ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಅಗ್ರಮಾನ್ಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಫೆ.೨೭ ರಂದು ೭೯ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳು ಬೆಂಬಲಿಗರು ತಮ್ಮ ನಾಯಕನ ಹುಟ್ಟು ಹಬ್ಬ ಆಚರಿಸಿದರು.
ಶಿವಮೊಗ್ಗ ಬಿಜೆಪಿಯಿಂದ ಭಾನುವಾರ ಬೆಳಗ್ಗೆ ಕೋಟೆ ಸೀತಾರಾಮಾಂಜನೇಯ ದೇಗುಲದಲ್ಲಿ ಪೂಜೆ ಸಲ್ಲಿಸಿ ಯಡಿಯೂರಪ್ಪ ಅವರ ಆಯುರಾರೋಗ್ಯಕ್ಕೆ ಪೂಜೆ ಸಲ್ಲಿಸಲಾಯಿತು. ಅದೇ ರೀತಿ ಶಿವಮೊಗ್ಗ ರವೀಂದ್ರನಗರದ ಪ್ರಸನ್ನಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಮುಖಂಡರು ನೆರದವರಿಗೆ ಹಣ್ಣು ಹಂಪಲು ವಿತರಿಸಿದರು. ಎರಡೂ ಕಡೆ ಪೂಜೆ ಸಂದರ್ಭ ಪ್ರಮುಖರಾದ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಜ್ಯೋತಿಪ್ರಕಾಶ್, ಚನ್ನಬಸಪ್ಪ, ಜ್ಞಾನೇಶ್, ಬಳ್ಳೇಕೆರೆ ಸಂತೋಷ್, ಮಾಲತೇಶ್, ಮೋಹನ್ ರೆಡ್ಡಿ, ಶಾಸಕ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಎಸ್.ದತ್ತಾತ್ರಿ, ಕೆ.ಇ.ಕಾಂತೇಶ್ , ಎನ್.ಜೆ.ರಾಜಶೇಖರ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಪೂಜೆ ಪುನಸ್ಕಾರ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ವಿತರಣೆ, ರಕ್ತದಾನ ಶಿಬರಗಳನ್ನು ಆಯೋಸಲಾಗಿತ್ತು.ರಾಜಧಾನಿ ಬೆಂಗಳೂರಲ್ಲಿ ಮಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಂಪುಟ ಸದಸ್ಯರು, ಸಂಸದರು,ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಜನ್ಮದಿನದ ಶುಭಾಶಯ ಕೋರಿದರು. ಈ ಸಂದರ್ಭ ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಜರಿದ್ದರು. ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಶಿವಮೊಗ್ಗ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳಿ ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ಯಡಿಯೂರಪ್ಪ ಅವರ ಪುತ್ರಿಯರು ಮತ್ತು ಸೊಸೆಯಂದಿರು ಯಡಿಯೂರಪ್ಪ ಅವರಿಗೆ ಆರತಿ ಬೆಳಗಿ ಶುಭಾಶಯ ಕೋರಿ ಆಶೀರ್ವಾದ ಪಡೆದರು. ಮುಖ್ಯಮಂತ್ರಿಗಾದಿಯಿಂದ ಇಳಿದರೂ ಯಡಿಯೂರಪ್ಪ ಇನ್ನೂ ಪ್ರಭಾವಿ ನಾಯಕ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ರಾಜ್ಯಪ್ರವಾಸ ಮಾಡುತ್ತೇನೆ
ಜನ್ಮದಿನ ಆಚರಿಸಿಕೊಂಡ ಯಡಿಯೂರಪ್ಪ ಅವರು ವಿಧಾನ ಮಂಡಲ ಬಜೆಟ್ ಅಧಿವೇಶನ ಮುಗಿದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಹೇಳುವ ಮೂಲಕ ನನ್ನಲ್ಲಿನ್ನೂ ಶಕ್ತಿಯಿದೆ ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.