ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಶುಕ್ರವಾರ ಮುಂಜಾನೆ ಬೆಂಗಳೂರಿನ ವಸಂತನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 30 ವರ್ಷ ವಯಸ್ಸಿನ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.
ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಇಂದು ಸೌಂದರ್ಯ ತಾವು ವಾಸವಿದ್ದ ಅಪಾರ್ಟ್ ಮೆಂಟ್ ನಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿದ್ದ ಅವರನ್ನು ಕಂಡ ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿಗೆ ತಲುಪುವಷ್ಟರ ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಹೇಳಲಾಗುತ್ತಿದೆ.
ಆಕೆಯ ಆತ್ಮಹತ್ಯೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆಕೆಯ ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ. ಇದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಿ ಸುಧಾಕರ್ ಶವಾಗಾರಕ್ಕೆ ಭೇಟಿ ನೀಡಿದ್ದರು.
ಸೌಂದರ್ಯ ಅವರು ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ (ಎಂಎಸ್) ಪಡೆದಿದ್ದರು. ಅವರು ಎಂಎಸ್ ರಾಮಯ್ಯ ಕಾಲೇಜಿನ ರೇಡಿಯಾಲಜಿಸ್ಟ್ ಡಾ ನೀರಜ್ ಅವರನ್ನು ವಿವಾಹವಾಗಿದ್ದರು. ಕಳೆದ ವರ್ಷ ದಂಪತಿಗೆ ಮಗುವಾಗಿತ್ತು. ಪ್ರಸವಾನಂತರದ ಖಿನ್ನತೆಯು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಿರಬಹುದು ಎನ್ನಲಾಗಿದೆ.
ಶೋಕದಲ್ಲಿ ಮುಳುಗಿದ ಯಡಿಯೂರಪ್ಪ ಕುಟುಂಬ
ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಅವರ ಅಕಾಲಿಕ ನಿಧನದಿಂದ ಯಡಿಯೂರಪ್ಪ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಮನೆಯಲ್ಲಿ ಎಲ್ಲರ ಮುದ್ದಿನ ಮಗಳಾಗಿದ್ದ ಸೌಂದರ್ಯ ಅವರಿಗೆ ೯ ತಿಂಗಳ ಮಗು ಇದೆ. ರಾಜ್ಯದ ಬಹುತೇಕ ರಾಜಕೀಯ ನಾಯಕರು ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳು ಯಡಿಯೂರಪ್ಪ ಅವರಿಗೆ ಸಾಂತ್ವನ ಹೇಳಿದ್ದಾರೆ. ಆರೋಗ್ಯ ಸಚಿವ ಡಾ.ಸುಧಾಕರ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದೆಯತ್ತರ ಬೆಳೆದು ನಿಂತ ಮಕ್ಕಳ ಅಗಲಿಕೆ ನೋವು ಏನಂತ ಗೊತ್ತಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.ರಾಜ್ಯದ ಹಲವು ಸಚಿವರು ಯಡಿಯೂರಪ್ಪ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.