ಆದ್ಯತಾ ವಲಯಗಳಿಗೆ ನಿಗಧಿಪಡಿಸಿದ ಅನುದಾನ ಉದ್ದೇಶಿತ ಯೋಜನೆಗಳಿಗೆ ಸಕಾಲದಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚಿಸಿದರು.
ಶಿವಮೊಗ್ಗ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಳಚೆ ಪ್ರದೇಶದ ನಿವಾಸಿಗಳು ಇರುವ ಸ್ಥಳದಲ್ಲಿಯೇ ಸೂರೊಂದನ್ನು ನಿರ್ಮಿಸಿಕೊಂಡು ನೆಮ್ಮದಿಯ ದಿನಗಳನ್ನು ಕಳೆಯಲು ಅನುಕೂಲವಾಗುವಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಯೋಜನೆಗಳಡಿಯಲ್ಲಿ ಸಹಾಯಧನದೊಂದಿಗೆ ಬ್ಯಾಂಕುಗಳ ಮೂಲಕ ಸಾಲಸೌಲಭ್ಯ ಒದಗಿಸುವ ಮೂಲಕ ಅಗತ್ಯ ಸಹಕಾರ ನೀಡುವಂತೆ ಸೂಚಿಸಿದ ಅವರು, ಹಲವು ಬ್ಯಾಂಕುಗಳಲ್ಲಿ ಶಿಕ್ಷಣ ಮತ್ತು ವಸತಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಿರುವ ಸಾಲದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಪ್ರಗತಿ ನಿರಾಶಾದಾಯಕವಾಗಿದೆ. ಉದ್ದೇಶಿತ ಯೋಜನೆಗಳಿಗೆ ನಿಗಧಿಪಡಿಸಿದ ಹಣವನ್ನು ಸೂಚಿಸಲಾಗಿರುವ ಕಾಲಾವಧಿಯಲ್ಲಿಯೇ ಬಿಡುಗಡೆಗೊಳಿಸಿ ಪ್ರಗತಿ ವರದಿ ನೀಡುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೂಪಿಸಿ ಅನುಷ್ಠಾನಗೊಳಿಸುವ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪುವಂತೆ ಬ್ಯಾಂಕ್ ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸುವಂತೆ ಸೂಚಿಸಿದ ಅವರು, ಪಿಎಂಜೆಜೆಬಿವೈ. ಯೋಜನೆಯಡಿಯಲ್ಲಿ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವವರು ೧೨/-ರೂ.ಗಳ ತಮ್ಮ ಮಾಸಿಕ ಕಂತನ್ನು ನಿರಂತರವಾಗಿ ಕಟ್ಟುವಂತೆ ಹಾಗೂ ಕಾಲಕಾಲಕ್ಕೆ ಗ್ರಾಹಕರಲ್ಲಿ ಅರಿವು ಮೂಡಿಸುವಲ್ಲಿ ಬ್ಯಾಂಕ್ ಸಿಬ್ಬಂದಿಗಳು ಸಕ್ರಿಯರಾಗುವಂತೆ ಸಲಹೆ ನೀಡಿದರು.
ಕೇಂದ್ರ ಸರ್ಕಾರವು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ೭೫ಜಿಲ್ಲೆಗಳಲ್ಲಿ ಟಿಜಿಟಲ್ ಬ್ಯಾಂಕುಗಳನ್ನು ಆರಂಭಿಸಲು ಉದ್ದೇಶಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲೂ ಡಿಜಿಟಲ್ ಬ್ಯಾಂಕೊಂದನ್ನು ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಬ್ಯಾಂಕುಗಳಂತೆ ಅಂಚೆ ಇಲಾಖೆಯೂ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಮಾತನಾಡಿ, ಕೊಳಚೆ ಪ್ರದೇಶದಲ್ಲಿನ ನಿವಾಸಿಗಳು ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಾಲಸೌಲಭ್ಯ ಪಡೆಯಲು ಇರುವ ಸಮಸ್ಯೆಗಳ ಕುರಿತು ಸಂಬಂಧಿಸಿದ ಬ್ಯಾಂಕ್ ಪ್ರಬಂಧಕರು ಹಾಗೂ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಸುಪ್ರಿಯ ಬ್ಯಾನರ್ಜಿ, ಸಂದೀಪರಾವ್, ಬಿ.ರವಿ, ಯತೀಶ್ ಸೇರಿದಂತೆ ಬ್ಯಾಂಕುಗಳ ವ್ಯವಸ್ಥಾಪಕರು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಅರ್ಹರಿಗೆ ಸಾಲಸೌಲಭ್ಯ ನೀಡುವಲ್ಲಿ ನಿರ್ಲಕ್ಷ್ಯ ಸಲ್ಲದು. ಹಾಗೂ ಸೌಲಭ್ಯಕ್ಕಾಗಿ ಬ್ಯಾಂಕುಗಳಿಗೆ ಧಾವಿಸುವ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿದ ಸಂಸದ ರಾಘವೇಂದ್ರ ಅವರು,ಸೌಲಭ್ಯ ಒದಗಿಸುವಲ್ಲಿ ಸಣ್ಣಪುಟ್ಟ ನ್ಯೂನತೆಗಳಿದ್ದಲ್ಲಿ ಅವುಗಳನ್ನು ಸರಿದೂಗಿಸಿಕೊಂಡು ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿ ಸಹಕರಿಸುವಂತೆ ಹಾಗೂ ಯಾವುದೇ ಅರ್ಜಿಗಳನ್ನು ಸಲ್ಲದ ನೆಪವೊಡ್ಡಿ ತಿರಸ್ಕರಿಸಬೇಡಿ.
–ಬಿ.ವೈ ರಾಘವೇಂದ್ರ, ಸಂಸದ