ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ2019-20 ಹಾಗೂ 21ನೇ ಸಾಲಿನ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ತನಿಖೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
2014 ನೇ ಸಾಲಿನಿಂದ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಕಾಯ್ದೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಎಸ್.ಸಿ., ಎಸ್.ಟಿ. ಉಪಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಅಂದಾಜು ೧.೩೦ ಕೋಟಿ ರೂ. ಬಿಡುಗಡೆ ಮಾಡಿದೆ. ಈ ಯೋಜನೆಗಳಿಂದ ಸಬಲೀಕರಣಗೊಂಡ ಕುಟುಂಬಗಳೆಷ್ಟು, ರಾಜ್ಯದ ಜನಸಂಖ್ಯೆಯಲ್ಲಿ ಎಸ್.ಸಿ., ಎಸ್.ಟಿ. ಬಿಪಿಎಲ್ ಕುಟುಂಬಗಳಿಗೆ ಈ ಹಣ ತಲುಪಿದ್ದರೆ ಸಂಪೂರ್ಣ ಸಬಲೀಕರಣಗೊಳ್ಳುತ್ತಿದ್ದವು. ಈ ಉಪ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಹೆಚ್ಚು ಒತ್ತು ಕೊಡದೇ ಇರುವುದರಿಂದ ಹಣ ಬಳಕೆಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ 2019-20 ಹಾಗೂ 21ನೇ ಸಾಲಿನ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯ ಸುಮಾರು5 ಕೋಟಿ ರೂ.ನಲ್ಲಿ ಕೈಗೊಂಡಿರುವ ಸಿಸಿ ರಸ್ತೆಗಳು ಎಸ್.ಸಿ. ಕಾಲೋನಿಯಲ್ಲಿ ನಿರ್ವಹಿಸದೇ ಎಸ್.ಸಿ. ಕಾಲೋನಿ ಹೊರತುಪಡಿಸಿ ಉಳಿದೆಡೆ ರಸ್ತೆಗಳಿಗೆ ಬಳಕೆ ಮಾಡಲಾಗಿದೆ ಎಂದು ದೂರಿದರು. ಎಸ್.ಸಿ. ಕಾಲೋನಿಯಲ್ಲಿ ಎಲ್‌ಇಡಿ ಹೈಮಾಸ್ಕ್ ದೀಪಗಳ ಅಳವಡಿಸದೇ ಬಹುತೇಕ ಹಳ್ಳಿಗಳಲ್ಲಿ ಮೇಲ್ವರ್ಗದವರ ಬೀದಿಗಳಲ್ಲಿ ಅಳವಡಿಸಲಾಗಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಎಸ್.ಸಿ. ಜನಾಂಗದವರೇ ಆದ ಶಾಸಕರು ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯ ತೋರಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಒತ್ತಡಕ್ಕೆ ಮಣಿದು ಮೇಲ್ವರ್ಗದ ಕೇರಿಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಎಸ್.ಸಿ., ಎಸ್.ಟಿ. ಜನಾಂಗದವರಿಗೆ ಅನುಕೂಲವಾಗಿದೆ ಎಂದು ಸುಳ್ಳು ಸ್ಥಳ ತನಿಖಾ ವರದಿ ನೀಡಿರುವ ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಟಿ.ಹೆಚ್. ಹಾಲೇಶಪ್ಪ, ಪರಮೇಶ್ ಸೂಗೂರು, ಶೇಷಪ್ಪ ಹುಣಸೋಡು, ಜಗ್ಗು, ಮೀನಾ, ರುದ್ರಮ್ಮ, ಕೃಷ್ಣ, ನಾಸಿಕ್ ಬಾಬು ಮತ್ತಿತರರು ಭಾಗವಹಿಸಿದ್ದರು.
previous post