ಶಿಕಾರಿಪುರ ಮತ್ತು ಸೊರಬ ತಾಲೂಕಿನಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ಬರಲು ಮಧುಬಂಗಾರಪ್ಪನವರ ಹೋರಾಟವೇ ಕಾರಣ ಎಂದು ಶಿಕಾರಿಪುರ ಪುರಸಭೆ ಸದಸ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಪಿ. ನಾಗರಾಜಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ರಾಘವೇಂದ್ರ ಅವರು ಏತನೀರಾವರಿ ಯೋಜನೆಗಳನ್ನು ಜಾರಿಗೆ ತಂದವರು ತಾವೇ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ೨೦೧೭ ರಲ್ಲಿ ಮಧು ಬಂಗಾರಪ್ಪ ಅವರು ಸೊರಬ ಮತ್ತು ಶಿಕಾರಿಪುರ ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದರು. ಅವರ ಹೋರಾಟದ ಫಲವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನ ಸಮ್ಮಿಶ್ರ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಯೋಜನೆಗಾಗಿ ಡಿಪಿಆರ್ ತಯಾರಿಸಲು ೮೪ ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ ನಲ್ಲಿ ೨೦೦ ಕೋಟಿ ರೂ. ಬಿಡುಗಡೆ ಮಾಡಿದ್ದರು. ಬಿಜೆಪಿ ಸರಕಾರ ಬಂದ ಮೇಲೆ ಅದನ್ನೇ ಸ್ವಲ್ಪ ಬದಲಾವಣೆ ಮಾಡಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ ಈಗ ಸಂಸದ ರಾಘವೇಂದ್ರ ಅವರು ಅದರ ರೂವಾರಿ ನಾನೇ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಗಲಾಟೆ ಮಾಡಲು ಜನ ಕಳಿಸಿದ್ದ ಬಿವೈಆರ್:
ಸಂಸದ ರಾಘವೇಂದ್ರ ಅವರು ೨೦೧೭ ರಲ್ಲಿ ಮಧು ಬಂಗಾರಪ್ಪ ಅವರ ಪಾದಯಾತ್ರೆಗೆ ಭಂಗತಂದು ಗಲಾಟೆ ಮಾಡಲು ನಮ್ಮನ್ನು ಕಳಿಸಿದ್ದರು ಎಂದು ನಾಗರಾಜಗೌಡ ಆರೋಪಿಸಿದರು. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಟೀಕಿಸಿದ್ದ ಮಧುಬಂಗಾರಪ್ಪ ಅವರ ಬಗ್ಗೆ ಅಂದು ಕೋಪಗೊಂಡಿದ್ದ ಅಂದಿನ ಶಿಕಾರಿಪುರ ಶಾಸಕರೂ ಆಗಿದ್ದ ರಾಘವೇಂದ್ರ ಅವರು, ನಮ್ಮನ್ನು ಕರೆದು ಪ್ರಚೋದಿಸಿ ಪಾದಯಾತ್ರೆ ತಡೆದು ಗಲಾಟೆ ಮಾಡಲು ಸೂಚಿಸಿದ್ದರು. ನಮ್ಮೆಲ್ಲರನ್ನು ಕರೆದುಕೊಂಡು ಸಭೆ ನಡೆಯುವ ಜಾಗಕ್ಕೆ ಹೋಗಿದ್ದರು. ಗಲಾಟೆ ಮಾಡಿದ್ದ ನಾವು ಹಿಂತಿರುಗಿ ನೋಡಿದರೆ ರಾಘವೇಂದ್ರ ಅವರು ಇರಲೇ ಇಲ್ಲ. ಬಡವರ ಮಕ್ಕಳನ್ನು ಬಾವಿಗೆ ಆಳನೋಡುವ ಜಾಯಮಾನದ ಇವರು ಈಗ ಇಲ್ಲಸಲ್ಲದ ಆರೋಪ ಮಾಡುತ್ತಾರೆ ಎಂದು ಅಂದು ಬಿಜೆಪಿಯಲ್ಲಿದ್ದಾಗ ನಡೆದಿದ್ದ ಘಟನೆಯನ್ನು ವಿವರಿಸಿದರು.
ಅಂದು ಸರಕಾರದ ಮೇಲೆ ಒತ್ತಡ ಹಾಕಲು ಮಾಡಿದ್ದ ಪಾದಯಾತ್ರೆಯನ್ನು ತಡೆಯಲು ಜನರನ್ನು ಕಳಿಸಿದ್ದವರು ಇಂದು ಮಧುಬಂಗಾರಪ್ಪ ಅವರನ್ನು ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ನಾಗರಾಜಗೌಡ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರವಿ, ಬುಡನ್ ಸಾಹೇಬ್, ಶಿವರಾಂ, ನಿಂಗಪ್ಪ, ಉಮೇಶ್ ಮತ್ತಿತರರಿದ್ದರು.