ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ದೇಶವ್ಯಾಪಿ ಸುದ್ದಿಯಾಯಿತು. ಆಡಳಿತ ಪಕ್ಷದವರು ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿಯೂ ಪ್ರಸ್ತಾಪ ಮಾಡಿ ಆಯಿತು. ಆ ಬಳಿಕ ಸರದಿ ಮೇಲೆ ಸಚಿವರು, ಸಂಸದರು, ರಾಜಕೀಯ ಮತ್ತು ಧಾರ್ಮಿಕ ನಾಯಕರು ಮೃತ ಹರ್ಷನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಆರ್ಥಿಕ ನೆರವು ಕೂಡಾ ನೀಡುತಿದ್ದಾರೆ. ಯಾರದೇ ಆಗಲಿ ಜೀವ ಅಮೂಲ್ಯ. ಕರುಳ ಕುಡಿ ಕಳೆದುಕೊಂಡ ಹೊತ್ತಲ್ಲಿ ಹೆತ್ತವರಿಗೆ ಧೈರ್ಯ ಹೇಳುವುದು ಮನುಷ್ಯತ್ವ ಕೂಡಾ ಹೌದು.
ಕೋಮು ದಳ್ಳುರಿಗೆ ಹೆಸರಾದ ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ಹಿಂದೆಯೂ ಆಗಿವೆ. ಆ ಎಲ್ಲಾ ಕುಟುಂಬಗಳು ಇಂದಿಗೂ ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಅಂತಹ ಕುಟುಂಬಗಳಲ್ಲಿ ಆಲ್ಕೊಳದಲ್ಲಿರುವ ವಿಶ್ವನಾಥ ಶೆಟ್ಟಿ ಕುಟುಂಬವೂ ಒಂದಾಗಿದೆ. ಶನಿವಾರ ಈ ಕುಟುಂಬಸ್ಥರನ್ನು ಜೆಡಿಎಸ್ ನಾಯಕ ಹಾಗೂ ಸಮಾಜ ಸೇವಕ ಎಂ.ಶ್ರೀಕಾಂತ್ ಅವರು ಭೇಟಿ ನೀಡಿದಾಗ ಅಲ್ಲಿವ ವಾಸ್ತವ ಸ್ಥಿತಿ ಬೆಳಕಿಗೆ ಬಂದಿದೆ.
ಮನೆಗೆ ಕರೆಂಟೇ ಇಲ್ಲ
2015ರಲ್ಲಿ ಶಿವಮೊಗ್ಗದಲ್ಲಿ ಪಿಎಫ್‌ಐ ಸಂಸ್ಥಾಪನಾ ದಿನಾಚರಣೆ ಮುಗಿಸಿ ಮಂಗಳೂರಿಗೆ ಹೋಗುತ್ತಿದ್ದ ದುಷ್ಕರ್ಮಿಗಳು ವಿಶ್ವನಾಥ್‌ಶೆಟ್ಟಿ ಅವರ ಕಗ್ಗೊಲೆ ಮಾಡಿದ್ದರು. ಅಂದು ರಾಜಕೀಯ ನಾಯಕರುಗಳು ವಿಶ್ವನಾಥ್ ಮನೆಗೆ ಭೇಟಿ ನೀಡಿದ್ದರು. ಮಾಧ್ಯಮಗಳಲ್ಲಿ ಪ್ರಚಾರವೂ ಆಗಿತ್ತು. ಆದರೆ ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಮಾತ್ರ ಸಂಕಷ್ಟದಲ್ಲಿಯೇ ಇದೆ. ಅಂದು ಸರಕಾರದ ಕಡೆಯಿಂದ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಹೇಳಲಾಗಿತ್ತು. ಆದರೆ ಬಂದಿದ್ದು, ೫ ಲಕ್ಷ ಮಾತ್ರ. ಅದಾದ ಬಳಿಕ ಹಿಂದೂ ಸಂಘಟನೆಯ ಯಾರು ಆ ಕಡೆ ಕಣ್ಣೆತ್ತಿಯೂ ನೋಡಿಲ್ಲ ಎನ್ನಲಾಗಿದೆ. ಈ ನಡುವೆ ವಿಶ್ವನಾಥ್ ಶೆಟ್ಟಿ ಅವರ ಪತ್ನಿಯೂ ತೀರಿಕೊಂಡರು. ವಯಸ್ಸಾದ ಅವರ ತಾಯಿ ಮೊಮ್ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಅವರು ವಾಸಿಸುವ ಮನೆಗೆ ಬಿಲ್ ಕಟ್ಟಿಲ್ಲ ಎಂದು ವಿದ್ಯುತ್ ಸಂಪರ್ಕ ಕಡಿತವಾಗಿ ಮೂರು ವರ್ಷಗಳಾಗಿವೆ. ನೆಲ್ಲಿ ಸಂಪರ್ಕವೂ ಇಲ್ಲದಾಗಿದೆ.
ಸಂಜೆ ಕರೆಂಟು ಬಂತು:
ಶನಿವಾರ ಬೆಳಗ್ಗೆ ವಿಶ್ವನಾಥಶೆಟ್ಟಿ ಮನೆಗೆ ಶ್ರೀಕಾಂತ್ ಅವರು ಭೇಟಿ ನೀಡಿ ಆರ್ಥಿಕ ನೆರವು ನೀಡಿದ್ದಲ್ಲದೆ, ಕರೆಂಟ್ ಬಿಲ್ಲ ಪಾವತಿಸಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿದ ಪರಿಣಾಮವಾಗಿ ಸಂಜೆ ವೇಳೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಸಂದರ್ಭ ಮಾತನಾಡಿದ ಶ್ರೀಕಾಂತ್, ಯಾರೊ ಮಾಡಿದ ತಪ್ಪಿಗೆ ಪಾಪಿ ಪರದೇಶಿಗಳಿಗೆ ಅನ್ಯಾಯ ಆಗುತ್ತದೆ. ಸಂಕಷ್ಟದಲ್ಲಿರುವ ಈ ಕುಟುಂಬ ಗಮನಕ್ಕೆ ಬಂದಿದ್ದರಿಂದ ನನ್ನ ಕೈಲಾದ ಸಹಾಯ ಮಾಡಿದ್ದೇನೆ ಎಂದು ಹೇಳಿದರು.