ರಾಜ್ಯ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಫೆ.14 ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸಿಟಿ ರೈಲ್ವೇ ನಿಲ್ದಾಣದಿಂದ ಮೆರವಣಿಗೆಯಲ್ಲಿ ಹೊರಟು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ತಿಳಿಸಿದರು.
ಶಿವಮೊಗ್ಗ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರೈತರ ೧೩ ತಿಂಗಳ ಹೋರಾಟದ ಫಲವಾಗಿ ಶಾಸನ ಬದ್ಧವಾಗಿ ವಾಪಸ್ ಪಡೆದಿದೆ. ಆದರೆ, ಈ ಕಾಯ್ದೆಗಳಿಗೆ ಪೂರಕವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಒತ್ತಾಯಿಸಿ ಫೆ.14 ಕ್ಕೆ ರೈತ ಸಂಘದಿಂದ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬೆಂಗಳೂರು ಅಧಿವೇಶನದಲ್ಲಿ ವಾಪಸ್ ಪಡೆಯುವುದಾಗಿ ಹೇಳಿದ್ದರು. ಆದರೆ ಇನ್ನೂ ವಾಪಸ್ ಪಡೆದಿಲ್ಲ ಎಂದು ದೂರಿದರು.
ರೈತರಿಗೆ ರಾಷ್ಟ್ರೀಯ ವಿಪತ್ತಿನ ಅಡಿಯಲ್ಲಿ ಕೊಡಬೇಕಾಗಿದ್ದ ಬೆಳೆ ನಷ್ಟದ ಹಣವನ್ನು ಕೊಟ್ಟಿಲ್ಲ. ಬಗರ್ ಹುಕುಂ ಸಾಗುವಳಿ ಪತ್ರ ಕೊಟ್ಟಿಲ್ಲ. ಗ್ರಾಮೀಣಾಭಿವೃದ್ಧಿಗೆ ಕಳೆದ ವರ್ಷದ ಬಜೆಟ್‌ಗಿಂತ ಕಡಿಮೆ ಮೊತ್ತ ತೆಗೆದಿರಿಸಲಾಗಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ ನದಿ ಜೋಡಣೆ ಯೋಜನೆ ಅಕ್ಕ ಪಕ್ಕದ ರಾಜ್ಯಗಳಿಗೆ ಲಾಭವಾಗುತ್ತದೆ ಹೊರತೂ ನಮ್ಮ ರಾಜ್ಯಕ್ಕೆ ಯಾವುದೇ ಲಾಭವಿಲ್ಲ ಎಂದರು.
ಅನ್ನಭಾಗ್ಯ ಯೋಜನೆಗೆ ಬೇರೆ ರಾಜ್ಯದಿಂದ ಅಕ್ಕಿಯ ಆಮದು ನಿಲ್ಲಿಸಿ ನಮ್ಮ ರೈತ ರಿಂದಲೇ ಖರೀದಿಸಬೇಕು. ಪಂಪ್‌ಸೆಟ್‌ಗಳಿಗೆ 12 ಗಂಟೆಗಳ ಕಾಲ ತ್ರಿಫೇಸ್‌ವಿದ್ಯುತ್ ನೀಡಬೇಕು. ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರಿಗೆ ತೊಂದರೆ ಕೊಡಬಾರದು. ಹಕ್ಕು ಪತ್ರ ನೀಡಬೇಕು. ಹಾಲಿಗೆ ಲೀಟರ್ ಕನಿಷ್ಠ ದರ 40 ರೂ. ನಿಗದಿ ಮಾಡಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು, ಬೆಲೆ ಏರಿಕೆ ನಿಯಂತ್ರಿಸಬೇಕು. ಈ ಎಲ್ಲಾವಿಚಾರಗಳನ್ನು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಧಾನಸೌಧ ಮುತ್ತಿಗೆ ಚಳವಳಿ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರೈತರು, ಕೃಷಿ ಕೂಲಿ ಕಾರ್ಮಿಕರು ಮತ್ತು ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸಿ.ಚಂದ್ರಪ್ಪ, ಕೆ.ರಾಘವೇಂದ್ರ,ಟಿ.ಎಂ.ಚಂದ್ರಪ್ಪ ಮತ್ತಿತರರಿದ್ದರು.
ಬಿಜೆಪಿ ನೇತೃತ್ವದ ಸರ್ಕಾರ ರೈತರ ಜಮೀನು ಕಸಿದುಕೊಂಡು ಭೂ ಹೀನರನ್ನಾಗಿ ಮಾಡುವ ಉದ್ದೇಶ ದಿಂದಲೇ ಈ ಕಾಯ್ದೆಗಳನ್ನು ಜಾರಿಗೆ ತಂದಿದೆ. ರೈತ ವಿರೋಧಿ ಧೋರಣೆ ಮುಂದುವರಿಸಿದೆ. ಭತ್ತ, ಜೋಳ, ರಾಗಿ, ತೊಗರಿ ಖರೀದಿ ಕೇಂದ್ರಗಳನ್ನು ಮುಚ್ಚಿದ್ದು, ರೈತರು ತಾವು ಬೆಳೆದ ಬೆಳೆಯನ್ನು ಅರ್ಧ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ.
ಹೆಚ್.ಆರ್.ಬಸವರಾಜಪ್ಪ ಗೌರವಾಧ್ಯಕ್ಷರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ