ನಾಡಿಗೆ ಬೆಳಕು ನೀಡಲು ಸರ್ವತ್ಯಾಗ ಮಾಡಿದ ಮತ್ತು ತಾವು ಉಳುಮೆ ಮಾಡುವ ಭೂಮಿಗೆ ಹಕ್ಕು ಪತ್ರ ಇಲ್ಲದೆ ಅತಂತ್ರರಾಗಿರುವ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಎಸ್.ರಾಮಪ್ಪ ಹಾಗೂ ನಿಟ್ಟೂರಿನ ನಾರಾಯಣಗುರು ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀರೇಣುಕಾನಂದ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ದಲ್ಲಿ ಜಿಲ್ಲಾ ಶರಾವತಿ ಹಿನ್ನೀರಿನ ಮುಳುಗಡೆ ರೈತರ ಸಂಘದ ನೇತೃತ್ವದಲ್ಲಿ ನಡೆದ ಶರಾವತಿ ಮುಳುಗಡೆ ಸಂತ್ರಸ್ತರ ಪಾದಯಾತ್ರೆ ಹಾಗೂ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ನಾಡಿನ ಪ್ರಗತಿಯ ಉದ್ದೇಶದಿಂದ ಸಂತ್ರಸ್ಥರ ಬಾಳು ಇಂದಿಗೂ ಸಂಕಷ್ಟದಲ್ಲಿದೆ. ಉಳುವ ಭೂಮಿಗೆ ಹಕ್ಕು ಪತ್ರ ನೀಡದಿದ್ದಲ್ಲಿ ಮುಂದೆ ನಮ್ಮ ಮಕ್ಕಳ ಭವಿಷ್ಯವೂ ಅತಂತ್ರವಾಗಲಿದೆ. ಕಾಗೋಡು ಚಳವಳಿ ಕಟ್ಟಿದ ಈ ನಾಡಲ್ಲಿ ಮತ್ತೊಂದು ಅದೇ ಮಾದರಿಯ ಹೋರಾಟ ಆಗಬೇಕಿದೆ ಎಂದು ಧರ್ಮದರ್ಶಿ ರಾಮಪ್ಪ ಹೇಳಿದರು.
ಪಕ್ಷಾತೀತವಾಗಿ ಹೋರಾಟ ಮಾಡಬೇಕು ರೈತರ ಅನ್ನದ ಪ್ರಶ್ನೆಯಾಗಿರುವುದರಿಂದ ಇಲ್ಲಿ ರಾಜಕೀಯದ ಪ್ರವೇಶ ಬೇಡ. ಎಲ್ಲರೂ ಸೇರಿ ಉಳುವ ಭೂಮಿಗೆ ಹಕ್ಕು ಕೊಡಿ ಎಂದು ಸರಕಾರದ ಬಳಿ ಕೇಳೋಣ ನಿಮಗೆ ನ್ಯಾಯ ಕೊಡಿಸಲು ಒಬ್ಬ ಮುಳುಗಡೆ ಸಂತ್ರಸ್ತನಾಗಿ ತಾವು ಯಾವತ್ತೂ ಬೆನ್ನಿಗಿರುವುದಾಗಿ ಹೇಳಿದರು
ಭಕ್ತರ ನೋವಿಗೆ ಸ್ಪಂದನೆ:
ಮುಳುಗಡೆ ಸಂತ್ರಸ್ತರ ಊರುಗಳಿಗೆ ಸ್ವತಃ ಹೋಗಿ ನೋಡಿದ್ದೇನೆ, ಅವರ ಕಷ್ಟ ಮತ್ತು ತೋಟತುಡಿಕೆ ಮಾಡಿಕೊಂಡಿದ್ದರೂ ಅದರ ಮೇಲೆ ಹಕ್ಕುದಾರಿಕೆ ಇಲ್ಲದ ಅಭದ್ರ ಬದುಕು ಅವರದಾಗಿದೆ ಎಂದು ರೇಣುಕಾನಂದ ಶ್ರೀ ಹೇಳಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಶಾಸಕರು, ಸಚಿವರು, ಸಂಸದರು, ಮಾಜಿ ಮುಖ್ಯಮಂತ್ರಿಗಳು ಎಲ್ಲರೂ ಇದ್ದಾರೆ ಅವರ ಬಳಿ ಸಂತ್ರಸ್ತರ ನೋವು ಹೇಳಿಕೊಳ್ಳೋಣ. ಇಂದಿನ ಪ್ರತಿಭಟನೆಗೆ ಸ್ಪಂದಿಸಿರುವ ಗೃಹಸಚಿವರು, ಸರಕಾರದ ಮಟ್ಟದಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಕಾಲಮಿತಿಯಲ್ಲಿ ಕೆಲಸ ಆಗುವಂತೆ ಮನವಿ ಮಾಡೋಣ. ಸೂಕ್ತ ನ್ಯಾಯ ಸಿಗದಿದ್ದಲ್ಲಿ ಸ್ವಾಮೀಜಿಗಳಿಗೆ ಭಕ್ತರೇ ಆಸ್ತಿ. ಅವರ ಪರವಾಗಿ ಬೀದಿಗಿಳಿಯುತ್ತೇನೆ. ಬರೀ ಇಲ್ಲಿ ಮಾತ್ರವಲ್ಲದೆ ಬೆಂಗಳೂರು ಚಲೊದಂತಹ ಕಾರ್ಯಕ್ರಮ ಮಾಡೋಣ ಸರಕಾರದ ಮೇಲೆ ಒತ್ತಡ ಹಾಕೋಣ ಎಂದು ರೇಣುಕಾನಂದ ಶ್ರೀ ಹೇಳಿದರು.
ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಶರಾವತಿ ಸಂತ್ರಸ್ತರ ತ್ಯಾಗದಿಂದಾಗಿ ಬೃಹತ್ ಜಲವಿದ್ಯುತ್ ಯೋಜನೆ ಆಗಿದ್ದು, ಅದರಿಂದ ಕಳೆದ ಆರು ದಶಕಗಳಿಂದ ಸರಕಾರಕ್ಕೆ ಲಕ್ಷಾಂತರ ಕೋಟಿ ರೂ. ಆದಾಯ ಬಂದಿದೆ. ಆದರೆ ರೈತರು ಉಳುವ ಭೂಮಿ ತಮ್ಮದಲ್ಲ ಎಂಬ ಭಯದಲ್ಲಿದ್ದಾರೆ.ಯೋಜನೆ ಜಾರಿ ಸಂದರ್ಭ ಬಿಡುಗಡೆ ಮಾಡಿದ್ದ ಭೂಮಿಯನ್ನು ಮತ್ತೆ ಅರಣ್ಯಕ್ಕೆ ಸೇರಿಸಿ ಅಧಿಕಾರಿಗಳು ದ್ರೋಹ ಮಾಡಿದ್ದಾರೆ. 2017 ರಲ್ಲಿ ಅಂದಿನ ಸರಕಾರ ಡಿನೋಟಿಫಿಕೇಷನ್ ಮಾಡಿದ್ದನ್ನು ಕೆಲವರು ಪ್ರಶ್ನೆ ಮಾಡಿದ್ದರಿಂದ ನ್ಯಾಯಾಲಯ ಇಡೀ ಪ್ರಕ್ರಿಯೆಯನ್ನು ರದ್ದುಮಾಡಿದೆ. ಸರಕಾರ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರಕಾರದ ಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಬೇಕು ಎಂದು ಹೇಳಿದರು.
ಶೆಟ್ಟಿಕೆರೆ ರಾಜಪ್ಪ ಮಾತನಾಡಿ, ಮುಳುಗಡೆ ಸಂತ್ರಸ್ತರ ಗೋಳಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಕಠಿಣ ಕಾನೂನುಗಳನ್ನು ನ್ಯಾಯಾಲಯದ ಹಂತದಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್‌ಮೂರ್ತಿ ಮಾತನಾಡಿ, ಆರು ದಶಕಗಳು ಕಳೆದರೂ ಮುಳುಗಡೆ ಸಂತ್ರಸ್ತರ ಸಮಸ್ಯೆ ಇನ್ನೂ ಜೀವಂತವಾಗಿರುವುದು ನೋವಿನ ಸಂಗತಿ. ಸರಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಬದ್ಧರಾಗಿದ್ದಾರೆ. ನಾವು ಅವರೊಂದಿಗೆ ಮಾತನಾಡುತ್ತೇವೆ ಎಂದು ಹೇಳಿದರು.
ಹೋರಾಟ ಸಮಿತಿ ಅಧ್ಯಕ್ಷ ಕೂಡಿ ಹೂವಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಈ ಹೋರಾಟ ಮುಂದುವರಿಯುತ್ತದೆ. ಶಾಸಕರಾದ ಹಾಲಪ್ಪ, ಸಚಿವರಾದ ಆರಗಜ್ಞಾನೇಂದ್ರ, ಸಂಸದರು ನಮ್ಮ ಸಮಸ್ಯೆ ಬಗ್ಗೆ ಕಾಳಜಿ ಹೊಂದಿದ್ದು, ಎಲ್ಲರ ಬಳಿಯೂ ನಾವು ಹೋಗುತ್ತೇವೆ. ಈಗಾಗಲೇ ಬೆಂಗಳೂರಿನಲ್ಲಿ ಹಲವು ಸಭೆಗಳಾಗಿವೆ. ಆದರೆ ನಿರ್ಣಾಯಕ ಹಂತದಲ್ಲಿ ಕಾನೂನು ತೊಡುಕು ಎಂದು ಹೇಳುತ್ತಿದ್ದಾರೆ. ಜಿಲ್ಲೆಯಾದ್ಯಂತ ಸಂತ್ರಸ್ತರ ಸಂಘಟನೆ ಮಾಡಿ ಶಾಂತಿಯುತ ಹೋರಾಟ ಮುಂದುವರಿಸುತ್ತೇವೆ ಎಂದರು.
ತೀರ್ಥಹಳ್ಳಿ ಎಪಿಎಂಸಿ ಉಪಾಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ ಮಾತನಾಡಿ, ಶರಾವತಿ ಸಂತ್ರಸ್ತರ ವಿಚಾರದಲ್ಲಿ ಹಿಂದೆ ಏನು ಅನ್ಯಾಯ ಆಗಿದೆ ಎಂಬ ಬಗ್ಗೆ ವಿಮರ್ಶೆ ಮಾಡಲು ಹೋಗುವುದಿಲ್ಲ. ಆದರೆ ಈಗಿನ ಸರಕಾರ ಸಚಿವರು ಈ ಸಮಸ್ಯೆಗೊಂದು ತಾರ್ಕಿಕ ಅಂತ್ಯ ಹಾಡಲು ಮನಸು ಮಾಡಿದ್ದಾರೆ. ಪಕ್ಷಾತೀತವಾಗಿ ಹೋರಾಟ ಮುಂದುವರಿಸೋಣ ಎಂದು ಹೇಳಿದರು.
ರಾಜ್ಯಕಾಂಪೋಸ್ಟ್ ಗೊಬ್ಬರ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತವೀರನಾಯ್ಕ, ಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು, ಧರ್ಮೇಶ್ :ಶಿರವಾಳ, ಹಣಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಯಶೋದ ಸುರೇಶ್, ಉಪಾಧ್ಯಕ್ಷ ಕೆ.ಎಂ.ಅಶೋಕ್ ಕಿರುವಾಸೆ, ಹೋರಾಟ ಸಮಿತಿ ಉಪಾಧ್ಕ್ಷ ರಾಘವೇಂದ್ರ ಕೋಳೂರು,ಕಾರ್ಯದರ್ಶಿ ಶಶಿಕಲಾ, ಪ್ರಮುಖರಾದ ಎಂ.ಡಿ.ನಾಗರಾಜ್ ಪುರದಾಳು, ಶಿವಣ್ಣಸೂಡೂರು, ತಂಟಿ ಕಾಳನಾಯ್ಕ ಕಾನಳ್ಳಿ ಗಣಪತಿ, ಕನ್ನಂಗಿ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್, ತಾ.ಪಂ.ಸದಸ್ಯ ಕುಕ್ಕೆ ಪ್ರಶಾಂತ್, ಕೃಷ್ಣಪ್ಪ ಜೆ. ಸುರೇಶ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಶರಾವತಿ ಸಂತ್ರಸ್ತರು ಕಾನೂನಿನ ಸುಳಿಯಲ್ಲಿ ಸಿಲುಕಿದ್ದಾರೆ. ಸರಕಾರವೇ ನಿಂತು ಕಾನೂನು ಹೋರಾಟ ಮಾಡಬೇಕು. ಪರಿಸರವಾದಿಗಳೂ ಕೂಡಾ ಬಡವರ ಅನ್ನಕ್ಕೆ ಕುತ್ತು ತರುವುದನ್ನು ನಿಲ್ಲಿಸಬೇಕು. ಹೊಟ್ಟೆಪಾಡಿಗಾಗಿ ಒಂದು, ಎರಡು ಎಕರೆ ಭೂಮಿ ಸಾಗುವಳಿ ಮಾಡಿದವರು ಒತ್ತುವರಿದಾರರಲ್ಲ
ತೀನಾ ಶ್ರೀನಿವಾಸ್
ನಾಡಿಗಾಗಿ ತ್ಯಾಗ ಮಾಡಿದವರ ಬಾಳಿನ ಗೋಳು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಈ ಸಮುದಾಯಕ್ಕೆ ನಿರಂತರವಾಗಿ ಅನ್ಯಾಯವಾಗಿದೆ. ಅದನ್ನು ಸರಿಪಡಿಸದೆ ಹೋದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ
ಸಾಲೇಕೊಪ್ಪ ರಾಮಚಂದ್ರ
ಪರಿಸರವಾದಿಗಳೇ ಅಡ್ಡಗಾಲು
ಸಂತ್ರಸ್ತರ ಪ್ರತಿಭಟನೆಗೆ ಸ್ಪಂದಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ದೂರವಾಣಿ ಮೂಲಕ ಮಾತನಾಡಿ, ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ನನಗೆ ಅರಿವಿದೆ. ನಿಜಕ್ಕೂ ಅವರಿಗೆ ಘೋರ ಅನ್ಯಾಯವಾಗಿದೆ. ನಾಡಿಗಾಗಿ ತ್ಯಾಗ ಮಾಡಿದ ಅವರ ನೋವಿಗೆ ಸರಕಾರ ಸ್ಪಂದಿಸಲಿದೆ. ಅರಣ್ಯದ ವಿಚಾರದಲ್ಲಿ ಸುಪ್ರೀಂ ಕೋರ್ಟ್, ಹಸಿರು ಪೀಠದಲ್ಲಿ ಹಲವು ಆದೇಶಗಳಾಗಿವೆ. ಅವುಗಳಿಗೆ ಅನುಗುಣವಾಗಿ ಸರಕಾರ ಕಾರ್ಯನಿರ್ವಹಿಸಬೇಕಿದೆ. ಪರಿಸರವಾದಿಗಳ ಅಡ್ಡಗಾಲುಗಳೂ ಇವೆ. ಶರಾವತಿ ಸಂತ್ರಸ್ತರ ಸಮಸ್ಯೆ ಇಂದಿನದಲ್ಲ. ಈ ಎಲ್ಲ ತೊಡಕುಗಳ ನಡುವೆಯೂ ಏನು ಮಾಡಬಹುದು ಎಂಬ ಬಗ್ಗೆ ನಾವು ವಿಚಾರ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.