ಶಿವಮೊಗ್ಗ,: ಜನವರಿ ೨೬ ರಂದು ರಾಯಚೂರಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಫೆ.೧೯ ರಂದು ವಿಧಾನ ಸೌಧ-ಹೈಕೋರ್ಟ್ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಹೇಳಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಈ ವಿಷಯ ತಿಳಿಸಿದರು. ಸಂವಿಧಾನ ವಿರೋಧಿ ಕೃತ್ಯ ಎಸಗಿದ ನ್ಯಾಯಾಧೀಶರ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರಕಾರದ ಈ ದಲಿತ ವಿರೋಧಿ ಕ್ರಮ ಖಂಡಿಸಿ ವಿಧಾನ ಸೌಧ ಮತ್ತು ಹೈಕೋರ್ಟ್ ಚಲೋ ಮಾಡುವ ಮೂಲಕ ಒತ್ತಡ ಹೇರುವ ಕೆಲಸವನ್ನು ಸಂಘಟನೆ ಮಾಡಲಿದೆ. ನ್ಯಾಯಾಧೀಶರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ರಾಜ್ಯದ ಎಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಬಾಬಾ ಸಾಹೇಬರ ಭಾವಚಿತ್ರ ಹಾಕಬೇಕು. ನ್ಯಾಯಾಲಯದ ಎಲ್ಲಾ ಹಂತದಲ್ಲಿ ಮೀಸಲಾತಿ ಜಾರಿಮಾಡಬೇಕು. ಸಂವಿಧಾನ ವಿರೋಧಿ ಹುಮ್ನಾಬಾದ್ ತಹಶೀಲ್ದಾರ್ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗುರುಮೂರ್ತಿ ಆಗ್ರಹಿಸಿದರು.
ಲಕ್ಷಾಂತರ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಶಿವಮೊಗ್ಗದಿಂದ ಸಾವಿರಾರು ಜನರು ಬೆಂಗಳೂರು ಚಲೊ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು ಗುರುಮೂರ್ತಿ ಹೇಳಿದರು.
ದಾವಣಗೆರೆಯಲ್ಲಿ ಸರ್ವಸದಸ್ಯರ ಸಭೆ
ಕರ್ನಾಟಕ ರಾಜ್ಯದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿಯ ಸರ್ವಸದಸ್ಯರ ಸಭೆಯು ಮಾ.೧೮ ಮತ್ತು ೧೯ರಂದು ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಭಾಭವನದಲ್ಲಿ ನಡೆಯಲಿದೆ ಎಂದು ಸಮಿತಿ ರಾಜ್ಯ ಸಂಚಾಲಕ ಗುರುಮೂತಿ ಹೇಳಿದರು. ಕೊರೊನ ಕಾರಣದಿಂದ ಮುಂದೂಡಲ್ಪಟ್ಟಿದ್ದ ಸಭೆಯನ್ನು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಬಸಪ್ಪ, ಅತ್ತಿಗುಂದ ಕರಿಯಪ್ಪ, ರಮೇಶ್ ಚಿಕ್ಕಮರಡಿ,ರಾಮು ಮತ್ತಿತರರು ಭಾಗವಹಿಸಿದ್ದರು.