ಶಿಕ್ಷಣ ತಜ್ಞ, ಉದ್ಯಮಿ ಹಾಗೂ ವಿಧಾನ ಪರಿಷತ್ ನೂತನ ಸದಸ್ಯ ಮಂಜುನಾಥ ಭಂಡಾರಿ ಅವರಿಗೆ ಮಾ.12 ರಂದು ಕುವೆಂಪು ರಂಗಮಂದಿರದಲ್ಲಿ ನಾಗರೀಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ದಶಕಗಳ ಕಾಲ ಶಿವಮೊಗ್ಗದಲ್ಲಿ ಸಾಮಾಜಿಕ ಸೇವಾಕಾರ್ಯ, ಉದ್ಯಮ ಹಾಗೂ ರಾಜಕಾರಣ ಮಾಡಿದ ಭಂಡಾರಿ ಅವರಿಗೆ ಮಲೆನಾಡಿನ ಜನರ ಪರವಾಗಿ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷರೂ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನವರಾದ ಮಂಜುನಾಥ ಭಂಡಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳನನ್ನು ಉದ್ಯಮಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
ಅಭಿನಂದನಾ ಸಮಿತಿಯ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ಮಂಜುನಾಥ ಭಂಡಾರಿ ಅವರು ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರ ರಾಜಕೀಯ ಅನುಭವ ಮತ್ತು ಅಧ್ಯಯನಗಳಿಗೆ ಪೂರಕವಾದ ವೇದಿಕೆ ಈಗ ಸಿಕ್ಕಿದೆ. ದಶಕಗಳ ಕಾಲ ಶಿವಮೊಗ್ಗದಲ್ಲಿ ಸಾಮಾಜಿಕ ಸೇವೆ, ಹೋರಾಟ ಮತ್ತು ರಾಜಕೀಯ ಹೋರಾಟ ಮಾಡಿಕೊಂಡಿದ್ದ ಅವರಿಗೆ ಉಡುಪಿ-ದಕ್ಷಿಣ ಕನ್ನಡದಲ್ಲಿ ರಾಜಕೀಯ ಮನ್ನಣೆ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆಗೆ ಅವರ ಸೇವೆ ಅಪಾರವಾಗಿದೆ. ಅವರಿಗೆ ಜಿಲ್ಲೆಯ ಜನರ ಪರವಾಗಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು. ಮಾಜಿ ಸಚಿವ ಎಂ.ಬಿ. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಆಗಮಿಸಲಿದ್ದಾರೆ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್. ಶಾಸಕ ಬಿ.ಕೆ. ಸಂಗಮೇಶ, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಡಿಸಿಸಿ ಅಧ್ಯಕ್ಷ ಹೆಚ.ಎಸ. ಸುಂದರೇಶ್ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮಂಜುನಾಥ ಭಂಡಾರಿಯವರ ಒಡನಾಡಿಗಳಾದ ಎಸ್. ರವಿಕುಮಾರ್, ಎಸ್.ಪಿ. ದಿನೇಶ್, ಷಡಾಕ್ಷರಿ, ಕಾಂಗ್ರೆಸ್ ಮುಖಂಡರಾದ ಎ.ಬಿ. ಮಾರ್ಟೀಸ್, ಪಿ.ಹನುಮಂತು, ವಿಜಯ ಕುಮಾರ್, ಹೆಚ್.ಡಿ. ದೇವಿಕುಮಾರ್, ಹೆಚ್.ಜಿ. ಪೂರ್ಣೇಶ್, ಲಕ್ಷ್ಮೀಕಾಂತ್ ಚಿಮಣೂರು, ಕೆ.ಪಿ. ಶೆಟ್ಟಿ, ಶಾಂತಾ ಶೆಟ್ಟಿ ಇದ್ದರು.
ಶಿವಮೊಗ್ಗದಲ್ಲಿ ದಶಕಗಳ ಕಾಲ ನಡೆದ ಜನಪರ ಹೋರಾಟಗಳ ಭಾಗವಾಗಿದ್ದ ಮಂಜುನಾಥ್ ಭಂಡಾರಿ ಮಂಗಳೂರಿನಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಶಿಕ್ಷಣ ತಜ್ಞರಾದ ಅವರೊಬ್ಬ ಯಶಸ್ವಿ ಉದ್ಯಮಿ ಮತ್ತು ಯುವಜನರಿಗೆ ಮಾದರಿ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ. ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ
-ಎನ್.ರಮೇಶ್