ಶಿವಮೊಗ್ಗ ಜಿಲ್ಲೆ ಸಾಗರ ಸಮೀಪದ ಸಿರಿವಂತೆಯಲ್ಲಿ ನೆಲೆ ನಿಂತು ತಮ್ಮ ಹಸೆ ಚಿತ್ತಾರ, ದೇಶೀ ಚಿತ್ರಕಲೆ ಮತ್ತು ಮಲೆನಾಡಿನ ದೀವ ಕಲಾ ಸಂಸ್ಕೃತಿಯ ಉಳಿಸಿ ಬೆಳೆಸುತ್ತಾ ಚಿತ್ತಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಚಿತ್ರಸಿರಿ ಗೌರಮ್ಮ ಮಂಗಳವಾರ ರಾತ್ರಿ ನಿಧನರಾದ
ತಮ್ಮ ಪತಿ ಚಿಂತಕ ಸಿರಿವಂತೆ ಚಂದ್ರಶೇಖರ್ ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಜಾರಿ ಬಿದ್ದಿದ್ದ ಗೌರಮ್ಮ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಆಪರೇಷನ್ ಕೂಡಾ ಮಾಡಲಾಗಿತ್ತು. ಮೆದುಳಿಗೆ ತೀವ್ರ ಪೆಟ್ಟು ಬಿದ್ದ ಕಾರಣ ಚೇತರಿಸಿಕೊಳ್ಳದ ಗೌರಮ್ಮ ಇಹಲೋಕ ತ್ಯಜಿಸಿದ್ದಾರೆ. ಅವರು ಪತಿ ಸಿರಿವಂತೆ ಚಂದ್ರಶೇಖರ್, ಇಬ್ಬರು ಗಂಟು ಮಕ್ಕಳು ಮೊಮ್ಮಗು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸಿರಿವಂತೆ ಚಂದ್ರಶೇಖರ್ ಸಾಧನೆಗೆ ಪ್ರೇರಕ ಶಕ್ತಿ ಮತ್ತು ತಾಯಿಬೇರಿನಂತೆ ಕೆಲಸ ಮಾಡಿದ್ದ ಕೀರ್ತಿ ಗೌರಮ್ಮರಿಗೆ ಸಲ್ಲುತ್ತದೆ. ಮೃದುಭಾಷಿಯಾಗಿದ್ದ ಅವರು ಯಾವತ್ತೂ ಕುಂಚದಜೊತೆ ಮಾತಾಡಿದ್ದೇ ಹೆಚ್ಚು. ತಮ್ಮ ದೇಶಿ ಚಿತ್ತಾರ, ಭತ್ತದ ತೆನೆಯ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳ ಕಾರಣದಿಂದ ರಾಜ್ಯದ ಕಲಾಪ್ರೇಮಿಗಳನ್ನು ಸಿರಿವಂತೆಯ ಚಿತ್ರಸಿರಿಗೆ ಸೆಳೆಯುವಲ್ಲಿ ಗೌರಮ್ಮ ಪಾತ್ರ ದೊಡ್ಡದಾಗಿತ್ತು. ಓದು, ಚಿಂತನೆಗಳ ನಡುವೆ ಹಸೆ ಚಿತ್ತಾರದೊಂದಿಗೆ ತೊಡಗಿಸಿಕೊಂಡ ಕುಟುಂಬಕ್ಕೆ ಬೇರು ಗೌರಮ್ಮ ಆಗಿದ್ದರು. ಅವರ ಕೈಯಲ್ಲರಳಿದ ಹಸೆಚಿತ್ತಾರ ,ಭತ್ತದ ತೋರಣಗಳು ದೇಶ ವಿದೇಶಗಳಲ್ಲಿ ಮನೆಗಳನ್ನ ಸಿಂಗರಿಸಿವೆ. ಹಸೆಯ ದೇಶೀ ಪ್ರತಿಭೆ ಕಣ್ಮರೆ ಆದದ್ದು ನಾಡಿಗಾದ ನಷ್ಟ.
ನೇತ್ರದಾನ:
ಸದಾ ಸಮಾಜಮುಖಿಯಾಗಿ ಚಿಂತಿಸುವ ಚಂದ್ರಶೇಖರ್ ಅವರು ತಮ್ಮ ಪತ್ನಿಯ ಇಚ್ಚೆಯಂತೆ ಅವರ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಆ ಮೂಲಕ ಕಣ್ಣಿಲ್ಲದವರ ಬಾಳಿಗೆ ಬೆಳಕಾಗಿದ್ದಾರೆ.
ಅಂತ್ಯಕ್ರಿಯೆ :
ಗೌರಮ್ಮ ಅವರ ಅಂತ್ಯಕ್ರಿಯೆ ಗುರುವಾರ ಸಿರಿವಂತೆಯಲ್ಲಿ ನಡೆಯಿತು. ಈ ಸಂದರ್ಭ ಸುತ್ತಲ ಗ್ರಾಮಸ್ಥರು,ಚಿತ್ರಸಿರಿ ಅಭಿಮಾನಿಗಳು. ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ, ಚಿಂತಕ ಡಾ.ಮೋಹನ್ ಚಂದ್ರಗುತ್ತಿ, ಡಾ.ಶಿವರಾಂ, ಶಾಂತಮೂರ್ತಿ ಮತ್ತಿತರರು ಹಾಜರಿದ್ದು ಚಂದ್ರಶೇಖರ್ ಕುಟುಂಬಕ್ಕೆ ಸಾಂತ್ವನ ಹೇಳಿದರು
ಗೌರಮ್ಮರ ಚಿತ್ರಕೃಪೆ : ಹರ್ಷಕುಮಾರ್ ಕುಗ್ವೆ
ದೀವರ ಹಸೆ,ಹಾಡು ಕುರಿತಾದ ಕುತೂಹಲ ಆಸಕ್ತಿ ಇದ್ದವರಿಗೆ ಒಮ್ಮೆ ಚಂದ್ರಣ್ಣನವರ ಮನೆಗೆ ಭೇಟಿಕೊಡಬೇಕೆಂದು ಅಂದು ಕೊಳ್ಳದೆ ಇರಲಾರರು ..ಹಾಗಂದು ಕೊಂಡು ಅವರ ಮನೆಗೆ ಹೋದರೆ ಅದೊಂದು ಜೀವಂತ ವಸ್ತುಸಂಗ್ರಹಾಲಯ .ಇಡೀ ದೀವರ ಸಂಸ್ಕೃತಿಯ ಬಹುದೊಡ್ಡ ಆಸ್ತಿ ಅದು….” ಅವರ ಮನೆಗೆ ಹೋದವರು ಆತಿಥ್ಯದ ಆ ಸವಿಯನ್ನು ಉಂಡು ಬಂದವರೆ….ಚಂದ್ರಣ್ಣ ಮಾತಿಗೆ ಕುಳಿತರೆ ಎದುರಿಗೆ ಕುಳಿತವರು ಚಿಕ್ಕಮಕ್ಕಳೆಂಬಂತೆ ಅತಿ ಸೂಕ್ಮ ಚಿತ್ತಾರದ ಎಳೆಗಳನ್ನು ಅರ್ಥ ಮಾಡಿಸುತ್ತಿದ್ದರೆ ಅಷ್ಟೇ ಪ್ರೀತಿ ಗೌರಕ್ಕ ಕೇಳುತ್ತಾ …ಒಂದು ಗುರುಕುಲದ ವಾತಾವರಣವನ್ನೇ ಸೃಷ್ಟಿಸುತ್ತಿದ್ದರು…ಊರಿಗೆ ಬಂದಾಗ ಮೂರ್ನಾಲ್ಕು ಬಾರಿ ಮನೆಗೆ ಹೋಗಿ ಅವರೊಂದಿಗೆ ಕಾಲ ಕಳೆಯುವ ಭಾಗ್ಯ ನಮ್ಮದಾಗಿತ್ತು. ಗೌರಕ್ಕ ಚಿತ್ರಸಿರಿಯ ಪ್ರತಿಯೊಂದು ತೂಗು ಹಾಕಿದ ಚಿತ್ರದ ಎಳೆಯಲ್ಲಿದ್ದಾರೆ…ಅವರ ನೆನಪು ಸದಾ ನಮ್ಮೊಂದಿಗಿರಲಿ….ಅವರ ಆತ್ಮಕ್ಕೆ ಶಾಂತಿ ಸಿಗಲಿ….ನೋವನ್ನು ಸಹಿಸುವ ಶಕ್ತಿ ಕುಟುಂಬಕ್ಕೆ ಭಗವಂತ ನೀಡಲಿ
–ಎಂ.ಜಿ.ಅಣ್ಣಪ್ಪ, ಕಾಗೋಡು
ಗೌರಕ್ಕ ಮೌನವಾಗಿಯೇ ಪ್ರೀತಿಯ ನಗುವಿನಲ್ಲೇ ಎಲ್ಲರನ್ನೂ ಗೆಲ್ಲುತ್ತಿದ್ದರು.
ಅವರ ಕೈಯಲ್ಲರಳಿದ ಹಸೆಗಳು,ಭತ್ತದ ತೋರಣಗಳು ದೇಶ ವಿದೇಶಗಳಲ್ಲಿ ಮನೆಗಳನ್ನ ಸಿಂಗರಿಸಿವೆ.ಹಸೆಯ ದೇಶೀ ಪ್ರತಿಭೆ ಕಣ್ಮರೆ ಆದದ್ದು ನಾಡಿಗಾದ ನಷ್ಟ.
ವೀರಭದ್ರ ಸೂರುಗುಪ್ಪೆ, ಸಾಗರ