Malenadu Mitra
ರಾಜ್ಯ ಶಿವಮೊಗ್ಗ

ರಾಜಕೀಯಕ್ಕೆ ಯುವಪಡೆಯನ್ನೇ ಕೊಟ್ಟ ಕೀರ್ತಿ ಭಂಡಾರಿಯವರದು: ಎಂ.ಬಿ.ಪಾಟೀಲ್ ಮಂಜುನಾಥ್ ಭಂಡಾರಿಗೆ ಹೃದಯಸ್ಪರ್ಶಿ ಸನ್ಮಾನ

ರಾಜಕೀಯಕ್ಕೆ ಯುವ ನಾಯಕರ ಪಡೆ ಕಟ್ಟಿಕೊಟ್ಟ ಮಂಜುನಾಥ ಭಂಡಾರಿ ಅವರ ಆಶಯ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ ಎಂದು ಮಾಜಿ ಗೃಹ ಸಚಿವ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದರು.
ನಾಗರಿಕ ಅಭಿನಂದನಾ ಸಮಿತಿ ಶನಿವಾರ ಆಯೋಜಿಸಿದ್ದ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಫಲಾಪೇಕ್ಷೆ ಇಲ್ಲದೇ, ಅಧಿಕಾರದ ಲಾಲಸೆ ಇಲ್ಲದೇ ಪಕ್ಷ ಸಂಘಟನೆಗೆ ತಮ್ಮ ಇಡೀ ಜೀವನ ಮುಡುಪಾಗಿಟ್ಟವರು ಮಂಜುನಾಥ ಭಂಡಾರಿ. ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಯುವ ರಾಜಕಾರಣಿಯಾಗಿ ಪಕ್ಷದ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪಕ್ಷದ ಹಿರಿಯ ಮುಖಂಡರಾದ ಆಸ್ಕರ್ ಫೆರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದೊಂದಿಗೆ ಅನೇಕ ಜವಾಬ್ದಾರಿ ಹೊತ್ತುಕೊಂಡು ಪಕ್ಷಕ್ಕೆ ಸೇವೆ ಸಲ್ಲಿಸಿರುವ ಇವರು ೨೦ ವರ್ಷಗಳ ಹಿಂದೆಯೇ ವಿಧಾನ ಪರಿಷತ್ ಅಥವಾ ರಾಜ್ಯಸಭಾ ಸದಸ್ಯರಾಗಬಹುದಿತ್ತು ಎಂದರು.

ಸಮಾಜಕ್ಕೆ ಉತ್ತಮ ಶಿಕ್ಷಣ ಒದಗಿಸಲು ಆಧುನಿಕ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆ ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ. ಇವರ ಶಿಸ್ತು ಮತ್ತು ಬದ್ಧತೆಯನ್ನು ಕಲಿಯಬೇಕಾಗಿದೆ. ಇವರ ಶಿಕ್ಷಣ ಸಂಸ್ಥೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ್ದಾಗಿದೆ ಎಂದ ಅವರು, ಭಂಡಾರಿಯವರು ಉನ್ನತ ಹುದ್ದೆಗಳನ್ನು ಪಡೆದು ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸಿದರು.

ಸಾಮರ್ಥ್ಯಕ್ಕೆ ಯಾರೂ ಸರಿ ಸಮಾನರಿಲ್ಲ

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೂ ಪಕ್ಷ ಸಂಘಟನೆ ಹಾಗೂ ಪಕ್ಷ ಬೆಳೆಸುವ ಕಾರ್ಯವೈಖರಿ ಮಂಜುನಾಥ ಭಂಡಾರಿ ಅವರಿಂದ ಕಲಿಯಬೇಕಾಗಿದೆ. ಹಾಗೂ ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆಗೆ ಅಗತ್ಯವಾಗಿದೆ ಎಂದರು.ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಂಜುನಾಥ ಭಂಡಾರಿ ಅವರ ಸಾಮರ್ಥ್ಯಕ್ಕೆ ಯಾರೂ ಸರಿ ಸಮಾನರಿಲ್ಲ. ಅನೇಕ ಯುವ ನಾಯಕರನ್ನು ಅವರು ಬೆಳೆಸಿದ್ದಾರೆ. ಪಕ್ಷ ಸಂಘಟನೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಕಾಲೇಜು ದಿನಗಳಿಂದಲೂ ನಾನು ಮತ್ತು ಮಂಜುನಾಥ ಭಂಡಾರಿ ಅವರು ಆತ್ಮೀಯ ಸ್ನೇಹಿತರು. ಅವರು ಎನ್.ಎಸ್.ಯು.ಐ.ನಲ್ಲಿದ್ದರು. ನಾನು ಎಬಿವಿಪಿಯಲ್ಲಿದ್ದೆ. ಈಗ ಬೇರೆ ಬೇರೆ ಪಕ್ಷದಲ್ಲಿದ್ದೇವೆ. ಆದರೂ, ನಮ್ಮ ಸ್ನೇಹಕ್ಕೆ ಯಾವುದೇ ರೀತಿ ಅಡ್ಡಿಯಾಗಿಲ್ಲ. ಚುನಾವಣಾ ಸಮಯದಲ್ಲಿ ಮಾತ್ರ ನಮ್ಮ ನಮ್ಮ ಕಿತ್ತಾಟಗಳಿರುತ್ತವೆ. ಆಮೇಲೆ ನಮ್ಮ ಸ್ನೇಹಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ರಾಜಕೀಯ ಸಿದ್ಧಾಂತಗಳೇ ಬೇರೆ, ಸ್ನೇಹದ ತತ್ವವೇ ಬೇರೆ. ಭಂಡಾರಿಯವರಿಗೆ ಕೆ.ಎಸ್. ಈಶ್ವರಪ್ಪ ಸಹ ಒಳ್ಳೆಯ ಗೆಳೆಯರು. ಅವರಿಗೆ ಕರೆದಿದ್ದರೆ ಕಾರ್ಯಕ್ರಮಕ್ಕೆ ಬರುತ್ತಿದ್ದರು ಎಂದರು.

ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಬಲಿಷ್ಠಗೊಳ್ಳಲು ಭಂಡಾರಿಯವರು ಕಾರಣವಾಗಿದ್ದಾರೆ. ಅವರು ಒಂದು ರೀತಿಯಲ್ಲಿ ಸೈನಿಕನಿದ್ದಂತೆ. ಲೋಕಸಭೆ ಪ್ರವೇಶ ಯಾವಾಗಲೋ ಪಡೆಯಬೇಕಿತ್ತು. ಆದರೆ, ಆಗಿರಲಿಲ್ಲ. ಈಗ ಪರಿಷತ್ ಸದಸ್ಯರಾಗಿದ್ದಾರೆ. ಅವರಿಂದ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯಾಗಲಿ ಎಂದರು.

ಈ ಸಂದರ್ಭದಲ್ಲಿ ಮಂಜುನಾಥ ಭಂಡಾರಿ ಹಾಗೂ ಶ್ರೀಮತಿ ಪ್ರಸನ್ನಾ ಭಂಡಾರಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಮಧುಬಂಗಾರಪ್ಪ, ಅಭಿನಂದನಾ ಸಮಿತಿ ಅಧ್ಯಕ್ಷ ಎಸ್.ಎನ್. ನಾಗರಾಜ್, ರಾಧಾಕೃಷ್ಣ, ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಇದ್ದರು.
ಎಸ್. ಪಿ. ದಿನೇಶ್ ನಿರೂಪಿಸಿದರು. ಎನ್. ರಮೆಶ್ ಸ್ವಾಗತಿಸಿದರು.

ನನ್ನ ಸಹೋದ್ಯೋಗಿಗಳು ಮತ್ತು ಪಕ್ಷದ ಕಾರ್ಯರ್ತರು ೩೫ ವರ್ಷಗಳಿಂದ ನೀವು ಹೇಳಿದ್ದನ್ನು ನಾವು ಕೇಳಿದ್ದೇವೆ. ಈ ಬಾರಿ ನೀವು ಅಭಿನಂದನೆ ಸ್ವೀಕರಿಸಲೇಬೇಕೆಂದು ಒತ್ತಡ ಹೇರಿದ್ದಕ್ಕೆ ಒಪ್ಪಿಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸುವ ಆಸೆ ಬಿಟ್ಟರೆ ನಾನು ಯಾವತ್ತೂ ಎಂಪಿ, ಎಂಎಲ್‌ಎ ಆಗಬೇಕೆಂಬ ಆಸೆ ಹೊಂದಿರಲಿಲ್ಲ. ಬಯಸಿದ್ದಲ್ಲಿ ಯಾವತ್ತೋ ನನಗೆ ಸಿಗುತ್ತಿತ್ತು. ರಾಜಕಾರಣ, ಚುನಾವಣೆ ಕೇವಲ ಎರಡು ತಿಂಗಳಿಗಷ್ಟೇ ಉಳಿದ ೪ ವರ್ಷ ೧೦ ತಿಂಗಳು ಎಲ್ಲಾ ಪಕ್ಷದವರು ಕೂಡ ನನಗೆ ಆತ್ಮೀಯತೆಯಿಂದ ಬೆಳೆಸಿದ್ದಾರೆ. ಮತ್ತು ಉತ್ತಮ ಸಂಬಂಧ ಹೊಂದಿದ್ದಾರೆ. ಆದ್ದರಿಂದ ದಕ್ಷಿಣ ಕನ್ನಡದಲ್ಲಿ ನನ್ನ ಗೆಲುವು ಸಾಧ್ಯವಾಯಿತು. ನಾನು ಹುಟ್ಟಿ ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಶಿವಮೊಗ್ಗ ಜಿಲ್ಲೆಯನ್ನು ಮರೆತುಬಿಡುವ ಪ್ರಶ್ನೆಯೇ ಇಲ್ಲ ಎಂದರು.

– ಮಂಜುನಾಥ ಭಂಡಾರಿ

ಭಂಡಾರಿಯವರು ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ನೇಹಜೀವಿಯಾಗಿದ್ದಾರೆ. ಯುವಕರ ಆಶಾಕಿರಣವಾಗಿದ್ದಾರೆ. ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ

ಡಾ. ಜಿ. ಪರಮೇಶ್ವರ್ ಮಾಜಿ ಡಿಸಿಎಂ

Ad Widget

Related posts

ಡಿಸೆಂಬರ್ ಅಂತ್ಯಕ್ಕೆ ಜೋಗ ಕಾಮಗಾರಿ ಪೂರ್ಣ
ಪ್ರಗತಿ ಪರಿಶೀಲಿಸಿದ ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ

Malenadu Mirror Desk

ಚಂದ್ರಗುತ್ತಿ ಜಾತ್ರೆಗೆ ಸ್ಥಳೀಯರಿಗೆ ಮಾತ್ರ ಅವಕಾಶ

Malenadu Mirror Desk

ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೊಪ, ಮೈಸೂರು ನಜರಾಬಾದ್ ಠಾಣೆಯಲ್ಲಿ ದೂರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.