Malenadu Mitra
ರಾಜ್ಯ ಶಿವಮೊಗ್ಗ

ಅವೈಜ್ಞಾನಿಕ ನೀರಿನ ಬಿಲ್ ಕಟ್ಟಬೇಡಿ: ನಾಗರೀಕ ಹಿತರಕ್ಷಣಾ ಸಮಿತಿಗಳ ಒಕ್ಕೂಟ

ಶಿವಮೊಗ್ಗ ನಗರದ ಕುಡಿಯುವ ನೀರು ಪೂರೈಕೆಯ ದೋಷಪೂರಿತ ಯೋಜನೆ ಸರಿಯಾಗುವ ತನಕ ನಾಗರೀಕರು ನೀರಿನ ಬಿಲ್ ಪಾವತಿ ಮಾಡಬಾರದು ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಕರೆ ನೀಡಿದೆ.
ಶಿವಮೊಗ್ಗ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್ ಕುಮಾರ್ ಅವರು, ಶಿವಮೊಗ್ಗ ನಗರದಲ್ಲಿ 24*7 ಕುಡಿಯುವ ನೀರಿನ ಯೋಜನೆ ತೀರಾ ಅವೈಜ್ಞಾನಿಕವಾಗಿದೆ. ಅವರು ಅಳವಡಿಸಿರುವ ಮೀಟರ್ ಗಾಳಿಗೆ ಓಡುತ್ತದೆ. ನೀರಿನ ಕರ ಬೇಕಾಬಿಟ್ಟಿ ಬರುತ್ತಿದೆ. ಈ ಬಗ್ಗೆ ಸಮಿತಿ ಹೋರಾಟ ಮಾಡಿ ಮನವಿ ನೀಡಿದ್ದರೂ ಯಾವುದೇ ಪ್ರತಿಸ್ಪಂದನೆ ಇಲ್ಲವಾಗಿದೆ ಎಂದು ದೂರಿದರು.
ನಗರದಲ್ಲಿ 61 ಸಾವಿರ ನೀರಿನ ಸಂಪರ್ಕಗಳಿವೆ, ಅದರಲ್ಲಿ 12ಸಾವಿರ ಸಂಪರ್ಕಗಳಿಗೆ ಇಪ್ಪತ್ತು ನಾಲ್ಕು ಗಟೆ ನೀರುವ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅದರಲ್ಲಿ ಕೇವಲ 3500 ಸಂಪರ್ಕಗಳಿಗೆ ಮಾತ್ರ ಹೊಸದಾಗಿ ಅಳವಡಿಸಿರುವ ದರಪಟ್ಟಿಯಂತೆ ಬಿಲ್ ನೀಡಲಾಗಿದೆ. ಈ ಜನರು ಮಾಡಿದ ಪಾಪವಾದರೂ ಏನು ಎಂದು ಪ್ರಶ್ನಿಸಿದ ವಸಂತ್ ಕುಮಾರ್, ಪ್ರತಿತಿಂಗಳು ೫೦೦ ರಿಂದ ೮೦೦೦ ದವರೆಗೆ ಬಿಲ್ ಬರುತ್ತಿದೆ ಎಂದರೆ ಈ ಹಗಲು ದರೋಡೆಯ ಅರಿವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿ ದರ್ಜೆ ನಗರ ಮೈಸೂರಿನಲ್ಲಿ ೨೫೦೦೦ ಲೀಟರ್ ವರೆಗೆ 125 ರೂ.ದರ ನಿಗದಿಯಾಗಿದ್ದರೆ, ಶಿವಮೊಗ್ಗದಲ್ಲಿ 275ರೂ. ದರ ನಿಗದಿಮಾಡಲಾಗಿದೆ.50000 ಲೀಟರ್‌ವರೆಗೆ ಮೈಸೂರಿನಲ್ಲಿ400 ರೂ. ಇದ್ದರೆ, ಶಿವಮೊಗ್ಗದಲ್ಲಿ ೬೫೦ ರೂ. ದರ ನಿಗದಿ ಮಾಲಾಗಿದೆ. ಶಿವಮೊಗ್ಗ ನಗರ ತುಂಗಾ ನದಿಯ ದಡದಲ್ಲಿಯೇ ಇದ್ದರೂ ಕುಡಿಯುವ ನೀರಿಗೆ ದುಬಾರಿ ಬೆಲೆ ನಿಗದಿಮಾಡಿರುವುದು ಅವೈಜ್ಞಾನಿಕವಾದ ಕ್ರಮವಾಗಿದೆ ಎಂದು ವಸಂತ್‌ಕುಮಾರ್ ಹೇಳಿದರು.
ಹಳೇ ವ್ಯವಸ್ಥೆ ಬರಲಿ:
ಸಮಿತಿ ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ನಗರದ ಕುಡಿಯುವ ನೀರಿನ ಅವ್ಯಸ್ಥೆ ಇಷ್ಟೆಲ್ಲಾ ಇದ್ದರೂ ಮಹಾನಗರ ಪಾಲಿಕೆಯ ಆಡಳಿತ ತಮಗೆ ಸಂಬಂಧವೇ ಇಲ್ಲ ಎನ್ನುವಂತಿದೆ. ಈ ಬಗ್ಗೆ ಮೇಯರ್ ಅವರನ್ನು ಕೇಳಿದರೆ ಜಲಮಂಡಳಿಯ ಕಡೆ ತೋರಿಸುತ್ತಾರೆ. ಇದರಿಂದ ಪಾಲಿಕೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಇಡೀ ನಗರದಲ್ಲಿ ಏಕರೂಪದ ವ್ಯವಸ್ಥೆ ಜಾರಿಯಾಗುವ ತನಕ ಈಗ ಕೊಟ್ಟಿರುವ ಬಿಲ್ ಅನ್ನು ಯಾರೂ ಪಾವತಿ ಮಾಡಬಾರದು. ಅಲ್ಲೀತನಕ ಹಳೆಯ ವ್ಯವಸ್ಥೆ ಮುಂದುವರಿಸಬೇಕೆಂದು ಆಗ್ರಹಿಸಿದರು.
ಇಪ್ಪತ್ತನಾಲ್ಕು ಗಂಟೆ ನೀರು ಪೂರೈಕೆ ವ್ಯವಸ್ಥೆ 226 ಕೋಟಿ ರೂ.ಗಳ ಯೋಜನೆಯಾಗಿದ್ದು, ಈ ಅನುದಾನ ನೋಡಿದರೆ, ನಗರದಲ್ಲಿ ಐದುವರ್ಷಗಳ ಕಾಲ ಇಡೀ ನಗರಕ್ಕೆ ಉಚಿತವಾಗಿ ನೀರು ಪೂರೈಕೆ ಮಾಡಬಹುದು. ಆದರೆ ಈಗ ಆಗಿರುವ ವ್ಯವಸ್ಥೆ ನೋಡಿದರೆ ಅನುಮಾನಗಳು ಮೂಡುತ್ತವೆ. ಸರಕಾರ ಈ ಬಗ್ಗೆ ಗಮನ ಹರಿಸಬೇಕು.
ಪೂರ್ಣ ವ್ಯವಸ್ಥೆ ಸರಿಯಾಗುವ ತನಕ ಹಳೇ ವ್ಯವಸ್ಥೆಯೇ ಮುಂದುವರಿಯಬೇಕು ಎಂದು ಅವರು ಆಗ್ರಹಿಸಿದರು. ಒಕ್ಕೂಟದ ಪ್ರಮುಖರಾದ ಕೆ.ಬಿ.ಅಶೋಕ್‌ಕುಮಾರ್, ರವಿಕಿಶನ್, ಚಂದ್ರಶೇಖರ್ ಗೌಡ, ಸೀತಾರಾಂ, ಸುಬ್ರಹ್ಮಣ್ಯ, ವಿನೋದ್ ಪೈ ಮತ್ತಿತರರು ಹಾಜರಿದ್ದರು.


ಸಚಿವರಿಗೆ ಮನವಿ

ಶಿವಮೊಗ್ಗ ನಗರದ ನಾಗರೀಕರಿಗೆ ಇಷ್ಟೆಲ್ಲ ತೊಂದರೆ ಇದ್ದರೂ ಸ್ಥಳೀಯ ಶಾಸಕರು ಹಾಗೂ ಸಚಿವರಾದ
ಕೆ.ಎಸ್.ಈಶ್ವರಪ್ಪ ಅವರು ಗಮನ ಹರಿಸಿಲ್ಲ. ಈ ಕಾರಣದಿಂದ ಒಕ್ಕೂಟವು ಸಚಿವರಿಗೆ ಮನವಿ ಸಲ್ಲಿಸಿದೆ.
ಅವೈಜ್ಞಾನಿಕ ದರ ನಿಗದಿಮಾಡಿರುವುದನ್ನು ಮನವರಿಕೆ ಮಾಡಲಾಗಿದೆ ಎಂದು ವಸಂತಕುಮಾರ್ ಹೇಳಿದರು.
ಸಚಿವರು ಕೂಡಲೇ ಸಂಘ ಸಂಸ್ಥೆಗಳು, ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳ ಸಭೆಯನ್ನು ಕರೆಯಬೇಕು.
ನಾಗರೀಕರಿಗೆ ಆಗುತ್ತಿರುವ ತೊಂದರೆ ನಿವಾರಿಸುವುದು ಅವರ ಕರ್ತವ್ಯ ಎಂದ ಅವರು, ಬಿಲ್ ನೀಡಿಕೆಯಲ್ಲಿ ತಾರತಮ್ಯ ಸಲ್ಲದು.
ಇಡೀ ನಗರಕ್ಕೆ ಒಂದೇ ವ್ಯವಸ್ಥೆ ಜಾರಿಮಾಡಬೇಕು ಎಂದು ಹೇಳಿದರು.

ಸರಕಾರಕ್ಕೆ ನೋಟಿಸ್

ಶಿವಮೊಗ್ಗ ನಗರದಲ್ಲಿ ಅವೈಜ್ಞಾನಿಕ ಆಸ್ತಿ ತೆರಿಗೆ ವ್ಯವಸ್ಥೆಯ ವಿರುದ್ಧ ಹಲವು ಹೋರಾಟ ಮಾಡಿರುವ
ನಾಗರಿಕ ಹಿತರಕ್ಷಣಾಸಮಿತಿಗಳ ಒಕ್ಕೂಟ ಸರಕಾರದ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.
ನಮ್ಮ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ನ್ಯಾಯಾಲಯ ಈ ಸಂಬಂಧ ಸರಕಾರಕ್ಕೆ ನೋಟೀಸ್ ನೀಡಿದೆ ಎಂದು
ವಸಂತಕುಮಾರ್ ಮಾಹಿತಿ ನೀಡಿದರು.

Ad Widget

Related posts

ಜಿಲ್ಲಾ ಕಾಂಗ್ರೆಸ್‌ನಲ್ಲಿ ಬದಲಾವಣೆಯ ಗಾಳಿ, ಅಧ್ಯಕ್ಷಗಾದಿಗಾಗಿ ಹಲವರ ಪ್ರಯತ್ನ, ಮಧು ಬಂಗಾರಪ್ಪ ಒಲವಿದ್ದವರಿಗಿದೆ ಅದೃಷ್ಟ

Malenadu Mirror Desk

ಶಿವಮೊಗ್ಗದಲ್ಲಿ ಮುಂದುವರಿದ ಕೊರೊನಾಘಾತ: 14 ಸಾವು

Malenadu Mirror Desk

ಎಸ್.ಬಂಗಾರಪ್ಪ-92 ಜನ್ಮದಿನೋತ್ಸವ : ಮೂವರು ಸಾಧಕರಿಗೆ “ಬಂಗಾರ” ಪ್ರಶಸ್ತಿ ಅ.26 ರಂದು ಪ್ರದಾನ.

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.