ಶಿಕಾರಿಪುರ ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ಸುಮಾರು ರೂ. ೧೫೦೦ಕೋಟಿ ಗಳ ಬೃಹತ್ ಯೋಜನೆ ರೂಪಿಸಿ ಅನುಷ್ಟಾನ ಗೊಳಿಸಿತ್ತಿರುವುದು ಐತಿಹಾಸಿಕ ಕಾರ್ಯವಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಕಾರ್ಯಾನುಷ್ಟಾನಗೊಳ್ಳಲಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಶಾಸಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ ಮತ್ತು ಹೊಸೂರು ಹೋಬಳಿಗಳ ೧೧೦ ಗ್ರಾಮಗಳ ೨೪೯ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಸುಮಾರು ೮೫೦ ಕೋಟಿ ರೂ.ಗಳ ಏತ ನೀರಾವರಿ ಯೋಜನೆಯ ಭಾಗವಾಗಿ ಅಡಗಂಟಿ ಗ್ರಾಮದ ಸಮೀಪ ನಿರ್ಮಿಸಿರುವ ಏರುಕೊಳವೆ ಮಾರ್ಗ ತೊಟ್ಟಿಗೆ ನೀರು ಹರಿಸುವ ಯೋಜನೆಗೆ ಅವರು ಬಾಗಿನ ಅರ್ಪಿಸಿ, ನಂತರ ಅಡಗಂಟಿ ಗ್ರಾಮದ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಯೋಜನೆಯ ಕರಾರುವಕ್ಕಾದ ಅನುಷ್ಟಾನದಿಂದಾಗಿ ವರ್ಷಪೂರ್ತಿ ಬಿಸಿಲು ಬರದಿಂದ ಕಂಗೆಟ್ಟಿದ್ದ ಈ ಪ್ರದೇಶದ ಜನರಲ್ಲಿ ಮಂದಹಾಸ ಮೂಡಿದೆ. ರೈತರು ಸ್ವಾಭಿಮಾನದಿಂದ ನೆಮ್ಮದಿಯ ಜೀವನ ನಡೆಸಲು, ಕೃಷಿ ಚಟುವಟಿಕೆ ನಡೆಸಲು, ಹಾಗೂ ಜನ-ಜಾನುವಾರುಗಳಿಗೆ ಶುದ್ದ ನೀರು ಒದಗಿಸಲು ಸಹಕಾರಿಯಾಗಿದೆ. ಈ ಯೋಜನೆಯ ಅನುಷ್ಟಾನಕ್ಕೆ ಸಹಕರಿಸಿದ ತಂತ್ರಜ್ಞರು, ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿನಂದನಾರ್ಹರು ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರೈತರ ಉತ್ಪನ್ನಗಳಿಗೆ ನ್ಯಾಯೋಚಿತವಾದ ಬೆಲೆ ದೊರೆಯುವಂತಾಗಬೇಕು. ಆಗ ಸಹಜವಾಗಿ ರೈತರ ಮೊಗದಲ್ಲಿ ಮಂದಹಾಸ ಕಾಣಬಹುದಾಗಿದೆ ಎಂದರು. ಯೋಜನೆಯ ಆರಂಭದಲ್ಲಿ ಪ್ರಾಯೋಗಿಕವಾಗಿ ಭಾರೀ ಸಾಮರ್ಥ್ಯದ ಮೂರು ಯಂತ್ರಗಳಲ್ಲಿ ನೀರನ್ನು ಹರಿಸಲಾಗುತ್ತಿದೆ. ಈ ಯಂತ್ರಗಳ ಸಂಖ್ಯೆ ೫ಕ್ಕೆ ಹೆಚ್ಚಿಸಿದಲ್ಲಿ ಇನ್ನು ಹೆಚ್ಚಿನ ಪ್ರಮಾಣದ ನೀರು ವೇಗವಾಗಿ ಹರಿದು ಬರಲಿದೆ. ಪ್ರಸ್ತುತ ಈ ಯೋಜನೆಯಡಿ ೧.೫ ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಕಾಳೇನಹಳ್ಳಿಯ ಶ್ರೀಗಳು ಮಾತನಾಡಿ, ಶಿಕಾರಿಪುರ ತಾಲೂಕಿನ ಸರ್ವಾಂಗೀಣ ವಿಕಾಸಕ್ಕಾಗಿ ಯಡಿಯೂರಪ್ಪನವರು ಹೊಂದಿದ್ದ ಅಮೂಲ್ಯ ಚಿಂತನೆಗಳು, ಕಂಡ ಕನಸುಗಳು ಹಾಗೂ ಅವರ ಸಂಕಲ್ಪ ಸಾಕಾರಗೊಂಡಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ರುದ್ರೇಗೌಡ, ಭಾರತಿಶೆಟ್ಟಿ, ಯು.ಬಿ.ಬಣಕಾರ್, ಕೆ.ಎಸ್.ಗುರುಮೂರ್ತಿ, ಎಸ್.ದತ್ತಾತ್ರಿ ಸೇರಿದಂತೆ ಹಲವು ಮಠಾಧಿಪತಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ವರ್ಷಪೂರ್ತಿ ಬಿಸಿಲು ಬರದಿಂದ ಕಂಗೆಟ್ಟಿದ್ದ ಈ ಪ್ರದೇಶದ ಜನರಲ್ಲಿ ಮಂದಹಾಸ ಮೂಡಿದೆ. ರೈತರು ಸ್ವಾಭಿಮಾನದಿಂದ ನೆಮ್ಮದಿಯ ಜೀವನ ನಡೆಸಲು, ಕೃಷಿ ಚಟುವಟಿಕೆ ನಡೆಸಲು, ಹಾಗೂ ಜನ-ಜಾನುವಾರುಗಳಿಗೆ ಶುದ್ದ ನೀರು ಒದಗಿಸಲು ಸಹಕಾರಿಯಾಗಿದೆ. ಈ ಯೋಜನೆಯ ಅನುಷ್ಟಾನಕ್ಕೆ ಸಹಕರಿಸಿದ ತಂತ್ರಜ್ಞರು, ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿನಂದನಾರ್ಹರು
- ಯಡಿಯೂರಪ್ಪ, ಮಾಜಿ ಮುಖ್ಯ ಮಂತ್ರಿ