ದುಡಿಮೆಯೇ ದೊಡ್ಡಪ್ಪ ಎಂಬ ಧ್ಯೇಯದ ಮೇಲೆ ನಮ್ಮ ಬಜೆಟ್ ಮಂಡನೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಶಿಕಾರಿಪುರದಲ್ಲಿ ಆಯೋಜಿಸಲಾಗಿದ್ದ ರೈತಾಭಿಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ದುಡ್ಡೇ ದೊಡ್ಡಪ್ಪ ಎಂದು ಕೊಂಡಿದ್ದಾರೆ. ನಾವುದುಡಿಮೆಯನ್ನು ನಂಬಿಕೊಂಡವರು. ಆದ್ದರಿಂದ ಇದರ ಆಧಾರದ ಮೇಲೆಯೇ ಬಜೆಟ್ ಮಂಡಿಸಲಾಗಿದೆ ಎಂದರು.
ಬಜೆಟ್‌ನಲ್ಲಿ ಹೊಸ ದೃಷ್ಟಿಕೋನವನ್ನು ಹೊಂದಲಾಗಿದೆ. ಸಮಾಜದಲ್ಲಿರುವ ಎಲ್ಲಾ ಸಮುದಾಯಕ್ಕೆ ಹಾಗೂ ಎಲ್ಲಾ ವರ್ಗಗಳಿಗೆ ಸಮಾನ ಆದ್ಯತೆ ನೀಡಲಾಗಿದೆ. ಆ ಮೂಲಕ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದು ನಮ್ಮ ಮುಖ್ಯ ಧ್ಯೇಯ ಎಂದು ತಿಳಿಸಿದರು.
ಶಿಕಾರಿಪುರದ ಜನತೆ ಕಳೆದ ೪೦ ವರ್ಷಗಳ ಹಿಂದೆ ಯಡಿಯೂರಪ್ಪರಂತಹ ನಾಯಕನನ್ನು ಹುಟ್ಟು ಹಾಕಿದರು. ಅದು ಕೇವಲ ಶಿಕಾರಿಪುರಕ್ಕೆ ಮಾತ್ರ ಸೀಮಿತವಾಗಲಿಲ್ಲ. ಆ ನಾಯಕ ರಾಜ್ಯಕ್ಕೆ ಮಾದರಿ ನಾಯಕನಾಗಿ ಹೊರಹೊಮ್ಮಿದ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಬಿ.ಎ ಯಡಿಯೂರಪ್ಪರನ್ನು ಕೊಟ್ಟಂತಹ ಶಿಕಾರಿಪುರ ಕ್ಷೇತ್ರದ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಶಿಕಾರಿಪುರ ತಾಲೂಕಿನ ೫೦ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೀಯ. ಇದು ಭಗೀರಥ ಪ್ರಯತ್ನ. ಇಂತಹ ಕಾರ್ಯವನ್ನು ರಾಜ್ಯದ ಪ್ರತೀ ತಾಲೂಕಿನಲ್ಲಿ ಮಾಡುವಂತಹ ಗುರಿ ಹೊಂದಲಾಗಿದೆ. ತುಂಗಾ ಮೇಲ್ದಂಡೆ ಯೋಜನೆಯಿಂದ ಉತ್ತರ ಕರ್ನಾಟಕ ಭಾಗದ ತಾಲೂಕು ಹಾಗೂ ಹಳ್ಳಿಗಳಿಗೆ ನೀರಾವರಿ ಯೋಜನೆ ಕಲ್ಪಿಸಿದ ಯಡಿಯೂರಪ್ಪನವರು ಭದ್ರಾ ಮೇಲ್ದಂಡೆ ಯೋಜನೆ ಸ್ಥಾಪಿಸುವ ಮೂಲಕ ಚಿತ್ರದುರ್ಗ, ಕೋಲಾರ, ತುಮಕೂರು ಸೇರಿದಂತೆ ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಿಗೆ ನೀರುಣಿಸುವ ಕಾರ್ಯ ಮಾಡಿದರು. ಇಂದು ಈ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಮಾರ್ಪಟ್ಟಿದೆ. ಅದರ ಶ್ರೇಯಸ್ಸು ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದರು.
ಸಚಿವರಾದ ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ, ಬಿ.ಸಿ. ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ರುದ್ರೇಗೌಡ, ಭಾರತಿ ಶೆಟ್ಟಿ, ಕೆ.ಬಿ.ಅಶೋಕ್, ನಾಯ್ಕ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಗುರುಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಎಂ.ಬಿ.ಚನ್ನವೀರಪ್ಪ ಹಾಜರಿದ್ದರು.
ಅಧಿವೇಶನ ಮುಗಿದ ನಂತರ ರಾಜ್ಯ ಪ್ರವಾಸ: ಬಿಎಸ್‌ವೈ
ಅಧಿವೇಶನ ಮುಗಿದ ನಂತರ ರಾಜ್ಯ ಪ್ರವಾಸವನ್ನು ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ನಡೆದ ರೈತಾಭಿಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ ಎಂದರು.
ಕಾಂಗ್ರೆಸ್ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜನಪರ ಕಾರ್ಯಕ್ರಮ ನೀಡುತ್ತಿದೆ. ಇವುಗಳನ್ನು ಆಧಾರವಾಗಿಟ್ಟು ಕೊಂಡೇ ಜನರ ಮುಂದೆ ಹೋಗುತ್ತೇವೆ. ನಿಶ್ಚಿತವಾಗಿಯೂ ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಶಿಕಾರಿಪುರ ಕ್ಷೇತ್ರದ ಮತದಾರರಾದ ತಾವುಗಳು ಪುರಸಭಾ ಸದಸ್ಯನನ್ನಾಗಿ ಮಾಡಿ ರಾಜ್ಯದ ಮುಖ್ಯ ಮಂತ್ರಿಯನ್ನಾಗಿ ಮಾಡಿದ್ದೀರಿ. ನಿಮ್ಮ ಉಪಕಾರ ಮರೆಯಲು ಸಾಧ್ಯವಿಲ್ಲ. ತಾಲೂಕಿನ ರೈತರು ನೆಮ್ಮದಿಯಿಂದ ಸ್ವಾಭಿಮಾನದಿಂದ ಬದುಕಲು ಅನುಕೂಲವಾಗುವಂತೆ ೩೮ ಕಿ.ಮೀ. ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಸಿ ತಾಲೂಕಿನ ೫೦ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡಿದ್ದೇನೆ ಎಂದರು