Malenadu Mitra
ರಾಜ್ಯ ಶಿವಮೊಗ್ಗ

ಹಾಯ್ ಹೊಳೆ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಅನುದಾನ ನೀಡಿದ ಸರ್ಕಾರಕ್ಕೆ ಅಭಿನಂದನೆ : ಸಂಸದರು

ಶಿವಮೊಗ್ಗ ಕಲ್ಲೂರು ಬಸವಾಪುರ ಮಾರ್ಗವಾಗಿ ಹಾಯ್‍ಹೊಳೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಸರ್ಕಾರ ರೂ.14.20 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತ, ತುಂಗಾ ಮೇಲ್ದಂಡೆ ಯೋಜನಾ ವಲಯದ ವತಿಯಿಂದ ಭಾನುವಾರ ಹಾಯ್‍ಹೊಳೆ ಮುಖ್ಯರಸ್ತೆಯಲ್ಲಿ ಶಿವಮೊಗ್ಗ-ತೀರ್ಥಹಳ್ಳಿ ಎನ್‍ಹೆಚ್ 169 ರಿಂದ ಕಲ್ಲೂರು ಬಸವಾಪುರ ಮಾರ್ಗವಾಗಿ ಹಾಯ್‍ಹೊಳೆ ರಸ್ತೆ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾನು ಹಿಂದೆ ರಾಮಿನಕೊಪ್ಪಕ್ಕೆ ಬಂದಾಗ ಇಲ್ಲಿನ ಜನರು ರಸ್ತೆಗಾಗಿ ಮನವಿ ಸಲ್ಲಿಸಿದ್ದು ರೂ.6 ಕೋಟಿ ಮತ್ತು ರೂ.3 ಕೋಟಿ ಮಂಜೂರು ಮಾಡಿ ಶಂಕುಸ್ಥಾಪನೆ ನೆರವೇರಿಸಿ ನಂತರ ರಸ್ತೆ ಉದ್ಘಾಟನೆ ಕೂಡ ಮಾಡಲಾಗಿತ್ತು. ಹಿಂದೆ ಈ ರಸ್ತೆಯಲ್ಲಿ ಕಾರಲ್ಲಿ ಬರುವುದು ಕೂಡ ಕಷ್ಟ ಇತ್ತು. ಅಷ್ಟು ರಸ್ತೆ ಹದಗೆಟ್ಟಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಆದ್ಯತೆ ಮೇರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಅನುದಾನ ನೀಡಲಾಗುತ್ತಿರುವುದು ಸಂತಸದ ವಿಚಾರ.
ಹಾಯ್‍ಹೊಳೆ ರಸ್ತೆ ಅಭಿವೃದ್ದಿಗೆ ಸರ್ಕಾರ ರೂ. 14.20 ಕೋಟಿ ಅನುದಾನ ಒದಗಿಸಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರ ನೇತೃತ್ವದಲ್ಲಿ ಸುಮಾರು ರೂ. 53.63 ಕೋಟಿ ವೆಚ್ಚದಲ್ಲಿ 150 ಸಮುದಾಯ ಭವನಗಳ ನಿರ್ಮಾಣ ಆಗಿದೆ. ರಸ್ತೆಗಳಿಗಾಗಿ ಬೃಹತ್ ನೀರಾವರಿ ಇಲಾಖೆಯಿಂದಲೇ ಸುಮಾರು ರೂ.119 ಕೋಟಿ ವೆಚ್ಚದಲ್ಲಿ 260 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ವಿಧಾನಸಭೆ ಮತ್ತು ವಿಧಾನಪರಿಷತ್ ಶಾಸಕರು, ಸಂಸದರು, ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಅಭಿವೃದ್ದಿಯ ರಥವನ್ನು ಎಳೆಯುವ ಕೆಲಸ ಮಾಡುತ್ತಿರುವುದರಿಂದ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ. ಒಂದೇ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದಲ್ಲಿ ಕಾಮಗಾರಿಗಳು ಆಗುತ್ತಿರುವುದು ನಮ್ಮ ಸರ್ಕಾರದ ಹೆಮ್ಮೆಯಾಗಿದೆ.

ಗ್ರಾಮಸ್ಥರು ಒಂದು ಅಡಿ ಜಾಗವನ್ನು ಕಳೆದುಕೊಳ್ಳಬೇಡಿ. ಹಿರಿಯರು ನೀಡಿರುವ ಆಸ್ತಿಯನ್ನು ಉಳಿಸಿಕೊಳ್ಳಿರಿ. ಇಲ್ಲಿ ರಿಂಗ್ ರಸ್ತೆಯಾಗುತ್ತಿದೆ. ಅಭಿವೃದ್ದಿ ಕೆಲಸಗಳು ಆಗುತ್ತಿವೆ. ಭೂಮಿ ಬೆಲೆ ಹೆಚ್ಚಾಗುತ್ತದೆ. ಆದ್ದರಿಂದ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳುವಂತೆ ಕರೆ ನೀಡಿದರು.
ಮದುವೆ ಇತರೆ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಅಗಸವಳ್ಳಿಯಲ್ಲಿ ಒಂದು ಸಮುದಾಯ ಭವನ ನಿರ್ಮಿಸಲು ರೂ.50 ಲಕ್ಷ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೀರಿ. ಇನ್ನು ಒಂದು ತಿಂಗಳಲ್ಲಿ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ಡ್ರಿಪ್ ಯೋಜನೆಯಡಿ ವಿಶ್ವ ಬ್ಯಾಂಕ್‍ನಿಂದ ರೂ. 25 ರಿಂದ 30 ಕೋಟಿ ಸಾಲ ಪಡೆಯುವ ಅವಕಾಶ ಇದ್ದು, ಹಾಯ್‍ಹೊಳೆಭಾಗದಲ್ಲಿ ಅಭಿವೃದ್ದಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಇದೇ ವೇಳೆ ಹೇಳಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿ.ಪೆರುಮಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಅಗಸವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ವಿ ಸುಬ್ರಮಣಿ, ಗ್ರಾ,ಪಂ ಸದಸ್ಯರು, ಕನೀನಿನಿ ಮುಖ್ಯ ಇಂಜಿನಿಯರ್ ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.

ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಮತ್ತು ಶರಾವತಿ ಮುಳುಗಡೆ ಸಮಸ್ಯೆ ಪರಿಹಾರ ಕುರಿತುಂತೆ ತಾವು ಮನವಿ ನೀಡಿದ್ದೀರಿ. ಈ ಬಗ್ಗೆ ಅನೇಕ ತಾಂತ್ರಿಕ ಸಮಸ್ಯೆಗಳಿವೆ, ಆದರೂ ದೇವರು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿ ಈ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಾಸಕರ ನೇತೃತ್ವದಲ್ಲಿ ಈ ಕುರಿತು ಸರ್ಕಾರದ ಗಮನಕ್ಕೆ ತಂದು ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಒಟ್ಟಾಗಿ ಪ್ರಯತ್ನಿಸುತ್ತೇವೆ

ಬಿ.ವೈ.ರಾಘವೇಂದ್ರ , ಸಂಸದ

Ad Widget

Related posts

ಜಿಲ್ಕಾಡಳಿತದ ಭರವಸೆ , ಕಾರ್ಗಲ್ ಧರಣಿ ತಾತ್ಕಾಲಿಕ ವಾಪಸ್

Malenadu Mirror Desk

ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರಬೇಕು:ಜಿಲ್ಲಾಧಿಕಾರಿ ಸೆಲ್ವಮಣಿ

Malenadu Mirror Desk

ಹುಣಸೋಡಿಗೆ ಹಟ್ಟಿ ಮೈನ್ಸ್ ತಜ್ಞರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.