ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಬೂದಿಮುಚ್ಚಿದ ಕೆಂಡದಂತಿದ್ದು, ನಗರದಾದ್ಯಂತ ನಿಷೇಧಾಜ್ಞೆ ಜಾರಿಮಾಡಲಾಗಿದ್ದು, ಹಳೆ ಶಿವಮೊಗ್ಗ ಭಾಗದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ.
ಗೃಹಸಚಿವ ಆರಗಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು
. ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕೊಲೆ ಆರೋಪಿಗಳ ಸುಳಿವು ಸಿಕ್ಕಿದೆ. ಅವರನ್ನು ಅತಿಶೀಘ್ರದಲ್ಲಿ ಪೊಲೀಸರು ಬಂಧಿಸಲಿದ್ದಾರೆ. ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಯಾರನ್ನೂ ಬಿಡುವುದಿಲ್ಲ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಿದ್ದೇವೆ ಎಂದು ಹೇಳಿದ್ದಾರೆ.
ಕೊಲೆಯಾದವನು ಹಿಂದೂ ಕಾರ್ಯಕರ್ತ ಆತನ ಮೇಲೂ ಒಂದೆರಡು ಪ್ರಕರಣಗಳು ಇದ್ದವು ಎಂಬ ಮಾಹಿತಿ ಇದೆ. ಪೊಲೀಸರ ತನಿಖೆಯಿಂದ ಸತ್ಯ ಮತ್ತು ಕೊಲೆಗೆ ನಿಖರವಾದ ಕಾರಣ ಯಾವುದೆಂದು ತಿಳಿಯಲಿದೆ. ಸಾರ್ವಜನಿಕರು ಭಾವೋದ್ವೇಗಕ್ಕೆ ಒಳಗಾಗದೆ ಶಾಂತಿ ಕಾಪಾಡಲು ನಮ್ಮೊಂದಿಗೆ ಸಹಕರಿಸಬೇಕು ಎಂದು ಹೇಳಿದರು
ಬೂದಿಮುಚ್ಚಿದ ಕೆಂಡ:
ಹಳೆ ಶಿವಮೊಗ್ಗದ ಗಾಂಧಿಬಜಾರ್, ರವಿವರ್ಮ ಬೀದಿ, ಸೀಗೆಹಟ್ಟಿ, ಆಜಾದ್‌ನಗರ, ಭಾರತಿ ಕಾಲೋನಿ ಸೇರಿದಂತೆ ಹಳೆಶಿವಮೊಗ್ಗ ಭಾಗದಲ್ಲಿ ಬಿಗುವಿನ ವಾತಾವರಣವಿದೆ. ಭಾನುವಾರ ರಾತ್ರಿ ಹರ್ಷ ಕೊಲೆಯಾದ ಬಳಿಕ ಸೀಗೆಹಟ್ಟಿ ಭಾರತಿ ಕಾಲೋನಿಯಲ್ಲಿ ಕಲ್ಲು ತೂರಾಟ ಕೂಡಾ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ. ಪೂರ್ವವಲಯ ಐಜಿ ತ್ಯಾಗರಾಜನ್ ನಗರದಲ್ಲಿ ಮೊಕ್ಕಾಂ ಹೂಡಿದ್ದು, ಎಸ್ಪಿ ಲಕ್ಷ್ಮೀ ಪ್ರಸಾದ್ ನೇತೃತ್ವದಲ್ಲಿ ವಿಶೇಷ ತನಿಖಾತಂಡ ರಚನೆ ಮಾಡಿದ್ದಾರೆ.
ಆರ್ಎಎಫ್ ಪಡೆ ಆಗಮನ:
ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ರ್‍ಯಾಪಿಡ್ ಆಕ್ಷನ್ ಫೋರ್ಸ್‌ಕೂಡಾ ಕರೆಸಿಕೊಳ್ಳಲಾಗಿದೆ.
ಹರ್ಷ ಎಂಬ ಯುವಕನ ಕೊಲೆ ಸಂಬಂಧ ಮಾಹಿತಿ ಪಡೆದಿದ್ದೇನೆ. ಸಿಎಂ ಮತ್ತು ಗೃಹ ಸಚಿವರೊಂದಿಗೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿ ಮತ್ತು ರಕ್ಷಣಾಧಿಕಾರಿಗೆ ಮಾತನಾಡಿ ಬಿಗಿ ಬಂದೋಬಸ್ತ್‌ಗೆ ಸೂಚಿಸಿದ್ದೇನೆ. ಪರಿಸ್ಥಿತಿ ಹತೋಟಿಯಲ್ಲಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ
-ನಾರಾಯಣಗೌಡ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ
ಹಿಂದೂಪರ ಸಂಘಟನೆಯ ಕಾರ್ಯಕರ್ತ ಹತ್ಯೆಯಾಗಿದ್ದಾನೆ. ಸಹಜವಾಗಿಯೇ ನಾವು ಭಾವಾವೇಗಕ್ಕೆ ಒಳಗಾಗುತ್ತೇವೆ. ಆತನ ಜೀವ ತಂದುಕೊಡಲಾಗದು. ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಿ ಆತನ ಸಾವಿಗೆ ನ್ಯಾಯಕೊಡಿಸುವುದಾಗಿ ಕುಟುಂಬಕ್ಕೆ ಭರವಸೆ ನೀಡಿದ್ದೇನೆ. ನಮ್ಮ ಪೊಲೀಸರು ಇದಕ್ಕೆ ಶಕ್ತರಾಗಿದ್ದಾರೆ
-ಆರಗ ಜ್ಞಾನೇಂದ್ರ, ಗೃಹ ಸಚಿವ