಪರಿಸ್ಥಿತಿ ತಿಳಿದುಕೊಳ್ಳುತ್ತೇನೆ. ಬೇರೆಯವರು ಬಂದು ಇಲ್ಲಿಯ ಪರಿಸ್ಥಿತಿ ತಿಳಿದುಕೊಳ್ಳುತ್ತಾರೆ. ಇಲ್ಲಿನ ಅಭಿವೃದ್ಧಿ ಕಾರ್ಯ, ಕಾರ್ಯಕರ್ತರ ಒಡನಾಟ, ಸ್ಥಳೀಯ ಶಾಸಕರ ಒಡನಾಟ ಎಲ್ಲವನ್ನು ಸಿಎಂ ಗಮನಕ್ಕೆ ತರ್ತಾರೆ. ಮುಂದೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಅಭಿವೃದ್ಧಿಯ ಜೊತೆಗೆ ಸಂಘಟನೆಯ ಕೆಲಸವನ್ನು ಸಹ ಮಾಡಲಾಗುತ್ತೆ. ಸ್ಥಳೀಯವಾಗಿ ಬೇಸರವಿದ್ರೆ ನಮ್ಮ ಬಳಿ ಹೇಳಲ್ಲ. ಅದೇ ಹೊರಗಿನೋರು ಬಂದಾಗ ಎಲ್ಲವನ್ನೂ ಹೇಳ್ತಾರೆ. ಆಗ ಸಮಸ್ಯೆ ಬಗೆಹರಿಸಬಹುದು ಎಂದು ಮಾರ್ಮಿಕವಾಗಿ ನುಡಿದರು.
ಸಿಎಂ ಬೊಮ್ಮಾಯಿ ಅವರ ಕ್ರಮವನ್ನು ನಾನು ಸ್ವಾಗತ ಮಾಡ್ತೇನೆ. ಇದು ಹೊಸದೇನು ಅಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಜಿಲ್ಲೆಗೆ ಬೇರೆಯವರು ಉಸ್ತುವಾರಿ ಆಗಿದ್ದರು. ಬಿಎಸ್‌ವೈ ಸಿಎಂ ಆಗಿದ್ದಾಗ ನಾನು ಬಿಜಾಪುರ, ಚಿಕ್ಕಮಗಳೂರು ಉಸ್ತುವಾರಿ ಸಚಿವನಾಗಿದ್ದೆ. ನಮ್ಮ ಜಿಲ್ಲೆಯಲ್ಲೇ ಇರುತ್ತೇವೆ ಅನ್ನೋ ನಿಲುವು ಸರಿಯಲ್ಲ ಎಂದು ನಾಯಕರು ತೀರ್ಮಾನ ಮಾಡಿದ್ದಾರೆ ಎಂದರು.