ಭದ್ರಾವತಿ ತಾಲೂಕು ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಕ್ಯಾಂಪಸ್‌ನಲ್ಲಿ ಭಾನುವಾರ ರಾತ್ರಿ ಕಾಡಾನೆ ವಿಹಾರ ನಡೆಸಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆತಂಕಗೊಂಡಿದ್ದಾರೆ.
ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನಲ್ಲಿ ಕಾಡಾನೆ ಉಪಟಳ ಇತ್ತೀಚೆಗೆ ಹೆಚ್ಚಾಗಿದ್ದು, ರೈತರ ಗದ್ದೆ ಮತ್ತು ತೋಟಗಳಿಗೆ ದಾಳಿ ಇಡುತ್ತಿವೆ. ಭಾನುವಾರ ಸಂಜೆ ವಿಶಾಲವಾದ ವಿವಿ ಕ್ಯಾಂಪಸ್‌ನೊಳಗೆ ಹೇಗೊ ಬಂದ ಕಾಡಾನೆಯಿಂದ ಕ್ಯಾಂಪಸ್ ತುಂಬಾ ಓಡಾಡಿದೆ. ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣಕ್ಕೆ ಎರಡು ಆನೆಗಳು ಬಂದಿವೆ ಎಂದು ಹೇಳಲಾಗಿದೆ. ಕ್ಯಾಂಪಸ್‌ನೊಳಗೆ ವಿವಿ ಕ್ವಾಟ್ರಸ್, ಹಾಸ್ಟೆಲ್ ಗೆಸ್ಟ್‌ಹೌಸ್ ಎಲ್ಲವೂ ಇದ್ದು, ಜನ ವಸತಿ ಪ್ರದೇಶದಲ್ಲಿ ಆನೆ ಓಡಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯ ಅರಣ್ಯಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಕತ್ತಲಾದರೂ ಆನೆಗಳು ಕ್ಯಾಂಪಸ್‌ನಲ್ಲಿಯೇ ಇದ್ದವು.
ಸಂಜೆ ಆರು ಗಂಟೆ ವೇಳೆಗೆ ಸಿಬ್ಬಂದಿ ಕ್ವಾರ್ಟರ್ಸ್ ಬಳಿ ಕಾಣಿಸಿಕೊಂಡ ಆನೆಗಳು ಸಂಜೆ ೭.೩೦ರ ಹೊತ್ತಿಗೆ ಕುವೆಂಪು ಪ್ರತಿಮೆ, ಗ್ರಂಥಾಲಯದ ಮುಂದೆ ನಡೆದಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.