ಶಿವಮೊಗ್ಗ ನಗರದಲ್ಲಿ ಭಾನುವಾರ ರಾತ್ರಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸೋಮವಾರ ನಡೆದ ಶವಯಾತ್ರೆ ಸಂದರ್ಭ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣದಿಂದಾಗಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಮುಂಜಾಗ್ರತಾ ಕ್ರಮವಾಗಿ ಸೋಮವಾರ ರಾತ್ರಿಯಿಂದ ಬುಧವಾರ ಬೆಳಗಿನ ಜಾವ ೬ ಗಂಟೆತನಕ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುವ ಕಾರಣ ಶಿವಮೊಗ್ಗ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ಹತ್ಯೆಯಾದ ಹರ್ಷನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಪ್ರಖರ ಭಾಷಣ ಮತ್ತುಹೇಳಿಕೆಗೆ ಖ್ಯಾತಿವೆತ್ತ ಸಚಿವ ಈಶ್ವರಪ್ಪ ಅವರು ಹರ್ಷಕೊಲೆಯ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಹೊರಗಿನಿಂದ ಯಾರೊ ಬಂದು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಈ ಎಲ್ಲ ಆರೋಪ ಮತ್ತು ಪ್ರತಿಭಟನೆ ನಡುವೆ ಶಿವಮೊಗ್ಗ ಪೊಲೀಸರು ಕೊಲೆಗೆ ಸಂಬಂಧಿಸಿಂತೆ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು,ಅದರಲ್ಲಿ ಇಬ್ಬರನ್ನು ಅಧಿಕೃತವಾಗಿ ಬಂಧನ ಎಂದು ಪ್ರಕಟಿಸಿದ್ದಾರೆ.
ಬಂಧಿತ ಆರೋಪಿಗಳು ಶಿವಮೊಗ್ಗ ಬುದ್ದನಗರದ ಖಾಸಿಫ್(೩೦) ಹಾಗೂ ಸೈಯದ್ ನದೀಮ್ (೨೦) ಜೆಪಿ ನಗರ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಇಬ್ಬರು ಆರೋಪಿಗಳೊಂದಿಗೆ ಉಳಿದ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ಅಧಿಕೃತವಾಗಿ ಬಂಧನ ಎಂದು ಘೋಷಿಸಬೇಕಾಗಿದೆ. ಎಲ್ಲರೂ ಕೂಡಾ ಅನ್ಯಕೋಮಿನ ಆರೋಪಿಗಳೇ ಎನ್ನಲಾಗಿದೆ. ಹತ್ಯೆಯಾದ ಹರ್ಷನ ಮೇಲೂ ಕೋಮು ಪ್ರಚೋದನೆ, ಗಲಬೆ ಇತ್ಯಾದಿ ಕಾರಣದ ಮೇಲೆ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಧಾರ್ಮಿಕ ಭಾವನೆ ಕೆರಳಿಸುವ ವಿಚಾರ ಮತ್ತು ಸ್ಥಳೀಯವಾಗಿ ಇದ್ದ ವಿರೋಧದ ಕಾರಣಕ್ಕೆ ಕೊಲೆ ನಡೆದಿದೆ. ಕೊಲೆ ಪ್ರಕರಣದಲ್ಲಿ ಹೊರಗಿನ ಯಾವುದೇ ವ್ಯಕ್ತಿಗಳು ಭಾಗಿಯಾದ ಬಗ್ಗೆ ಸ್ಪಷ್ಟತೆ ಇಲ್ಲ ಎನ್ನಲಾಗಿದೆ.