ಶಿವಮೊಗ್ಗ: ನೀರಿನ ಕರ ಹೆಚ್ಚಳವನ್ನು ನಾಗರಿಕರೆಲ್ಲರೂ ವಿರೋಧಿಸಲೇಬೇಕು. ಯಾವ ಮಾನದಂಡವೂ ಇಲ್ಲದೆ ಮನಬಂದಂತೆ ಏರಿಸುವುದು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಅವೈಜ್ಞಾನಿಕ ನೀರಿನ ಕರ ಹೇರಿಕೆ ಕುರಿತು ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಶನಿವಾರ ಸಂಜೆ ಏರ್ಪಡಿಸಲಾಗಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದವರೆಲ್ಲರೂ ಈ ಏರಿಕೆಯನ್ನು ಬಲವಾಗಿ ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಈ ಬಗ್ಗೆ ಮುಂದಿನ ಹೋರಾಟಕ್ಕೆ ಸಿದ್ಧರಾಗಲು ನಿರ್ಧರಿಸಿದರು.
ಪ್ರಾಸ್ತಾವಿಕ ಮಾತನಾಡಿದ ವೇದಿಕೆಯ ಮುಖಂಡ ಸತೀಶ್‌ಕುಮಾರ್ ಶೆಟ್ಟಿ, ಮಹಾನಗರ ಪಾಲಿಕೆಯು ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಬರೆ ಹಾಕುತ್ತಲೇ ಇದೆ. ಆಸ್ತಿ ತೆರಿಗೆ ಹೆಚ್ಚಳ ಮಾಡಿದ ನಂತರ ಈಗ ನೀರಿನ ಕರ ಏರಿಸಿದೆ. ಆಸ್ತಿ ತೆರಿಗೆ ಸಂಬಂಧ ಹೋರಾಡಿದರೂ ಬಗ್ಗದ ಕಾರಣ ನ್ಯಾಯಾಲಯಕ್ಕೆ ಎಲ್ಲರೂ ಸೇರಿ ಹೋಗುವಂತಾಯಿತು. ಈಗ ನೀರಿನ ಕರೆ ಏರಿಕೆಯ ವಿಚಾರವೂ ಪರಿಹಾರವಾಗದಿದ್ದರೆ ನ್ಯಾಯಾಲಯದ ಮೆಟ್ಟಿಕೇರುವುದು ಅನಿವಾರ್‍ಯವಾಗುತ್ತದೆ ಎಂದರು.
ಇರುವ ನೀರಿನ ವ್ಯವಸ್ಥೆಯನ್ನು ಬಲಪಡಿಸಬೇಕು. ರೈಸಿಂಗ್ ಮೇನ್‌ಗಳನ್ನು ಬಲಪಡಿಸಬೇಕು. ಅವಶ್ಯವಿರುವಲ್ಲಿ ಹೊಸ ಪೈಪ್‌ಲೈನ್ ಹಾಕಬೇಕು. ಸಮರ್ಪಕ ನೀರು ಎಲ್ಲ ವಾರ್ಡಿನ ಜನರಿಗೂ ಸಿಗುವಂತಾಗಬೇಕು. ಆದರೆ ಇದ್ಯಾವುದನ್ನೂ ಮಾಡದೆ, ಮೂಲ ಸೌಕರ್‍ಯವನ್ನು ಒದಗಿಸದೆ ನೀರಿನ ದರ ಮಾತ್ರ ಏರಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮೀಟರ್ ಇಲ್ಲದೆಯೇ ನೀರಿನ ದರ ವಾಣಿಜ್ಯ ಬಳಕೆಯವರಿಗೆ750 ರೂ. ಉಳಿದವರಿಗೆ ೩೫೦ ರೂ. ಬರುತ್ತದೆ. ಮೀಟರ್ ಹಾಕಿದರೆ ಇದು ಸಾವಿರಾರು ರೂ. ಹೆಚ್ಚಾಗುತ್ತದೆ. ಇಷ್ಟೊಂದು ಪ್ರಮಾಣದ ಏರಿಕೆ ಸಮ್ಮತವಲ್ಲ. ಜನರು ಈ ಬಗ್ಗೆ ಗಂಭೀರ ಹೋರಾಟ ಮಾಡಬೇಕಾದ ಅಗತ್ಯವಿದೆ. ಸಾರ್ವಜನಿಕರು ತೆರಿಗೆ ತುಂಬಲು ಮಾತ್ರ ಇರುವವರು ಎನ್ನುವ ಭಾವನೆ ದೂರವಾಗಬೇಕು. ತೆರಿಗೆಗೆ ತಕ್ಕಂತೆ ವ್ಯವಸ್ಥೆ, ಸೌಕರ್‍ಯ ಸಿಗಬೇಕೆಂದರು.
ವೇದಿಕೆಯಲ್ಲಿ ಚೇಂಬರ್ ಅಧ್ಯಕ್ಷ ಎನ್. ಗೋಪಿನಾಥ, ಉಪಾಧ್ಯಕ್ಷ ವಸಂತ್ ಹೋಬಳಿದಾರ್, ಪದಾಧಿಕಾರಿಗಳಾದ ಬಿ. ಆರ್. ಸಂತೋಷ್, ಬಿ. ಗೋಪಿನಾಥ, ಜಿ. ವಿಜಯಕುಮಾರ್, ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರ. ಕಾರ್‍ಯದರ್ಶಿ ಎಸ್. ಬಿ. ಅಶೋಕಕುಮಾರ್ ಹಾಜರಿದ್ದರು.
ಈಗಲೇ ಸಮರ್ಪಕ ನೀರು ಪೂರೈಸಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಶುದ್ಧ ಕುಡಿಯುವ ನೀರು ಕೊಡುತ್ತಿಲ್ಲ. ನೀರನ್ನು ಆಲಂ ಹಾಕಿ ಸ್ವಚ್ಛಗೊಳಿಸುತ್ತಿಲ್ಲ. ಇನ್ನು24 ಗಂಟೆಗಳ ಕಾಲ ಇವರಿಂದ ನೀರು ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೆ, ಇದು ಅಸಾಧ್ಯದ ಮಾತು. ಹೇಳಿದಷ್ಟು ಸುಲಭದ ಯೋಜನೆ ಇದಲ್ಲ. ತೆರಿಗೆ ಏರಿಕೆ ಬಗ್ಗೆ ನ್ಯಾಯಾಲಯದ ಕದ ತಟ್ಟುವುದು ಅನಿವಾರ್‍ಯವಾಗಿದೆ. ಸಾರ್ವಜನಿಕರು ಇದಕ್ಕೆ ಬೆಂಬಲಿಸಬೇಕು.
ಕೆ. ವಿ. ವಸಂತಕುಮಾರ್, ಕಾರ್‍ಯದರ್ಶಿ