ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕುನೀಡುವಂತೆ ಆಗ್ರಹಿಸಿ ಮಾರ್ಚ್ 29ರಂದು ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಶರಾವತಿ ಹಿನ್ನೀರಿನ ಮುಳುಗಡೆ ರೈತರ ಸಂಘದ ಅಧ್ಯಕ್ಷ ಹೂವಪ್ಪ ಕೂಡಿ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಡಿಗೆ ಬೆಳಕು ನೀಡಲು ಸಾಗರ ಹಾಗೂ ಹೊಸನಗರ ತಾಲೂಕಿನಲ್ಲಿ ಶರಾವತಿ ಆಣೆಕಟ್ಟಿಗಾಗಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.1959-62 ರಲ್ಲಿ ಭೂಮಿ ಬಿಡುಗಡೆಯಾದರೂ ಹಂಚಿಕೆ ಮಾಡದೆ ಭೂ ವಂಚಿತರನ್ನಾಗಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಚ್ ೨೯ ರಂದು ನಗರದ ಆಲ್ಕೊಳ ವೃತ್ತದಿಂದ ಪ್ರಾರಂಭವಾಗುವ ಬೃಹತ್ ಪ್ರತಿಭಟನೆ ಅಶೋಕ ವೃತ್ತ, ಅಮೀರ್ ಅಹ್ಮದ್ ವೃತ್ತ,ಗೋಪಿ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ ಎಂದರು.
ದಿನಾಂಕ 15-02-1962ರ ಸರ್ಕಾರದ ಆದೇಶದ ಪ್ರಕಾರ ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶಗಳ ಜೊತೆಗೆ ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಗ್ರಾಮದ ಸರ್ವೆ ನಂ167ರಲ್ಲಿ ಹಾಗೂ ಶೆಟ್ಟಿಹಳ್ಳಿ ಒಟ್ಟು 1200 ಎಕರೆ ಜಾಗವನ್ನು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿಗಾಗಿ ಮೀಸಲಿಡಲಾಗಿದೆ.ಆದರೆ ಆರು ದಶಕಗಳು ಕಳೆದರೂ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡದೆ ಸರಕಾರಗಳು ನಮಗೆ ವಂಚನೆ ಮಾಡಿವೆ ಎಂದು ದೂರಿದರು.
2009 ರಲ್ಲಿ ಸಂಘದ ಪರವಾಗಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಮನವಿ ಆಲಿಸಿದ ನ್ಯಾಯಾಲಯ 2014ರಲ್ಲಿ 6 ತಿಂಗಳೊಳಗೆ ಅರ್ಜಿದಾರರ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಆರು ತಿಂಗಳೊಳಗೆ ಇತ್ಯರ್ಥವಾಗದ ಕಾರಣ 2021ರಲ್ಲಿ ಪುನಃ ವಿಚಾರಣೆ ನಡೆಸಿದ ಮಾನ್ಯ ಉಚ್ಚ ನ್ಯಾಯಾಲಯ 4 ತಿಂಗಳೊಳಗೆ ಇತ್ಯರ್ಥ ಪಡಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶ ಪಾಲನೆ ಮಾಡದ ಕಾರಣ17-11-2021 ಹೈಕೋರ್ಟ್ ನ್ಯಾಯಾಂಗ ನಿಂಧನೆ ಅರ್ಜಿ ವಿಚಾರಣೆ ನಡೆಸಿ ೨ ವಾರದೊಳಗೆ ವರದಿ ನೀಡಲು ಜಿಲ್ಲಾಡಳಿತಕ್ಕೆ ಆದೇಶಿಸಿತ್ತು. ಈ ವಿಚಾರವು ಜಿಲ್ಲಾಡಳಿತದ ಹಂತದಲ್ಲಿದ್ದು,ಇತ್ಯರ್ಥವಾಗಬೇಕಿದೆ.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸರ್ಕಾರಗಳಿಗೆ ಇಚ್ಚಾಶಕ್ತಿಯ ಕೊರತೆ ಇದೆ.ಅಧಿಕಾರಿಗಳು ಯಾವುದೇ ರೀತಿಯ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಮಹೇಶ್,ನಾಗರಾಜ್ ಎಂ.ಡಿ,ಕೆ.ಎಂ ಆಶೋಕ್,ಶಿವಾನಂದ್, ಕೇಶವ್, ಮಹೇಶ್ ಮತ್ತಿತರರು ಇದ್ದರು.
ಶರಾವತಿ ಸಂತ್ರಸ್ಥರ ಬೇಡಿಕೆಗಳೇನು ?
- 1962ರಿಂದ ನಮಗೆ ಭೂಮಿ ಹಕ್ಕು ಸಿಕ್ಕಿಲ್ಲ. ಕೂಡಲೇ ಸರ್ಕಾರ ಭೂಮಿ ಕೊಡಬೇಕು ಇಲ್ಲ,ನಾವು ಮುಳುಗಡೆ ಆಗಿರುವ ಜಾಗವನ್ನು ನಮಗೆ ಬಿಟ್ಟು ಕೊಡಬೇಕು
- ಶರಾವತಿ ಸಂತ್ರಸ್ಥ ಕುಟಂಬಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕು.
- 1962 ರಿಂದ ಇಲ್ಲಿಯವರೆಗೆ ಪರಿಹಾರ ನಷ್ಟ ಬಡ್ಡಿ ಸಮೇತ ತುಂಬಿಕೊಡಬೇಕು.
- 2017-18ರಲ್ಲಿ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ಮಾಡಿದ್ದು,ಮುಳುಗಡೆ ಸಂತ್ರಸ್ಥರ ಬದುಕು ಅತಂತ್ರಗೊಳಿಸಲು ಕೆಲವು ರಾಜಕಾರಣಿಗಳ ಪಿತೂರಿಯಿಂದ ಗಿರೀಶ್ ಆಚಾರಿ ಎನ್ನುವ ಸಾಮಾಜಿಕ ಕಾರ್ಯಕರ್ತ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಸಂತ್ರಸ್ಥರನ್ನು ಭೂ ವಂಚಿತರನ್ನಾಗಿ ಮಾಡಿದ್ದಾರೆ.ಇವರೇ 60 ವರ್ಷಗಳ ನಷ್ಟದ ಬಾಬ್ತನ್ನು ಬಡ್ಡಿ ಸಮೇತ ತುಂಬಿಕೊಡಬೇಕು.
- ಅರಣ್ಯ ಇಲಾಖೆಯವರು ಮುಳುಗಡೆ ಸಂತ್ರಸ್ತರಿಗೆ ಕಾಯ್ದಿರಿಸಿದ ಜಮೀನನ್ನು ಅರಣ್ಯ ಎಂದು ಮಾಡಿ ಅವರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ.ಇದನ್ನು ಕೈಬಿಡಬೇಕು.
- ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡುವಂತೆ ಮಾನ್ಯ ಉಚ್ಚ ನ್ಯಾಯಾಲಯ ೪ ಬಾರಿ ಆದೇಶ ಮಾಡಿದ್ದರೂ,ಆ ಆದೇಶ ಪಾಲನೆ ಮಾಡದೆ ನ್ಯಾಯಾಂಗ ನಿಂದನೆ ಮಾಡಿರುವ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು.
- 1959 ರಲ್ಲಿ ಮೈಸೂರು ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು.
- ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಾಗೂ ಗೇಣಿದಾರ ಕುಟುಂಬಗಳಿಗೆ ಮೀಸಲಿಟ್ಟ ಜಾಗವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು,ಅದನ್ನು ಅರಣ್ಯ ಇಲಾಖೆಯಿಂದ ಬಿಡುಗಡೆಗೊಳಿಸಬೇಕು.
- ಶರಾವತಿ ಮುಳುಗಡೆ ಸಂತ್ರಸ್ಥರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ಸಂತ್ರಸ್ಥರ ಉಳುವ ಭೂಮಿಗಳಿಗೆ ಶಾಶ್ವತವಾದ ನೀರಾವರಿ ಸೌಲಭ್ಯ ಕಲ್ಪಿಸಬೇಕು.