ಶಿವಮೊಗ್ಗದಲ್ಲಿ ಸೋಮವಾರ ನಡೆದ ಘಟನೆಗೆ ಸಚಿವ ಈಶ್ವರಪ್ಪರ ಹೊಣೆ ಹೊರಬೇಕಿದೆ. ಘಟನೆಯಿಂದ ಆದಂತಹ ನಷ್ಟವನ್ನು ಅವರೇ ಭರಿಸಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಶಾಂತಿ ಸುವ್ಯವಸ್ಥೆ ಜೊತೆ ಆಟವಾಡುತ್ತಿರುವ ಈಶ್ವರಪ್ಪನವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿ ರುವ ಸಚಿವ ಈಶ್ವರಪ್ಪನವರ ನಡೆ ನಿಜಕ್ಕೂ ಖಂಡನೀಯ. ಅವರು ನೀಡುತ್ತಿರುವ ಹೇಳಿಕೆಗಳು ಕೂಡ ಪ್ರಚೋದನಕಾರಿಯಾಗಿವೆ ಎಂದರು.
ನೀವು ಶಾಸಕರಾಗಲು ಎಷ್ಟು ಹಿಂದೂಗಳ ಬಲಿಯಾಗಬೇಕು? ಹಿಂದೂಗಳ ರಕ್ಷಣೆಗೆ ನಮಗೆ ಮತ ಹಾಕಬೇಕೆಂದು ಮತ ಹಾಕಿಸಿ ಕೊಂಡಿದ್ದಾರೆ. ಈಗ ಅವರ ಹಿಂಬಾಲಕನ ಹತ್ಯೆ ಆಗಿದೆ. ಅವರ ಮನೆಯವರು ಲೈಫ್ ಥ್ರೆಟ್ ಇತ್ತು ಎಂದು ಹೇಳಿದ್ದಾರೆ. ಆದರೆ ಜೊತೆಗೆ ಇರುವವರಿಗೆ ರಕ್ಷಣೆ ಕೊಟ್ಟಿಲ್ಲ ಅಂದರೆ ನಾಗರೀಕರು ಹೇಗೆ ಸುರಕ್ಷಿತವಾಗಿರಲಿದ್ದಾರೆ ಎಂದು ಪ್ರಶ್ನಿಸಿದರು.
ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಬೇಕಿದೆ. ತಪ್ಪಿತಸ್ಥರ ಬಂಧನವಾಗ ಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ದೀಪಕ್‌ಸಿಂಗ್, ಶ್ಯಾಮ ಸುಂದರ್,ರಘು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿದವರು ಯಾರೂ ನಮ್ಮ ಜಿಲ್ಲೆಯವರು ಅಲ್ಲ ಎಂದು ಸಚಿವ ಈಶ್ವರಪ್ಪರವರು ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿಯೇ ಹೊರಗಿನವರು ಬಂದಿದ್ದರಿಂದ ಗಲಭೆ ಆಗಿದೆ ಎಂದು ಸಚಿವರೇ ಹೇಳುತ್ತಿದ್ದಾರೆ. ಸಚಿವರಿಗೆ ಮೊದಲೇ ಮಾಹಿತಿ ಇದ್ದರೆ ಅದನ್ನು ಏಕೆ ಪೊಲೀಸ್ ಇಲಾಖೆಗೆ ತಿಳಿಸಲಿಲ್ಲ .
–ಕೆ.ಬಿ ಪ್ರಸನ್ನ ಕುಮಾರ್, ಕಾಂಗ್ರೆಸ್ ವಕ್ತಾರ