ಆಸ್ಪತ್ರೆಗೆ ಯಾರೇ ರೋಗಿಗಳು ಬಂದರೂ ನಗುಮೊಗದಲ್ಲಿ ಅಟೆಂಡ್ ಮಾಡುತ್ತಿದ್ದ ಆಕೆಯ ಮಾತು ಮತ್ತು ನಿಷ್ಕಲ್ಮಶ ನಗುವಿನಿಂದಲೇ ರೋಗಿಯಲ್ಲಿ ಅರ್ಧ ಆತ್ಮ ವಿಶ್ವಾಸ ಮೂಡುತಿತ್ತು. ಅಮ್ಮನ ಅಕ್ಕರೆ ನೀಡುತ್ತಿದ್ದ ಆ ಪರಿಚಾರಕಿಯನ್ನು ಜವರಾಯ ಇದ್ದಕ್ಕಿದ್ದಂತೆ ಪರಲೋಕಕ್ಕೆ ಕರೆದೊಯ್ಯುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.
ಇದು ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಕೆ.ಟಿ.ಗಾನವಿಯ ಕರುಣಾಜನಕ ಕತೆ. ಇದೇ ಫೆ.೨೦ ರಂದು ಅಕ್ಕನ ಮದುವೆ ನಿಗದಿಯಾಗಿತ್ತು. ಇಡೀ ಮದುವೆ ಮನೆಯಲ್ಲಿ ನಗುವಿನ ಹಂದರ ಕಟ್ಟುವಷ್ಟು ಜೀವನೋತ್ಸಾಹ ಇದ್ದ ಹುಡುಗಿಯ ಮೇಲೆ ಕ್ರೂರ ವಿಧಿಯ ಕಾಕದೃಷ್ಟಿ ಬಿದ್ದಿದೆ. ಶುಕ್ರವಾರ ಎಂದಿನಂತೆ ಆಸ್ಪತ್ರೆಯಲ್ಲಿ ಲವಲವಿಕೆಯಿಂದ ಕೆಲಸ ಮಾಡುತ್ತಿದ್ದ ಗಾನವಿ ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಪ್ರಥಮ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ. ಅಲ್ಲಿನ ವೈದ್ಯರು ಶನಿವಾರ ಮತ್ತು ಭಾನುವಾರ ಚಿಕಿತ್ಸೆ ನೀಡಿದರೂ, ಬದುಕುಳಿಯುವ ಸಾಧ್ಯತೆ ಕಾಣದಾಗಿದ್ದರಿಂದ ವೈದ್ಯರು ಗಾನವಿಯ ಮೆದುಳು ನಿಷ್ಕ್ರಿಯವಾಗಿರುವ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಅಂಗಾಂಗ ದಾನ
ಪ್ರತಿದಿನವೂ ರೋಗಿಗಳಿಗೆ ಆತ್ಮವಿಶ್ವಾಸ ತುಂಬುತಿದ್ದ ಗಾನವಿಯನ್ನು ಕಳೆದುಕೊಂಡ ಕುಟುಂಬ ಆಕೆಯ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ತಾಯಿ ಮತ್ತು ಸೋದರಿ ದಾನ ಪತ್ರಕ್ಕೆ ಸಹಿ ಮಾಡಿದ್ದಾರೆ. ಬೆಂಗಳೂರಿನ ಇನ್ಸ್‌ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟೆರಾಲಜಿ ಅಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆಗೆ ಅಂಗಾಂಗ ದಾನ ಮಾಡಲಾಗಿದೆ. ಮಗಳ ಅಗಲಿಕೆಯ ನೋವಿನಲ್ಲಿಯೂ ಅಂಗಾಂಗ ದಾನಮಾಡಿ ನಾಲ್ಕಾರು ಜೀವಗಳಿಗೆ ನೆರವಾದ ಕುಟುಂಬ ಸದಸ್ಯರನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟರ್ ಮೂಲಕ ಅಭಿನಂದಿಸಿದ್ದಾರೆ. ಗಾನವಿಗೆ ಆಗಾಗ ತಲೆ ಸುತ್ತು ಬರುತಿತ್ತು ಎಂದು ಹೇಳಲಾಗಿದ್ದು, ಆಕೆ ತನ್ನ ನಿಧನ ನಂತರ ಅಂಗಾಂಗ ದಾನ ಮಾಡುವಂತೆ ಪತ್ರ ಬರೆದಿಟ್ಟಿದ್ದಳು ಎನ್ನಲಾಗಿದೆ. ಆದರೆ ಕುಟುಂಬ ಮೂಲಗಳು ಇದನ್ನು ದೃಢಪಡಿಸಿಲ್ಲ.
ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದ ಮಗಳು
ಚಿಕ್ಕಮಗಳೂರು ಜಿಲ್ಲೆ ಎನ್‌ಆರ್‌ಪುರ ತಾಲೂಕಿನ ಕಟ್ಟಿನಮಟ್ಟಿ ಹೊಸಕೊಪ್ಪ ಗ್ರಾಮದವರಾಗಿದ್ದ ಗಾನವಿಯದು ಚಿಕ್ಕ ಕೃಷಿ ಕುಟುಂಬ ಅಕ್ಕ -ತಂಗಿ ಇಬ್ಬರೂ ಹೊರಗಡೆ ದುಡಿಮೆ ಮಾಡುತ್ತಾ ಮನೆಗೆ ಆಧಾರವಾಗಿದ್ದರು. ಪ್ರೀತಿಯ ಮಗಳನ್ನು ಕಳೆದುಕೊಂಡು ಹೆತ್ತವರು ಮದುವೆ ಸಂಭ್ರಮದಲ್ಲಿದ್ದ ಅಕ್ಕನಿಗೆ ತಂಗಿಯ ಅಗಲಿಕೆ ಆಘಾತ ತಂದಿದೆ. ರೋಗಿಗಳ ಆರೈಕೆ ಮಾಡುತ್ತ ಜೀವನದಲ್ಲಿ ಬಹಳಷ್ಟು ಕನಸು ಕಟ್ಟಿಕೊಂಡಿದ್ದ ಗಾನವಿಗೆ ಆ ಅವಕಾಶ ಕೊಡದ ವಿಧಿ ಅಕಾಲಿಕವಾಗಿ ಕರೆದೊಯ್ದಿದೆ. ಇಡೀ ಕುಟುಂಬ ಮತ್ತು ಬಂಧುಬಳಗ ದುಃಖದ ಮಡುವಿನಲ್ಲಿದೆ.