ಶಿವಮೊಗ್ಗ ನಗರದಲ್ಲಿ ಫೆ. 20, 21ರಂದು ನಡೆದ ಹರ್ಷ ಕೊಲೆ ಮತ್ತು ಮೆರವಣಿಗೆ, ಕಲ್ಲುತೂರಾಟ, ಬೆಂಕಿಹಚ್ಚುವಿಕೆ, ಅಸ್ತಿಪಾಸ್ತಿ ನಷ್ಟ ಇವೆಲ್ಲ ಸರ್ಕಾರದ ಪ್ರಾಯೋಜಿತ ಕೃತ್ಯಗಳಾಗಿವೆ. ಸ್ವತಃ ಸಚಿವರು, ಸಂಸದರು, ಬಿಜೆಪಿ ಮುಖಂಡರು ಮತ್ತು ಅಧಿಕಾರಿಗಳ ನಾಯಕತ್ವದಲ್ಲಿ ನಡೆದ ಘಟನೆಗಳಾಗಿವೆ. ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಮುಸ್ಲಿಂ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡ, ನ್ಯಾಯವಾದಿ, ಮೆಹರಾಜ್ ಸಿದ್ದೀಖಿ, ಮೊನ್ನೆಯ ಎಲ್ಲಾ ಘಟನೆಯನ್ನು ಕ್ರಿಯಾ ಸಮಿತಿ ಬಲವಾಗಿ ಖಂಡಿಸುತ್ತದೆ. ಕೊಲೆ ಮಾಡಿದವರು ಹ್ಯಾಬಿಚುವಲ್ ಅಫೆಂಡರ್ಸ್ಸ್ ಆಗಿದ್ದಾರೆ. ಆರೋಪಿತರ ವಿರುದ್ದ ಕಠಿಣ ಕ್ರಮವಾಗಬೇಕು. ಆದರೆ ಸಚಿವ ಕೆ..ಎಸ್. ಈಶ್ವರಪ್ಪ ಫೆ. 8ರಂದು ನಡೆದ ಹಿಜಾಬ್ ವಿರುದ್ಧದ ಗಲಾಟೆ ವೇಳೆ ಅವಹೇಳನಕಾರಿಯಾಗಿ ಮುಸ್ಲಿಮ್ ಬಗ್ಗೆ ಮಾತನಾಡಿದ್ದಾರೆ. ಅವರ ವಿರುದ್ದ ಕ್ರಮ ಜರುಗಿಸದೇ ಇದ್ದುದು ಈಗ ಇನ್ನಷ್ಟು ಹಿಂಸೆಗೆ ಕಾರಣವಾಗಿದೆ ಎಂದರು.
ಮೊನ್ನೆಯ ಘಟನೆ ವೇಳೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದುದು ಏಕೆ, ಕಲ್ಲುತೂರಾಟ, ಬೆಂಕಿಹಚ್ಚುವಿಕೆಯನ್ನು ಕಣ್ಣಾರೆ ಕಂಡರೂ ಅವರನ್ನು ಬಂಧಿಸಲಿಲ್ಲ. ಬಂಧಿಸುವ ಅವಕಾಶವಿತ್ತು. ಆದರೆ ಸ್ವತಃ ಸಚಿವರೇ ನಾಯ್ಕಕತ್ವ ವಹಿಸಿದ್ದರಿಂದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಜೊತೆಗೆ ಬಿಜೆಪಿ ಮತ್ತು ಸಂಘ ಪರಿವಾರದವರುಅನವಶ್ಯಕ , ಅನಗತ್ಯ ಹೇಳಿಕೆಗಳನ್ನು ಕೊಡುವ ಮೂಲಕ ಉದ್ರೇಕಿಸುತ್ತಿದ್ದಾರೆಂದು ಹೇಳಿದರು.
ಶವಯಾತ್ರಗೆ ಅನುಮತಿ ಕೊಟ್ಟಿದ್ದು ಏಕೆ, ನಿಷೇಧಾಜ್ಞೆ ಜಾರಿಯಲ್ಲಿರುವಾಗ ಮೆರವಣಿಗೆಗೆ , ಗುಂಪುಗೂಡುವಿಕೆ ಸಲ್ಲದೆಂಬ ನಿಯಮ ಇವರಿಗೆ ಅನ್ವಯಿಸುವುದಿಲ್ಲವೇ, ಇದು ಅಧಿಕಾರಿಗಳ ಮಹಾತಪ್ಪು. ಗೊತ್ತಿದ್ದೂ ರಾಜಕೀಯ ನಾಯಕರು ಈ ಘೋರ ಅಪರಾಧ ಎಸಗಿದ್ದಾರೆ. ಇದನ್ನೆಲ್ಲ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದ ಅವರು, ನಷ್ಟ, ಹಲ್ಲೆ ಬಗ್ಗೆ ತನಿಖೆ ನಡೆಸಬೇಕು. ಎಲ್ಲ ಕಡೆ ಸಿಸಿ ಕ್ಯಾಮೆರಾ ಪೊಲೀಸ್ ಇಲಾಖೆಯದ್ದೇ ಇದೆ. ಅದರ ಮೂಲಕ ಆರೋಪಿಗಳನ್ನು ಪತ್ತೆ ಮಾಡಲಿ. ಇದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಬೇಕು. ಈ ದಾಖಲೆಗಳನ್ನು ರಕ್ಷಣಾತ್ಮಕವಾಗಿ ಇಡಬೇಕು ಎಂದು ಆಗ್ರಹಿಸಿದರು.
ಸಂಸದರು, ಸಚಿವರು ಮತ್ತು ಅಂದು ಮುಂಚೂಣಿಯಲ್ಲಿದ್ದವರು ಪ್ರಮುಖ ಆರೋಪಿಗಳೆಂದು ಪರಿಗಣಿಸಲ್ಪಡಬೇಕು. ಇವರಿಂದಲೇ ಆಸ್ತಿ ನಷ್ಟ ಭರಿಸಬೇಕು. ಸುಪ್ರೀಂ ಕೋರ್ಟ್ ಆದೇಶವೂ ಇದೇ ರಿತಿಯಲ್ಲಿದೆ ಎಂದ ಅವರು, ಸಚಿವ ಈಶ್ವರಪ್ಪ ಸಂವಿಧಾನದ ಹೆಸರೇಳಿ ಪ್ರಮಾಣವಚನ ಸ್ವೀಕರಿಸಿ ಈಗ ವಿಷಬೀಜ ಬಿತ್ತಿ ಗಲಾಟೆಗೆ ಕಾರಣರಾಗಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು, ಇಲ್ಲವೇ ಅವರನ್ನು ರಾಜ್ಯಪಾಲರು ಕಿತ್ತು ಹಾಕಬೇಕೆಂದು ಒತ್ತಾಯಿಸಿದರು.
ನಾಸಿರ್ ಅಹಮದ್, ಶಾಹುಲ್ ಹಮೀದ್, ಅಲ್ಲಾ ಭಕ್ಷ್, ನ್ಯಾಯವಾದಿ ಆರೀಫ್, ಶರೀಫ್, ರಿಯಾಜ್ ಅಹಮದ್ ಮೊದಲಾದವರಿದ್ದರು.
ಸಚಿವ ಕೆ. ಎಸ್ ಈಶ್ವರಪ್ಪ ಅವರು ಬಳಸಿದ ಮುಸ್ಲೀಂ ಗೂಂಡಾ ಶಬ್ದ ಬಳಕೆ ಅವಹೇಳನಕಾರಿಯಾಗಿದೆ. ಪದೇ ಪದೇ ಇದನ್ನು ಹೇಳುತ್ತಿದ್ದಾರೆ. ಸಮುದಾಯದಲ್ಲಿ ಇದು ಆಕ್ರೋಶವನ್ನುಂಟು ಮಾಡಿದೆ. ಮೊನ್ನೆಯ ಗಲಾಟೆಗೆ ಅವರ ಜೊತೆ ಸಂಸದರು ಮತ್ತು ಮುಂಚೂಣಿಯಲ್ಲಿದ್ದ ನಾಯಕರು ಕಾರಣರು. ಆಸ್ತಿ-ಪಾಸ್ತಿ ಹಾನಿಗೂ ಅವರೇ ಕಾರಣರು. ಈ ಹಿನ್ನೆಲೆಯಲ್ಲಿ ಇವರೆಲ್ಲರ ವಿರುದ್ಧ ದೂರು ಕೊಟ್ಟರೆ ದೊಡ್ಡಪೇಟೆ ಠಾಣೆಯಲ್ಲಿ ಸ್ವೀಕರಿಸಿಲ್ಲ. ಎಸ್‍ಪಿಗೆ ದೂರು ಕೊಟ್ಟರೂ ಪ್ರತಿಕ್ರಿಯಿಸಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ದೂರು ಕೊಡಲಾಗುವುದು. ಜೊತೆಗೆ ಅವಹೇಳನಕಾರಿ ನಿಂದನೆಯ ಬಗ್ಗೆಯೂ ದೂರು ದಾಖಲಿಸಲಾಗುವುದು.
–ಮೆಹ್ರಾಜ್ ಸಿದ್ದೀಖಿ, ನ್ಯಾಯವಾದಿ