Malenadu Mitra
ರಾಜ್ಯ ಶಿವಮೊಗ್ಗ

ಹಿಜಾಬ್-ಕೇಸರಿ ಶಾಲು ಪ್ರತಿಭಟನೆ: ಕಾಂಗ್ರೆಸ್ ನಿಯೋಗದಿಂದ ಎಸ್‌ಪಿ ಭೇಟಿ

ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಪ್ರಚೋದನೆ ಮಾಡುವಂತಹ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.
ಬುಧವಾರ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ, ಮಂಗಳವಾರದ ಗಲಭೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಇಂತಹ ಸಂದರ್ಭದಲ್ಲಿ ಅನಾವಶ್ಯಕವಾಗಿ ವಿದ್ಯಾರ್ಥಿಗಳಲ್ಲದವರು ಕಾಲೇಜ್ ಪ್ರವೇಶಿಸಿ ಗಲಭೆಗೆ ಪ್ರಚೋದನೆ ನೀಡುವುದು ಮತ್ತು ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಎಳೆಯುತ್ತಿರುವ ಶಕ್ತಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಮೊದಲೇ ಸಂಕಷ್ಟದಲ್ಲಿರುವ ವ್ಯಾಪಾರಸ್ಥರಿಗೆ ಪೊಲೀಸರು ಅಂಗಡಿ ಮುಚ್ಚುವಂತೆ ಸೂಚಿಸುತ್ತಿದ್ದಾರೆ. ಸೆಕ್ಷನ್ ೧೪೪ ಜಾರಿಯಲ್ಲಿರುವುದರಿಂದ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಅವರು ವಿನಂತಿಸಿದರು.
ಪ್ರತಿಕ್ರಿಯೆ ನೀಡಿದ ಎಸ್.ಪಿ. ಲಕ್ಷ್ಮಿ ಪ್ರಸಾದ್ ಅವರು, ಸೆಕ್ಷನ್ ೧೪೪ ಜಾರಿಯಲ್ಲಿದ್ದರೂ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡುವುದಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿರುವ ಕೆಲವೊಂದು ಕ್ಯಾಂಟೀನ್ ಮತ್ತು ಗೂಡಂಗಡಿಗಳಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಅನಾವಶ್ಯಕವಾಗಿ ಕಾಲಹರಣ ಮಾಡುವುದನ್ನು ಗಮನಿಸಿ ಅಂತಹ ಅಂಗಡಿಗಳನ್ನು ಮಾತ್ರ ಮುಚ್ಚಿಸಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯರಾದ ಶಾಮೀರ್ ಖಾನ್, ಆರ್.ಸಿ. ನಾಯ್ಕ್, ಪ್ರಮುಖರಾದ ಶ್ಯಾಂ ಸುಂದರ್, ಕೆ. ರಂಗನಾಥ್, ದೀಪಕ್ ಸಿಂಗ್ ಮೊದಲಾದವರಿದ್ದರು.

ಮೆಗ್ಗಾನ್ ಆಸ್ಪತ್ರೆಗೆ ಶಾಸಕ ಅಶೋಕ್ ನಾಯ್ಕ್ ಭೇಟಿ

ನಗರದ ಮೀನಾಕ್ಷಿ ಭವನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಹಿಜಾಬ್-ಕೇಸರಿ ಶಾಲು ಪ್ರತಿಭಟನೆಯ ಘರ್ಷಣೆಯಲ್ಲಿ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಗಾಯಾಳು ವಿದ್ಯಾರ್ಥಿಗಳ ಕುಟುಂಬದವರಿಗೆ ಧೈರ್ಯ ಹೇಳಿ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದರು.
ಮೆಗ್ಗಾನ್ ಜಿಲ್ಲಾ ಅಧಿಕ್ಷಕರಾದ ಶ್ರೀಧರ್, ಶಿವಮೊಗ್ಗ ಬಿ.ಜೆ.ಪಿ ನಗರ ಅಧಕ್ಷರಾದ ಜಗದೀಶ್, ಲಕ್ಷ್ಮೀಕಾಂತ್ ಶೆಟ್ರು, ಪವನ್, ಮೇಘಾರಾಜ್ ಮತ್ತಿತರರಿದ್ದರು.

ಪ್ರತಿಭಟನೆ ವೇಳೆ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ ಅರ್ಜುನ್ ಮತ್ತು ಮಂಜುನಾಥ್ ಅವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬುಧವಾರ ಮಹಾ ನಗರ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ಆರ್.ಸಿ. ನಾಯ್ಕ್, ಶಾಮೀರ್ ಖಾನ್, ಮುಖಂಡರಾದ ರಂಗನಾಥ್, ರಂಗೇಗೌಡ ಇದ್ದರು.

ಧರ್ಮ ಸೂಕ್ಷ್ಮ ವಿಚಾರದಲ್ಲಿ ಸಂಪೂರ್ಣ ವಿಫಲಗೊಂಡ ಸರ್ಕಾರ : ಆರ್.ಎಂ.ಎಂ.

ಮಕ್ಕಳಲ್ಲಿ ರಾಷ್ಟ್ರದ ಪರಿಕಲ್ಪನೆ, ಸಂವಿಧಾನದ ಬಗ್ಗೆ ,ರಾಷ್ಟ್ರಗೀತೆಯ ಬಗ್ಗೆ ಗೌರವ ಬರುವ ಸಂಗತಿಗಳನ್ನು ಹೇಳಿಕೊಡುವ ರಾಜಕಾರಣಿಗಳು ಧರ್ಮ ಸಂಘರ್ಷಕ್ಕೆ ಒತ್ತು ನೀಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಡಾ.ಆರ್.ಎಂ.ಮಂಜುನಾಥ್ ಗೌಡ ಹೇಳಿದರು.
ತೀರ್ಥಹಳ್ಳಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕರಾವಳಿ ಪ್ರದೇಶದಿಂದ ಆರಂಭಗೊಂಡ ಹಿಜಾಬ್- ಕೇಸರಿ ವಿವಾದ ರಾಜ್ಯಾದ್ಯಂತ ಹರಡಿದೆ,ಶಾಂತಿ,ಸೌಹಾರ್ದತೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎನ್ನಿಸಿಕೊಂಡವರು ಶಾಂತಿ ಕಾಪಾಡಲು ಯಾವ ಜಿಲ್ಲೆಯಲ್ಲೂ ಶಾಂತಿ ಸಭೆ ನಡೆಸಲಿಲ್ಲ. ದೇಶದ ಭವಿಷ್ಯದ ವಿದ್ಯಾರ್ಥಿಗಳಿಗೆ ನಮ್ಮನಾಳುವ ಧರ್ಮದ ಅಮಲು ಹೆಚ್ಚಿಸಿರುವುದು ನೋವಿನ ಸಂಗತಿ ಎಂದು ಹೇಳಿದರು.
ರಾಜ್ಯದ ಗೃಹ ಮಂತ್ರಿಗಳ ತವರು ಜಿಲ್ಲೆಯಲ್ಲು ಧರ್ಮಗಳ ನಡುವೆ ದ್ವೇಷ ಹೆಚ್ಚಿಸುವ ಈ ಪ್ರಕರಣ ಉಲ್ಭಣಗೊಂಡಿದೆ. ಇಲ್ಲಿನ ತಾಲೂಕು ಆಡಳಿತ ಧರ್ಮಗುರುಗಳ ಸಭೆ ಕರೆದು ಶಾಂತಿ ಕಾಪಾಡುವಕೆಲಸ ಮಾಡಬೇಕಿತ್ತು. ಇಲ್ಲೂ ಶಾಸಕರು, ಗೃಹಮಂತ್ರಿಗಳು ವಿಫಲವಾಗಿದ್ದಾರೆ ಎಂದರು.
ಪ.ಪಂ.ಅಧ್ಯಕ್ಷೆ ಶಬನಂ, ಮುಖಂಡರಾದ ಸುಂದರೇಶ್ ,ಹ.ಪದ್ಮನಾಭ್, ಧರ್ಮಗುರು ಇಲಿಯಾಸ್, ಹೊರಬೈಲು ರಾಮಕೃಷ್ಣ, ಕಿರಣ್ ಕುಮಾರ್,ಸುಷ್ಮಾ ಸಂಜಯ್, ಜೀನಾ ಡಿಸೋಜ, ಸುಮಾ ಸುಬ್ರಮಣ್ಯ, ಪ.ಪಂ.ಸದಸ್ಯರಾದ ಸುಶೀಲಾ ಶೆಟ್ಟಿ,ಮಂಜುಳಾ, ರತ್ನಾಕರ್ ಶೆಟ್ಟಿ,ಕೃಷ್ಣಮೂರ್ತಿ ಭಟ್ ಇದ್ದರು.

ವ್ಯಾಪಾರಕ್ಕೆ ಅನುವು ಮಾಡಿಕೊಡಲು ಮನವಿ

ಶಿವಮೊಗ್ಗ ನಗರದಲ್ಲಿ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಉಂಟಾದ ಈ ಅಹಿತಕರ ಪ್ರಕ್ಷುಬ್ದ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯಮಟ್ಟದಲ್ಲಿ ತಲೆ ದೋರಿರುವ ಹಿಜಾಬ್-ಕೇಸರಿ ವಿವಾದವು ಶಿವಮೊಗ್ಗ ನಗರಲ್ಲಿಯೂ ಕೆಲವು ಅಹಿತಕರ ಘಟನೆಗಳು ನಡೆದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣ ವಾಗಿರುವುದು ದುರದೃಷ್ಟಕರ. ವ್ಯಾಪಾರಸ್ತರು ಕೊರೊನಾ ಸಂಕಷ್ಟದಿಂದದ ಚೇತರಿಸಿಕೊಳ್ಳುತ್ತಿದ್ದು, ತಮ್ಮ ಉದ್ಯೋಗ, ಜೀವನೋಪಾಯಕ್ಕಾಗಿ ವ್ಯಾಪಾರ ಮಾಡಿಕೊಂಡು ಸುದಾರಿಸಿಕೊಳ್ಳುತ್ತಿರುವಾಗ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿರುವುದು ಒಳಗಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಬಿ. ವಿಜಯಕುಮಾರ್, ನಿರ್ದೇಶಕರಾದ ಎಸ್.ಎಸ್. ಉದಯಕುಮಾರ್, ಬಿ.ಆರ್ ಸಂತೋಷ್, ಪ್ರದೀಪ್ ವಿ. ಎಲಿ, ಗಣೇಶ ಎಂ. ಅಂಗಡಿ, ಗಾಂಧಿ ಬಜಾರ ವರ್ತಕರ ಸಂಘದ ಅಧ್ಯಕ್ಷ ವಿಜಯಕುಮಾರ್ ದಿನಕರ್, ತಾನಾಜಿ, ಕಬ್ಬಿಣ ಉಕ್ಕು ವ್ಯಾಪಾರಿಗಳ ಸಂಘ, ಫಾರ್ಮಸಿಸ್ಟ್ ಅಸೋಸಿಯೇಶನ್, ಫೈನಾನ್ಸ್ ಅಸೋಷಿಯೇಷನ್, ಜವಳಿ ವರ್ತಕರ ಸಂಘ, ನೆಹರೂ ರಸ್ತೆ ವರ್ತಕರ ಸಂಘ ಹಾಗೂ ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಒಟ್ಟು5 ಎಫ್‌ಐಆರ್ ದಾಖಲು

ಜಿಲ್ಲೆಯ ವಿವಿಧೆಡೆ ಅಹಿತಕರ ಘಟನೆಗಳು ನಡೆದಿದ್ದು, ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಬಾಪೂಜಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಲು ತೂರಾಟ ಮಾಡಿದ ಗ್ಯಾಂಗ್ ಮೇಲೆ ಹಾಗೂ ಈ ವೇಳೆ ಪೊಲೀಸ್ ವಾಹನ ಜಖಂಗೊಂಡಿದ್ದು ಸ್ವಯಂ ಪ್ರೇರಿತ ದೂರನ್ನು ಪೊಲೀಸರು ದಾಖಲಿಸಿದ್ದಾರೆ. ಟ್ಯಾಂಕ್ ಮೊಹಲ್ಲಾದಲ್ಲಿ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ಮತ್ತು ಶಿಕಾರಿಪುರದಲ್ಲಿ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿವೆ.

Ad Widget

Related posts

ವಿನಯ್ ಗುರೂಜಿ ಸಾರಥ್ಯದಲ್ಲಿ ಸಂಧಾನ, ಬಿಜೆಪಿ ಸೇರಿದ ಧನಂಜಯ ಸರ್ಜಿ

Malenadu Mirror Desk

ಶರಾವತಿ ಸಂತ್ರಸ್ಥರಿಗೆ ಭೂ ಹಕ್ಕು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

Malenadu Mirror Desk

 ಸಂಗೊಳ್ಳಿ ರಾಯಣ್ಣ ಪ್ರತಿಮೆ: ರಾಯಣ್ಣ ಅಭಿಮಾನಿಗಳ ಬಳಗ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.