ಕೋವಿಡ್ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಮತ್ತೆ ಶಾಲೆಗೆ ಸೇರಿಸುವ ಪ್ರಕ್ರಿಯೆಯಲ್ಲಿ ಎಲ್ಲಾ ಇಲಾಖೆಗಳು ಕೈ ಜೋಡಿಸಬೇಕು ಎಂದು ಶಿವಮೊಗ್ಗ. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ನೂತನ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಬಳಿಕ ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಸರಿಯಾಗಿ ಮಾರ್ಗದರ್ಶನ ಮಾಡುವ ಕಾರ್ಯವನ್ನು ಮಾಡಬೇಕಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ಕಾನೂನುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆಯಂತಹ ಕಾಯ್ದೆಗಳ ಬಗ್ಗೆ ಸರಿಯಾಗಿ ಅರಿವು ಇಲ್ಲದೆ, ಹಲವಾರು ಮಂದಿ ಸಮಸ್ಯೆಗೆ ತುತ್ತಾಗುತ್ತಾರೆ ಎಂದರು.
ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಇದು ಯಾವುದೇ ಇಲಾಖೆಗೆ ಸೀಮಿತವಲ್ಲ. ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರೂ ಸ್ಪಂದಿಸಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿ ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಡೆಸಲು ಈಗಾಗಲೇ ಸೂಚಿಸಲಾಗಿದ್ದು, ಈ ಗ್ರಾಮ ಸಭೆಗಳಲ್ಲಿ ಗ್ರಾಮದ ಮಕ್ಕಳ ಸಮಸ್ಯೆಗಳ ಬಗ್ಗೆ, ಅವರ ಅಗತ್ಯಗಳನ್ನು ಪೂರೈಸುವ ಬಗ್ಗೆ ಚರ್ಚೆ ನಡೆದು ಅನುಷ್ಟಾನಗೊಳಿಸುವ ಕಾರ್ಯ ಆಗಬೇಕಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಎಲ್ಲಾ ಶಾಲೆಗಳಲ್ಲಿ ಕಾನೂನು ಅರಿವು ಕ್ಲಬ್ ರೂಪಿಸಲಾಗುತ್ತಿದೆ. ಈ ಮೂಲಕ ವಾರದಲ್ಲಿ ಒಂದು ದಿನ ಮಕ್ಕಳ ಹಕ್ಕುಗಳ ಕುರಿತಾದ ಕಾನೂನುಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಗುವುದು. ಮೊದಲ ಹಂತದಲ್ಲಿ ಶಿಕ್ಷಕರಿಗೆ ಮೂಲಭೂತ ಕಾನೂನುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾಡಳಿತ ಹಾಗೂ ಡಾನ್‌ಬಾಸ್ಕೋ ಬಾಲಕಾರ್ಮಿಕರ ಮಿಷನ್ ಸಂಸ್ಥೆ ಜಂಟಿಯಾಗಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ, ಡಿವೈಎಸ್‌ಪಿ ಸಂತೋಷ್, ಡಿಡಿಪಿಯು ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕ ಜಿ.ಜಿ.ಸುರೇಶ್, ಜಂಟಿ ನಿರ್ದೇಶಕ ಅಶೋಕ್ ರೇವಣ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.