ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ನಡುವೆಯೂ ಶಿವಮೊಗ್ಗ ಬಿ.ಎಚ್.ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯರುವ ಹಿಜಾಬ್ ಧರಿಸಲು ನಿರಾಕರಣೆ ಮಾಡಿದರೆಂದು ಹತ್ತನೇ ತರಗತಿ ಪೂರ್ವಸಿದ್ಧತಾ ಪರೀಕ್ಷೆಯನ್ನೇ ಬರೆಯದೆ ಹಿಂತಿರುಗಿದ್ದಾರೆ.
ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಂದ 13 ವಿದ್ಯಾರ್ಥಿನಿಯರಿಗೆ ನ್ಯಾಯಾಲಯದ ಆದೇಶ ಇರುವುದರಿಂದ ಹಿಜಾಬ್ ತೆಗೆದು ತರಗತಿಗೆ ಬರಲು ಸಿಬ್ಬಂದಿ ಸೂಚಿಸಿದರು. ಹತ್ತನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆಗೆ ಹಾಜರಾಗಬೇಕಿದ್ದ ಆ ವಿದ್ಯಾರ್ಥಿನಿಯರು ಹಿಜಾಬ್‌ಗೆ ಅವಕಾಶ ನೀಡಿದರೆ ಮಾತ್ರ ಪರೀಕ್ಷೆ ಬರೆಯುವುದಾಗಿ ಹೇಳಿದರು. ಈ ಸಂದರ್ಭ ಸ್ಥಳಕ್ಕೆ ಬಂದ ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿನಿಯರ ಮನವೊಲಿಸಿದರು. ಒಂದು ಹಂತದಲ್ಲಿ ಒಪ್ಪಿಕೊಂಡ ಅವರು, ಮನಸು ಬದಲಿಸಿ ಮನೆಗೆ ಮರಳಿದ್ದಾರೆ.
ಈ ನಡುವೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್.ಪಿ ಲಕ್ಷ್ಮೀಪ್ರಸಾದ್ ಅವರು ಶಿವಮೊಗ್ಗ ನಗರದ ಅನೇಕ ಶಾಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕೀಸಿದರು.
13 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೇಳಿದರು. ನ್ಯಾಯಾಲಯದ ಆದೇಶ ಇರುವ ಕಾರಣ ನಾವು ಅವಕಾಶ ನೀಡಲಿಲ್ಲ. ಎಷ್ಟು ಮನವೊಲಿಸಿದರೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದು ಪಟ್ಟು ಹಿಡಿದರು. ಶಾಲಾ ಮುಖ್ಯಸ್ಥರು ನಿರಾಕರಿಸಿದ ಬಳಿಕ ಅವರು ವಾಪಸ್ ಆದರು. ನಮ್ಮ ಸಲಹೆ ತಿರಸ್ಕರಿಸಿದ ವಿದ್ಯಾರ್ಥಿನಿಯರು ಮನೆಗೆ ಮರಳಿದರು. ಅವರು ಈಗಲೂ ಮನಸು ಬದಲಿಸಿ ಬಂದರೆ ಮಂಗಳವಾರ ಇದೇ ಪರೀಕ್ಷೆಯನ್ನು ಬರೆಯಲು ಅವಕಾಶ ಕೊಡುತ್ತೇವೆ. ನ್ಯಾಯಾಲಯದ ಆದೇಶ ಪಾಲನೆ ನಮ್ಮ ಕರ್ತವ್ಯವಾಗಿದೆ.
ರಮೇಶ್, ಡಿಡಿಪಿಐ, ಶಿವಮೊಗ್ಗ