ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷನ(೨೬)ನ ಕೊಲೆಯ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂಬ ಅನುಮಾನ ಮೂಡುತಿದ್ದು, ಈಗಾಗಲೇ ಆರೋಪಿಗಳನ್ನು ಬಂಧಿಸಿರುವ ಪೋಲಿಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.
ಕಟ್ಟರ್ ಹಿಂದುತ್ವವಾದಿಯಾಗಿದ್ದ ಹರ್ಷನಿಗೆ ಮೊದಲೇ ಜೀವಬೆದರಿಕೆ ಇತ್ತು. ಕೋಮು ಸೂಕ್ಷ್ಮ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರ್ಷ ಹಾಕಿದಾಗಿಂದ ಮುಸ್ಲಿಂ ಮೂಲಭೂತವಾದಿಗಳು ಆತನ ಮೇಲೆ ಕಣ್ಣಿಟ್ಟಿದ್ದರು. ಕೊಲೆ ಆರೋಪದಲ್ಲಿ ಬಂಧಿತನಾಗಿರುವ ಖಾಸಿಫ್‌ನೊಂದಿಗೆ ಒಂದೆರಡು ಬಾರಿ ಮುಖಾಮುಖಿಯೂ ಆಗಿತ್ತು ಎನ್ನಲಾಗಿದೆ. ಸೀಗೆಹಟ್ಟಿ ಸೇರಿದಂತೆ ಶಿವಮೊಗ್ಗದಲ್ಲಿ ನಡೆಯುವ ಯಾವುದೇ ಹಿಂದೂಪರ ಹೋರಾಟಗಳಲ್ಲಿ ಆತ ಮುಂಚೂಣಿಯಲ್ಲಿದ್ದ. ಭಾರತಿ ಕಾಲೋನಿ ಮತ್ತು ಕ್ಲಾರ್ಕ್‌ಪೇಟೆ ಹುಡುಗರ ನಡುವೆ ನಡೆಯುತ್ತಿದ್ದ ಕಿರಿಕ್‌ಗಳಲ್ಲಿಯೂ ಹರ್ಷ ಕೆಲವರಿಗೆ ಖಡಕ್ ಸಂದೇಶ ನೀಡಿದ್ದ ಈ ಎಲ್ಲಾ ಕಾರಣದಿಂದಲೇ ಆತನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆನ್ನಲಾಗಿದೆ.
ಹರ್ಷನ ಚಲನವಲನದ ಮೇಲೆ ನಿಗಾ
ಹರ್ಷನ ಕೊಲೆಗೆ ಆರೋಪಿಗಳು ಬಹಳ ಕಾಲದಿಂದಲೇ ಸ್ಕೆಚ್ ಹಾಕಿದ್ದಾರೆ. ಆಸಿಫ್ ಎಂಬಾತ ಜೈಲಿನಿಂದ ಬರುವ ತನಕ ಕಾದು ಹೊಡೆಯಲಾಗಿದೆ. ಖಾಸಿಫ್ ಎಂಬಾತನ ಮೇಲೂ ಹಲವು ಪ್ರಕರಣಗಳಿದ್ದವು. ಹರ್ಷ ಯಾವತ್ತೂ ಸ್ನೇಹಿತರ ಜೊತೆ ಇರುತ್ತಿದ್ದ. ಆತ ಒಂಟಿಯಾಗಿರುತಿದ್ದುದೇ ಕಡಿಮೆ ಈ ಕಾರಣದಿಂದ ಆರೋಪಿಗಳು ಹರ್ಷನನ್ನು ಹಲವು ದಿನಗಳಿಂದ ಫಾಲೋ ಮಾಡಿದ್ದಾರೆ. ಒಂದು ವಾರದ ಹಿಂದಿನಿಂದಿಲೂ ಅಪರಿಚಿತ ವಾಹನ ಮತ್ತು ವ್ಯಕ್ತಿಗಳು ಭಾರತಿ ಕಾಲೋನಿಯಲ್ಲಿ ಅಡ್ಡಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ವಿಡಿಯೊ ಕಾಲ್ ಮಾಡಿದ ಹುಡುಗಿಯರು ಯಾರು ?
ಹರ್ಷ ಕೊಲೆಯಾದ ದಿನ ಆತನಿಗೆ ಇಬ್ಬರು ಹುಡುಗಿಯರು ವಿಡಿಯೋ ಕಾಲ್ ಮಾಡಿ ನಮಗೆ ಸ್ವಲ್ಪ ತೊಂದರೆಯಿದೆ ನಿಮ್ಮ ಸಹಕಾರ ಬೇಕು ಎಂದು ಕರೆ ಮಾಡಿದ್ದರು ಎಂದು ಮೃತ ಹರ್ಷನ ಆಪ್ತ ಮಿತ್ರನೊಬ್ಬ ಹೇಳಿದ್ದಾನೆ. ವಿಡಿಯೋ ಕಾಲ್ ಮಾಡಿದವರನ್ನು ತೋರಿಸಿ ಇವರು ನಿಮಗೆ ಗೊತ್ತೇ ಎಂದು ಸ್ನೇಹಿತರಿಗೆ ಹರ್ಷ ಕೇಳಿದ್ದನಂತೆ. ಈ ರೀತಿ ಹುಡುಗಿಯರಿಂದ ಸಹಾಯ ಕೇಳಿ ಹರ್ಷನನ್ನು ಒಂಟಿಯಾಗಿ ಬರುವಂತೆ ತಂತ್ರ ರೂಪಿಸಿರಬಹುದು ಎಂಬ ಅನುಮಾನವೂ ಈಗ ಪೊಲೀಸರ ಮುಂದಿದೆ.
ಜೈಲಲ್ಲಿಯೇ ಸ್ಕೆಚ್ ಸಾಧ್ಯತೆ:
ಹರ್ಷನ ಕೊಲೆಗೆ ಕೋಮುಗಲಭೆ ಮತ್ತು ಕೊಲೆ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೆಲವರು ಸೇರಿ ಹರ್ಷನ ಕೊಲೆಗೆ ಪ್ಲಾನ್ ರೂಪಿಸಿರುವ ಬಗ್ಗೆಯೂ ವದಂತಿಯಿದೆ. ಖಾಸಿಫ್ ಅಪರಾಧ ಹಿನ್ನೆಯಲ್ಲಿರುವಾತನಾಗಿದ್ದು, ಆತ ಜೈಲಿನಿಂದ ಆಸಿಫ್ ಬಂದ ಮೇಲೆ ಪ್ಲಾನ್ ಕಾರ್ಯಗತ ಮಾಡಿದ್ದಾನೆ ಎನ್ನಲಾಗಿದೆ.
ಯಾರಿದ್ದಾರೆ ಹಿನ್ನೆಲೆಯಲ್ಲಿ ?
ಹರ್ಷನ ಕೊಲೆ ಹಿಂದೆ ಮುಸ್ಲಿಂ ಮೂಲಭೂತವಾದಿಗಳಿದ್ದರೆ, ಈ ಕೊಲೆಯ ಹಿಂದೆ ದೊಡ್ಡ ಮಟ್ಟದ ಮತಾಂಧರ ಕೈವಾಡ ಇರುವ ಶಂಕೆಯಿದೆ. ಎಲ್ಲರೂ ಸ್ಥಳೀಯ ಆರೋಪಿಗಳೇ ಆಗಿದ್ದರಿಂದ ಕೊಲೆಗೆ ಸ್ಥಳೀಯ ಕಾರಣವೂ ಇರಬಹುದು. ಆದರೆ ಆರೋಪಿಗಳು ಆರ್ಥಿಕವಾಗಿ ಗಟ್ಟಿಯಾದವರಲ್ಲದ ಕಾರಣ ಹರ್ಷನ ಕೊಲೆಗೆ ಯಾರೊ ಸುಪಾರಿ ಕೊಟ್ಟಿದ್ದರೇ ಎಂಬ ಅನುಮಾನವು ಪೊಲೀಸರಿಗಿದೆ ಎನ್ನಲಾಗಿದೆ. ಈ ಕೊಲೆಯ ಹಿಂದೆ ದೊಡ್ಡ ಮಟ್ಟದ ಹಣಕಾಸಿನ ವ್ಯವಹಾರ ನಡೆದಿರಲೂ ಬಹುದು ಎನ್ನಲಾಗಿದೆ.
ಈ ನಡುವೆ ಆರೋಪಿ ನದೀಂ ತಾಯಿ ನನ್ನ ಮಗ ಎಲ್ಲೂ ಹೋಗಿರಲಿಲ್ಲ ಮನೆಯಲ್ಲಿ ಇದ್ದ ಎಂದಿದ್ದಾರೆ. ಆದರೆ ಈ ಕೊಲೆಯ ಷಡ್ಯಂತ್ರ ರೂಪಿಸುವಲ್ಲಿ ನದೀಂ ಪಾತ್ರವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ಗಂಭೀರ
ರಾಜ್ಯ ಸರಕಾರ ಹರ್ಷನ ಕೊಲೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್, ಕೆ.ಎಸ್.ಈಶ್ವರಪ್ಪ, ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಹಿಂದೂ ಸಂಘಟನೆಗಳ ಮುಖಂಡರು ಭೇಟಿ ನೀಡಿದ್ದಾರೆ. ಧಾರ್ಮಿಕ ಮುಖಂಡರು ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇನ್ನೂ ಅನೇಕರು ಭೇಟಿ ನೀಡಲಿದ್ದಾರೆ. ರಾಜ್ಯದ ಅನೇಕ ಕಡೆ ಪ್ರತಿಭಟನೆ ನಡೆಯುತ್ತಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯಸರಕಾರವೂ ಹರ್ಷಕೊಲೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸರಿಯಾದ ತನಿಖೆಗೆ ನಡೆದು ಕೊಲೆಯ ಹಿಂದಿನ ಷಡ್ಯಂತ್ರ ಬಯಲಾಗಬೇಕಿದೆ.
ಹರ್ಷ ಕುಟುಂಬದ ಜತೆ ಬಿಜೆಪಿ ಮತ್ತು ಸರಕಾರ ಇದೆ. ತಪ್ಪಿತಸ್ಥರ ಮೂಲವನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ಕೊಡಿಸುತ್ತೇವೆ. ಹಿಂದುತ್ವಕ್ಕಾಗಿ ಜೀವಕೊಟ್ಟ ಹರ್ಷನ ಕುಟುಂಬದ ಜತೆ ಇಡೀ ಪರಿವಾರ ನಿಲ್ಲಲಿದೆ
ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ