ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ. ನಾಲ್ಕು ಜನ ಹರ್ಷನ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಇಬ್ಬರು ಆರೋಪಿಗಳು ಅವರಿಗೆ ಸಹಕಾರ ನೀಡಿರುವ ಬಗ್ಗೆ ಮಾಹಿತಿ ಇದೆ. ಹೆಚ್ಚಿನ ತನಿಖೆಯಲ್ಲಿ ವಿಚಾರಣೆಯಿಂದ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಹಮದ್ ಖಾಸಿಫ್, ನದೀಮ್, ಆಸಿಫ್ ಉಲ್ಲಾಖಾನ್ ರಿಹಾನ್, ನಿಹಾನ್, ಆಫಾನ್ ಬಂಧಿತ ಆರೋಪಿಗಳಾಗಿದ್ದಾರೆ.
ನಗರದಲ್ಲಿ ಸಧ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ. ಮಂಗಳವಾರ ಎರಡು ಆಟೋ ಮತ್ತು ಬೈಕ್‌ಗಳಿಗೆ ಯಾರೊ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕೊಲೆ ಆರೋಪಿಗಳು ಎಲ್ಲರೂ ಶಿವಮೊಗ್ಗದವರೇ ಆಗಿದ್ದಾರೆ. ಪ್ರಕರಣದಲ್ಲಿ ಸುಮಾರು ೧೮ ಮಂದಿಯನನ್ನು ವಶಕ್ಕೆ ಪಡೆದಿದ್ದು,ಅಂತಿಮವಾಗಿ ಆರು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ನಾಲ್ಕು ಮಂದಿ ಹಿಂದೆಯೂ ವಿವಿಧ ಪ್ರಕರಣಗಳಲ್ಲಿ ಭಾಗಿಯಾದವರೇ ಎಂದು ಅವರು ಹೇಳಿದರು.
ಇನ್ನೆರಡು ದಿನ ಶಾಲಾ ಕಾಲೇಜು ರಜೆ:
ಶಿವಮೊಗ್ಗದಲ್ಲಿ ಪರಿಸ್ತಿತಿ ತಹಬಂದಿಗೆ ಬಂದಿದ್ದರೂ ಇಂದು ಮತ್ತೆ ಕೆಲವು ಕಡೆ ವಾಹನಗಳಿಗೆ ಬೆಂಕಿ ಹಾಕಿರುವ ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಮುಂದುವರಿಸಿದ್ದು, ಗುರುವಾರದವರೆಗೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ. ನಗರದಲ್ಲಿ ಕರ್ಫ್ಯೂ ಇರುವಾಗ ಶಾಲೆ,ಕಾಲೇಜು ನಡೆಸಲು ಆಗುವುದಿಲ್ಲ ಆದ್ದರಿಂದ ರಜೆ ಮುಂದುವರಿಯಲಿದೆ ಎಂದು ಹೇಳಿದರು.