ಕಷ್ಟಪಟ್ಟು ತೋಟ ಮಾಡಿದ್ದರು ಫಸಲು ಬಂದು ಬಡತನ ನೀಗೀತು ಎಂದು ಆ ಕುಟುಂಬ ಕನಸು ಕಾಣುತಿತ್ತು ಆದರೆ ಹಾಗಾಗಲಿಲ್ಲ. ನೂತನ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನ ವ್ಯಾಪ್ತಿಗೆ ತೋಟ ಬಂದಿತ್ತು. ಮಾರುಕಟ್ಟೆಯಲ್ಲಿ ಎಕರೆಗೆ ೨೫-೩೦ ಲಕ್ಷ ದರವಿದೆ. ಆದರೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಎಕರೆಗೆ ಕೇವಲ ೫ ಲಕ್ಷ ನಿಗದಿ ಮಾಡಿದೆ.
ಇದರಿಂದ ಬೇಸತ್ತ ಶಿಕಾರಿಪುರ ತಾಲೂಕು ಹಾರೋಗೊಪ್ಪದ ರೈತ ಅರುಣ್ ನಾಯ್ಕ(೩೫) ವಿಷ ಸೇವಿಸಿ ಬೆವರು ಬಸಿದು ಕಟ್ಟಿದ ತೋಟದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿವಮೊಗ್ಗ ಶಿಕಾರಿಪುರ ರೈಲ್ವೆ ಮಾರ್ಗಕ್ಕೆ ಪ್ರಾಥಮಿಕ ಹಂತದ ಸರ್ವೆ ಕಾರ್ಯ ಮುಗಿದಿದ್ದು, ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ನೀಡುವ ಪರಿಹಾರ ಕಾರ್ಯ ಮುಂದುವರಿದಿದೆ. ಶಿಕಾರಿಪುರ ತಾಲ್ಲೂಕು ಎಳೆನೀರು ಕೊಪ್ಪ ಗ್ರಾಮದಲ್ಲಿ ತಂದೆ ತಿಮ್ಮಾನಾಯ್ಕ ಹೆಸರಿನಲ್ಲಿರುವ ಸ.ನಂ. ೧೩/೧೩ ೧೪/೧೩ ರಲ್ಲಿ ಅರುಣ್ ನಾಯ್ಕ್ ಗೆ ಸೇರಿದ ಬೆಳೆದುನಿಂತ ಮೂರು ಎಕರೆ ಅಡಿಕೆ ತೋಟವಿತ್ತು. ಮೊದಲು ಬರೀ ಬೆದ್ಲು ಜಮೀನು ಹೋಗತ್ತೆ ತೋಟ ಹೋಗುವುದಿಲ್ಲ ಎಂದು ಕುಟುಂಬ ಅಂದುಕೊಂಡಿತ್ತು. ಆದರೆ ಸರ್ವೆ ಮಾಡಿದಾಗ ತೋಟವೂ ರೈಲ್ವೆ ಕಾಮಗಾರಿಗೆ ಸ್ವಾಧೀನವಾಗಿದ್ದು ಎಕರೆಗೆ ೫ ಲಕ್ಷ ನಿಗದಿಪಡಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಈ ವೇಳೆ ಅಧಿಕಾರಿಗಳ ಬಳಿ ಅರುಣ್, ಈ ಪರಿಹಾರ ರೈತರ ಜೀವನವನ್ನು ಮಣ್ಣು ಮಾಡುತ್ತೆ ಎಂದು ಅಧಿಕಾರಿಗಳ ಮುಂದೆ ಅಲವತ್ತುಕೊಂಡಿದ್ದ ಎನ್ನಲಾಗಿದೆ.
ಭೂಸ್ವಾಧೀನ ಅಧಿಕಾರಿಗಳಿದ ನಿರೀಕ್ಷಿತ ಉತ್ತರ ದೊರೆಯದ ಕಾರಣ ಮನನೊಂದು ತನ್ನದೇ ಅಡಿಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನು ಹೆಂಡತಿ ಇಬ್ಬರು ಚಿಕ್ಕಮಕ್ಕಳು, ತಂದೆ,ತಂದೆ ತಾಯಿ , ಒಬ್ಬ ತಮ್ಮ ಹಾಗೂ ಇಬ್ಬರು ತಂಗಿಯರನ್ನು ಅಗಲಿದ್ದಾನೆ.
ಆಧಾರವಾಗಿದ್ದ
ಅರುಣ್ ನಾಯ್ಕ್ ತಂದೆಗೆ ವಯಸ್ಸಾಗಿದ್ದು, ಮನೆಯ ವಹಿವಾಟು ನೋಡಿಕೊಂಡು ಒಡಹುಟ್ಟಿದವರನ್ನು ಓದಿಸುತ್ತಿದ್ದ. ಸಾಲ ಸೋಲ ಮಾಡಿ ಮೂರು ಎಕರೆ ತೋಟ ಮಾಡಿದ್ದ. ಇಂದಲ್ಲ ನಾಳೆ ಸಾಲ ತೀರಿಸಬಹುದು ಎಂದು ಕನಸು ಕಂಡಿದ್ದ. ಆದರೆ ರೈಲ್ವೆ ಮಾರ್ಗದ ಕಾಮಗಾರಿಗಾಗಿ ವಶಪಡಿಸಿಕೊಳ್ಳುತ್ತಿರುವ ಭೂಮಿಗೆ ಅವೈಜ್ಞಾನಿಕವಾಗಿ ದರ ನಿಗದಿ ಮಾಡಿರುವುದು ಒಬ್ಬ ರೈತನ ಆತ್ಮಹತ್ಯೆಗೆ ಕಾರಣವಾಗಿದೆ. ಕುಟುಂಬದ ಹಾಗೂ ಬಂಧುಗಳ ಆಕ್ರೋಶ ಮುಗಿಲು ಮುಟ್ಟಿತ್ತು. ಶಿಕಾರಿಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಪರೀತ ಸಾಲ ಮಾಡಿದ್ದರು. ರೈಲ್ವೆಗೆ ಜಮೀನು ಹೋಗುತ್ತಿದ್ದ ವಿಚಾರಕ್ಕೆ ಅಣ್ಣ ನೊಂದುಕೊಂಡಿದ್ದ. ಕಷ್ಟ ಪಟ್ಟು ಮಾಡಿದ ತೋಟ ಹೋಗುತ್ತದೆ ಎಂದು ಹೇಳುತಿದ್ದ. ಈಗ ಪರಿಹಾರವೂ ಕಡಿಮೆ ಅಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ
-ಮೃತನ ಸೋದರ