ಕಾಂಗ್ರೆಸ್ ಪಕ್ಷ ಸರ್ವರ ಪಕ್ಷ, ಈ ಪಕ್ಷ ಯಾವುದೇ ಜಾತಿ ಮತ್ತು ಧರ್ಮದ ನೆಲೆಯಲ್ಲಿ ಹುಟ್ಟಿಕೊಂಡಿದ್ದಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವನ್ನು ಸಾಮಾನ್ಯ ಜನರ ಪ್ರೀತಿ, ವಿಶ್ವಾಸದ ತಳಹದಿಯ ಮೇಲೆ ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗ ತಾಲೂಕು ಕುಂಸಿಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕುಂಸಿ ಬ್ಲಾಕ್‌ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನರ ನಡುವೆ ಇದ್ದುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಸೌಲಭ್ಯಗಳಿಗಾಗಿ ಹೋರಾಟ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರು ಮುನ್ನಡೆಯಬೇಕು. ಬರೀ ಸದಸ್ಯತ್ವ ಹೆಚ್ಚು ಮಾಡಿದರೆ ಮಾತ್ರ ಸಾಲದು ಜನಪರ ಹೋರಾಟಗಳನ್ನೂ ಮಾಡುವ ಮೂಲಕ ಸರ್ವಜನರ ವಿಶ್ವಾಸಗಳಿಸಬೇಕು ಎಂದು ಮಧುಬಂಗಾರಪ್ಪ ಹೇಳಿದರು.
ಬಿಜೆಪಿಯವರು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಮತ್ತು ಸಾವಿನ ಮೇಲೆ ರಾಜಕಾರಣ ಮಾಡುತ್ತಾರೆ. ಜಾತಿ ಮತ್ತು ಧರ್ಮಗಳ ನಡುವೆ ಒಡಕು ಹುಟ್ಟುಹಾಕುತ್ತಲೇ ಆ ಪಕ್ಷ ತನ್ನ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳುತ್ತದೆ. ಬಿಜೆಪಿಯ ಈ ಪೃವೃತ್ತಿ ದೇಶ ಹಾಳುಮಾಡುವುದಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೂ ಭೂಮಿ, ವಿದ್ಯುತ್ ಸೇರಿದಂತೆ ಮೂಲಭೂತ ಸಮಸ್ಯೆಗಳಿವೆ ಈ ಎಲ್ಲವುಗಳಿಗಾ ಹೋರಾಟ ಮಾಡುವ ಮನೋಭಾವವನ್ನು ಯುವಜನರು ಬೆಳೆಸಿಕೊಳ್ಳಬೇಕು. ಆ ಮೂಲಕ ನಾವು ಅಧಿಕಾರಕ್ಕೆ ಬರಬೇಕು. ಸೊರಬ ತಾಲೂಕಿನಲ್ಲಿ ಹಲವು ಹೋರಾಟಗಳನ್ನು ಮಾಡಿದ ಬಳಿಕ ಸದಸ್ಯತ್ವ ಅಭಿಯಾನಕ್ಕೂ ಅನುಕೂಲವಾಯಿತು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್. ಎಸ್. ಸುಂದರೇಶ್, ಕೆಪಿಸಿಸಿ ವೀಕ್ಷಕರಾದ ಹುಸೇನ್,ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಡಾ. ಶ್ರೀನಿವಾಸ್ ಕರಿಯಣ್ಣ , ಪಲ್ಲವಿ, ವಿಜಯಕುಮಾರ್, ಶೆಟ್ಟಿಕೆರೆ ರಾಜಪ್ಪ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜ್, ಪ್ರಮುಖರಾದ ಜಿ.ಡಿ.ಮಂಜುನಾಥ್, ಕುಂಸಿ ಸಂಜೀವಣ್ಣ, ಕುಂಸಿ ರಾಮಣ್ಣ, ವೈ. ಎಚ್ .ನಾಗರಾಜ್, ಚೋರಡಿ ಕಷ್ಣಮೂರ್ತಿ, ಡಿ.ಕೆ. ಮೋಹನ್ ,ಚೋರಡಿ ರಾಜೇಶ್,ಕುಂಸಿ ಮಂಜಣ್ಣ ಮತ್ತಿತರರು ಭಾಗವಹಿಸಿದ್ದರು.
ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ನೀಡಿದ ಕೊಡುಗೆಗಳನ್ನು ಇಂದಿನ ಪೀಳಿಗೆಗೆ ತಿಳಿಸಬೇಕು. ಬರೀ ಸುಳ್ಳು ಹೇಳುವ ಮೂಲಕ ತ್ಯಾಗ ಬಲಿದಾನ ಮಾಡಿದ ಪಕ್ಷ ಮತ್ತು ನೇತಾರರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವುದನ್ನು ಯುವಜನರು ತಡೆಯಬೇಕು. ಸುಳ್ಳುಗಳನ್ನು ಬಯಲು ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು
–ಮಧು ಬಂಗಾರಪ್ಪ, ಮಾಜಿ ಶಾಸಕ