ಇದೊಂದು ಹೃದಯವಿದ್ರಾವಕ ಘಟನೆ, ಅನಿಶ್ಚಿತವಾದ ಈ ಬದುಕಿನಲ್ಲಿ ಯಾರು ಯಾವಾಗ ಇಹಲೋಕ ತ್ಯಜಿಸುತ್ತಾರೆ ಎಂಬುದು ಗೊತ್ತೇ ಆಗುವುದಿಲ್ಲ. ಇಂತಹ ಸಾವುಗಳು ಮತ್ತೆ ಮತ್ತೆ ಘಟಿಸುತ್ತಲೇ ಇರುತ್ತವೆ. ಚಿತ್ರದಲ್ಲಿರುವ ಈ ಮುದ್ದುಹುಡುಗಿಯ ಹೆಸರು ಚೈತ್ರಾ (26), ಎಲ್ಲ ಅಂದುಕೊಂಡಂತೆ ಆಗಿದ್ದರೆ ಕೆಲವೇ ತಾಸುಗಳಲ್ಲಿ ಅವಳು ಗಂಡನ ಮನೆಯಲ್ಲಿರಬೇಕಿತ್ತು. ಬದುಕಿನಲ್ಲಿ ಹಲವು ಕನಸುಗಳನ್ನಿಟ್ಟುಕೊಂಡಿದ್ದ ಈ ಮಧುಮಗಳು ಚೈತ್ರಾ ತನ್ನ ಮದುವೆ ಆರತಕ್ಷತೆಯಲ್ಲಿಯೇ ಕುಸಿದುಬಿದ್ದಿದ್ದಾಳೆ.ಮಗಳ ಮದುವೆಯ ಸಂಭ್ರಮದಲ್ಲಿದ್ದ ಇಡೀ ಕುಟುಂಬ ದಿಕ್ಕುತೋಚದಂತಾಗಿದೆ. ಗಂಡನೊಂದಿಗೆ ಬಾಳಿ ಬದುಕಬೇಕಿದ್ದ ಹುಡುಗಿ ಹಠಾತ್ ಆಗಿ ಮದುವೆ ಮಂಟಪದಲ್ಲಿಯೇ ಕುಸಿದು ಬಿದ್ದಿದ್ದಾಳೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಕೊಡಚೆರವು ಗ್ರಾಮದ ಕೃಷಿಕ ರಾಮಪ್ಪ ಮತ್ತು ಅಕ್ಕಮ್ಮರ ಏಕೈಕ ಪುತ್ರಿಯಾದ ಚೈತ್ರಾ ಎಂಎಸ್ಸಿ ಬಯೋಕೆಮಿಸ್ಟ್ರಿ ಮಾಡಿ ಕೈವಾರ ಬಳಿಯ ಬೈರವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಹೊಸಕೋಟೆಯ ಯುವಕನೊಂದಿಗೆ ಫೆಬ್ರವರಿ-6 ಮತ್ತು 7 ರಂದು ಶ್ರೀನಿವಾಸಪುರದ ಮಾರುತಿ ಸಭಾ ಭವನದಲ್ಲಿ ಮದುವೆ ನಡೆಯುತ್ತಿತ್ತು. ಫೆಬ್ರವರಿ 6 ರಂದು ಸಂಜೆ 6 ಗಂಟೆಗೆ ಆರತಕ್ಷತೆಗೆ ಸಿದ್ಧವಾಗಿ ವರನ ಜೊತೆ ಆಗಮಿಸಿದ ಚೈತ್ರಾ ರಾತ್ರಿ 9 ಗಂಟೆಯವರೆಗೂ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿದ್ದರು. ಆದರೆ 9 ಗಂಟೆ ಸುಮಾರಿಗೆ ದಿಢೀರನೇ ವೇದಿಕೆ ಮೇಲೆಯೇ ಚೈತ್ರಾ ಕುಸಿದುಬಿದ್ದಿದ್ದಾರೆ.
ಕೂಡಲೇ ಮದುವೆ ಕಾರ್ಯಕ್ರಮದಲ್ಲೇ ಇದ್ದ ವೈದ್ಯರು ಚೈತ್ರಾಳನ್ನು ಶ್ರೀನಿವಾಸಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದ್ದಾರೆ. ಅಲ್ಲಿಂದ ನೇರವಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆಗೆ ಬ್ರೈನ್ ಸ್ಟ್ರೋಕ್ ಆಗಿದೆ ಅನ್ನೋದು ತಿಳಿದುಬಂದಿದೆ. ನಂತರ ಸತತ ಐದು ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ವೈದ್ಯರು ಚೈತ್ರಾಳ ಬ್ರೈನ್‌ಡೆಡ್ ಎಂದು ತಿಳಿಸಿದ್ದಾರೆ.
ಮದುವೆ ಸಡಗರದಲ್ಲಿದ್ದ ಕುಟುಂಬಕ್ಕೆ ಆಕಾಶವೇ ಕಳಚಿ ತಲೆಯ ಮೇಲೆ ಒರಗಿದಂತಾಗಿದೆ. ಕ್ರೂರ ವಿಧಿ ಆ ಹುಡುಗಿಯ ಬಾಳು ಹಸನಾಗಲು ಬಿಡಲಿಲ್ಲ. ಆದರೆ ಕಣ್ಣೀರ ಕಡಲಲ್ಲಿದ್ದ ಚೈತ್ರಾ ಪೋಷಕರು ಮಗಳ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿ ಮಾದರಿಯಾಗಿದ್ದಾರೆ.
ಮಗಳನ್ನು ಕಳೆದುಕೊಂಡ ನೋವಿನಲ್ಲಿಯೂ ಆಕೆಯ ಅಂಗಾಂಗ ದಾನ ಮಾಡಿದ್ದರಿಂದ ಹತ್ತಾರು ಜನರಿಗೆ ಬದುಕು ನೀಡುವ ಚೈತ್ರಾ ಪೋಷಕರ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಈ ವಿಷಯ ಟ್ವೀಟ್ ಮಾಡಿದ್ದು, ಚೈತ್ರಾ ಸಾವಿಗೆ ಕಂಬನಿ ಮಿಡಿದಿದ್ದಾರೆ ಮತ್ತು ಪೋಷಕರ ನಿರ್ಧಾರಕ್ಕೆ ಶರಣು ಎಂದಿದ್ದಾರೆ.