ವಾರದ ಹಿಂದೆ ಗಂಡು ಸಿಂಹದೊಂದಿಗೆ ಕಾದಾಡಿ ಅಸ್ಪಸ್ಥಗೊಂಡಿದ್ದ ಸಿಂಹಿಣಿ ಮಾನ್ಯ(11) ಸಾವಿಗೀಡಾಗಿದ್ದು, ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿನ ಸಿಂಹಗಳ ಸಂಖ್ಯೆ ಈಗ ಐದಕ್ಕೆ ಕುಸಿದಿದೆ.
ವಾರದ ಹಿಂದೆ ಯಶವಂತ ಎಂಬ ಸಿಂಹದೊಂದಿಗೆ ಸಿಂಹಿಣಿ ಮಾನ್ಯ ಕಾದಾಟ ನಡೆಸಿತ್ತು. ‘ಕಾದಾಟದ ಹಿನ್ನೆಲೆಯಲ್ಲಿ ಎರಡು ಸಿಂಹಗಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಆದರೆ ತೀವ್ರ ಗಾಯಗೊಂಡಿದ್ದ ಮಾನ್ಯಾ ಸಾವನ್ನಪ್ಪಿದೆ’ ಎಂದು ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ ಚಂದ್ರ ತಿಳಿಸಿದ್ದಾರೆ. ಗಾಯಗೊಂಡ ಮಾನ್ಯಾಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿತ್ತಾದರೂ, ತೀವ್ರಸ್ವರೂಪದ ಗಾಯಗಳಾಗಿದ್ದರಿಂದ ಅದು ಚೇತರಿಸಿಕೊಳ್ಳಲಿಲ್ಲ. ಸೋಮವಾರ ಸಫಾರಿ ಆವರಣದಲ್ಲಿಯೇ ಮಾನ್ಯಾಳ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮೈಸೂರಿನಿಂದ ತಾವರೆಕೊಪ್ಪಕ್ಕೆ ಬಂದಿತ್ತು
ಸಿಂಹಿಣಿ ಮಾನ್ಯಾಳನ್ನು2011ರಲ್ಲಿ ತ್ಯಾವರೆಕೊಪ್ಪದ ಸಿಂಹಧಾಮಕ್ಕೆ ತರಲಾಗಿತ್ತು. ಮೈಸೂರು ಮೃಗಾಲಯದಿಂದ ಆರ್ಯ, ಮಾಲಿನಿ ಮತ್ತು ಮಾನ್ಯಾ ಸಿಂಹಗಳು ಇಲ್ಲಿಗೆ ಬಂದಿದ್ದವು. ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಮೂರು ಗಂಡು, ಮೂರು ಹೆಣ್ಣು ಸಿಂಹಗಳು ಇದ್ದವು. ಈಗ ಮಾನ್ಯಾ ಸಾವನ್ನಪ್ಪಿರುವುದರಿಂದ ಮೃಗಾಲಯದಲ್ಲಿ ಸಿಂಹಗಳ ಸಂಖ್ಯೆ ಐದಕ್ಕೆ ಕುಸಿದಿದ್ದಲ್ಲದೆ ಹೆಣ್ಣು ಸಿಂಹಗಳ ಸಂಖ್ಯೆ ಎರಡಕ್ಕಿಳಿದಿದೆ.