ರಾಜ್ಯದ ವಿವಿಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಕಲ್ಪಿಸಲು ಶೈಕ್ಷಣಿಕ ಒಪ್ಪಂದ: ಡಾ. ಅಶ್ವತ್ಥ ನಾರಾಯಣ
ಸಾಂಸ್ಕೃತಿಕ, ಸಾಹಿತ್ಯಿಕ ಶ್ರೀಮಂತಿಕೆಯುಳ್ಳ ಕರ್ನಾಟಕದ ಸ್ಥಳೀಯ ವಿಶ್ವವಿದ್ಯಾಲಯಗಳಲ್ಲಿನ ಕಲಿಕೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಿದ್ದು, ಈ ಯೋಜನೆಯ ಭಾಗವಾಗಿ ಅಮೇರಿಕಾದ ಅಥೆನ್ಸ್ ಸ್ಟೇಟ್ ವಿವಿ ಮತ್ತು ಕುವೆಂಪು ವಿವಿಗಳೊಂದಿಗೆ ಶೈಕ್ಷಣಿಕ ಒಪ್ಪಂದ ಏರ್ಪಡಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ್ ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಹೊಸ ಸಿಂಡಿಕೇಟ್ ಸಭಾಂಗಣದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಆನ್‌ಲೈನ್ ಮೂಲಕ ನಡೆದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ಕುವೆಂಪು ವಿಶ್ವವಿದ್ಯಾಲಯ ಮತ್ತು ಅಮೇರಿಕಾದ ಅಥೆನ್ಸ್ ಸ್ಟೇಟ್ ವಿಶ್ವವಿದ್ಯಾಲಯಗಳ ತ್ರಿಸದಸ್ಯ ಶೈಕ್ಷಣಿಕ – ಸಂಶೋಧನಾ ಒಪ್ಪಂದದ ಸಹಿ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕದ ನೆಲದಲ್ಲಿನ ವಿವಿಗಳಲ್ಲಿ ಕಲಿತ ವಿದ್ಯಾರ್ಥಿಗಳು ಈಗಾಗಲೇ ಅಮೇರಿಕಾದ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಪ್ರತಿಯೊಂದು ಅಮೇರಿಕಾದ ಕಂಪನಿಯು ಭಾರತದೊಂದಿಗೆ ಆಳವಾದ ಸಂಬಂಧ ಹೊಂದಿವೆ. ಇದನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಹಂತದಿಂದಲೇ ಕೊಡುಕೊಳ್ಳುವಿಕೆಯ ಪ್ರಕ್ರಿಯೆ ಆರಂಭಿಸಬೇಕಿದೆ. ಕುವೆಂಪು ವಿವಿ ಮತ್ತು ಅಥೆನ್ಸ್ ಸ್ಟೇಟ್ ವಿವಿಗಳ ನಡುವಿನ ಶೈಕ್ಷಣಿಕ-ಸಂಶೋಧನಾ ಒಪ್ಪಂದ ಈ ನಿಟ್ಟಿನಲ್ಲಿ ಒಂದು ಆರಂಭ ಮಾತ್ರವಾಗಿದ್ದು, ಪ್ರತಿಭಾನ್ವಿತ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಸುವ ಕಡೆಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ್ಷರಾದ ಪ್ರೊ. ತಿಮ್ಮೇಗೌಡ ಮಾತನಾಡಿ, ಹೊಸ ಶಿಕ್ಷಣ ನೀತಿಯು ಕರ್ನಾಟಕದ ಯುವ ಸಮುದಾಯದಲ್ಲಿ ಜ್ಞಾನ, ಕೌಶಲ್ಯಗಳು ಹಾಗೂ ಚಿಂತನೆಗಳ ಉದ್ದೀಪಿಸಿ ಉದ್ಯೋಗ ಜಗತ್ತಿಗೆ ನೀಡುವ ಗುರಿ ಹೊಂದಿದೆ. ಈ ಒಪ್ಪಂದವು ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಸಾಮರ್ಥ್ಯ ವೃದ್ಧಿ, ಬಹುಶಿಸ್ತೀಯ ಶಿಕ್ಷಣ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದರು.
ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ-ಶಿಕ್ಷಕರ ಪರಸ್ಪರ ವಿನಿಮಯ, ಸಂಶೋಧನಾ ಚಟುವಟಿಕೆಗಳಲ್ಲಿನ ಸಹಕಾರ, ಉಭಯ ಸಂಸ್ಥೆಗಳಿಂದ ವಿಶೇಷ ವಿಷಯಗಳ ಮೇಲೆ ಪದವಿಗಳ ಆರಂಭ ಕಾರ್ಯಕ್ರಮಗಳು ಕುವೆಂಪು ವಿವಿ ಮತ್ತು ರಾಜ್ಯಕ್ಕೆ ಬೌದ್ಧಿಕ ನಾಯಕತ್ವ ವಹಿಸುವ ಅವಕಾಶಗಳನ್ನು ಒದಗಿಸಲಿದೆ ಎಂದರು.
ಕರ್ನಾಟಕ ಉನ್ನತ ಶಿಕ್ಷಣ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆಯ ಹೊಸ ಶಿಕ್ಷಣ ನೀತಿ ಕಾರ್ಯಪಡೆಯ ಉಪಾಧ್ಯಕ್ಷ ತಾಂಡವಗೌಡ, ಕುವೆಂಪು ವಿವಿ ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ್ ಹಾಗೂ ಅಲಬಾಮ ಸೆನೆಟರ್ ಆರ್ಥರ್ ಓರ್, ಅಲಬಾಮ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಡಾ. ಜೇಮ್ಸ್ ಇ. ಪರ್ಸೆಲ್, ಅಥೆನ್ಸ್ ವಿವಿಯ ಉಪಾಧ್ಯಕ್ಷ ಡಾ. ಕ್ಯಾಥರೀನ್ ವೆಲ್‌ಬರ್ಗ್, ಸೇರಿದಂತೆ ಇತರ ತಜ್ಞರು, ಸದಸ್ಯರು ಹಾಜರಿದ್ದರು.
ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಆಶಯಗಳನ್ನು, ಇಲ್ಲಿನ ಸಂಶೋಧನಾ ಚಟುವಟಿಕೆಗಳನ್ನು, ಉದ್ದೇಶಗಳನ್ನು ಅಮೇರಿಕಾದ ವಿದ್ಯಾರ್ಥಿಗಳು-ಉಪನ್ಯಾಸಕರಲ್ಲಿ ಜನಪ್ರಿಯಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ- ಸಂಶೋಧನಾ ಒಪ್ಪಂದದ ಮೂಲಕ ಹೊಸಕಲಿಕೆಗಳನ್ನು ಕಲಿಯಲು ಉತ್ಸುಕರಾಗಿದ್ದೇವೆ.
–ಡಾ. ಫಿಲಿಪ್ ವೇ,ಅಧ್ಯಕ್ಷರು,ಅಥೆನ್ಸ್ ಸ್ಟೇಟ್ ವಿಶ್ವವಿದ್ಯಾಲಯ.