ಬಿಜೆಪಿಯವರು ಸದಾ ಸುಳ್ಳು ಹೇಳುತ್ತಾ ದೇಶವನ್ನು ದಿವಾಳಿಯತ್ತ ದೂಡುವುದರ ಜೊತೆಗೆ ಧರ್ಮದ ಹೆಸರಲ್ಲಿ ಜನರಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಶಿವಮೊಗ್ಗಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದ ಅವರು, ಬೇಡವಾದ ವಿಚಾರಗಳನ್ನು ಪ್ರಚಾರ ಮಾಡುವ ಬಿಜೆಪಿ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಜನರ ನೆಮ್ಮದಿಗೆ ಅಕ್ಷರಶಃ ಭಂಗ ಉಂಟಾಗಿದೆ. ಕೇವಲ ರಾಜಕಾರಣಕ್ಕಾಗಿ, ಅಧಿಕಾರಕ್ಕಾಗಿ ರಾಜ್ಯ ಮತ್ತು ದೇಶವನ್ನು ಹಾಳು ಮಾಡಿದ ಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಹಲವು ಆಶ್ವಾಸನೆ ನೀಡಿತ್ತು. ವಿದೇಶದ ಬ್ಯಾಂಕ್ ಗಳಲ್ಲಿ ಇರುವ ಕಪ್ಪು ಹಣ ತಂದು ಬಡವರಿಗೆ ಹಂಚುವುದಾಗಿ ತಿಳಿಸಿತ್ತು. ಪ್ರತಿ ವರ್ಷ2ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿತ್ತು. ರೈತರಿಗೆ ಅನೇಕ ಭರವಸೆ ನೀಡಿತ್ತು. ಆದರೆ, ಇಂದು ಇದ್ಯಾವುದು ಈಡೇರಿಲ್ಲ. ಕೇವಲ ಘೋಷಣೆಗಳ ಉಳಿದಿದೆ ಎಂದು ಆರೋಪಿಸಿದರು.
ಗಾಯದ ಮೇಲೆ ಬರೆ ಎಂಬಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದೆ. ಇಂಧನ ಬೆಲೆ ಯನ್ನೇ ತೆಗೆದುಕೊಂಡರೇ ೧೪ ಬಾರಿ ಬೆಲೆ ಏರಿಕೆ ಮಾಡಲಾಗಿದೆ. ೧೦ ರೂ. ಏರಿಕೆಯಾಗಿದೆ.
ಜನ ಜೀವನ ಮಾಡುವುದೇ ದುಸ್ತರವಾಗಿದೆ. ರೈತರಿಗೆ ನೀಡಿದ ಯಾವ ಆಶ್ವಾಸನೆಗಳು ಈಡೇರಿಲ್ಲ. ಗೊಬ್ಬರ, ಕೀಟನಾಶಕ ಮತ್ತು ರೈತರು ಉಪಯೋಗಿಸುವ ಉಪಕರಣಗಳ ಬೆಲೆಯನ್ನು ಕೂಡ ಏರಿಸಲಾಗಿದೆ. ಅದಕ್ಕೂ ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಕೇವಲ ಈರುಳ್ಳಿ ಬೆಲೆ ಹೆಚ್ಚಾಗಿದ್ದಕ್ಕೆ ಬಿಜೆಪಿಯವರು ಈ ಹಿಂದೆ ರಾಷ್ಟ್ರಾದ್ಯಂತ ಮುಷ್ಕರ ಮಾಡಿದ್ದರು. ಈಗ ಅವರೇ ಆಡಳಿತ ನಡೆಸುತ್ತಿದ್ದಾರೆ. ಜನರಿಗೆ ಯಾವ ಉತ್ತರ ಹೇಳುತ್ತಾರೆ ಎಂದರು.
ಸ್ಮಾರ್ಟ್‌ಸಿಟಿ ಕಾಮಗಾರಿ ಲೋಪ:
ಶಿವಮೊಗ್ಗ ನಗರದಲ್ಲಿ ಅನೇಕ ಸಮಸ್ಯೆಗಳಿವೆ. ಸ್ಮಾರ್ಟ್ ಸಿಟಿ ಕೆಲಸದಲ್ಲಿ ಲೋಪವಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗಿದೆ. ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆ ಹೆಚ್ಚಿಸಲಾಗಿದೆ. ಹರ್ಷ ಕೊಲೆ ನಂತರದ ನಡೆದ ಘಟನೆಗಳು, ಮಾರಿಕಾಂಬ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ವ್ಯಾಪಾರ ನಿಷೇಧ, ಹಲಾಲ್, ಜಟ್ಕಾ ವಿಷಯಗಳು ಇವುಗಳನ್ನೆ ಮುಂದಿಟ್ಟುಕೊಂಡು ಬಿಜೆಪಿ ಈಗಿನಿಂದಲೇ ಮತಬೇಟೆಯಲ್ಲಿ ತೊಡಗಿದೆ. ಪ್ರಜಾಪ್ರಭುತ್ವದ ಅಣಕು ಮಾಡುತ್ತಿರುವ ಸ್ಥಳೀಯ ಬಿಜೆಪಿ ನಾಯಕರು ಅಕ್ಷರಶಃ ಚುನಾವಣೆಯ ತಯಾರಿಯಲ್ಲಿದ್ದಾರೆ. ಬಿಜೆಪಿಯವರ ಮಹಾನ್ ಸುಳ್ಳಿಗೆ ಜನ ಕೂಡ ಮೋಸ ಹೋಗುತ್ತಿದ್ದಾರೆ. ಧರ್ಮದ ಅಮಲನ್ನು ಯುವ ಜನಕ್ಕೆ ಏರಿಸಿ ತಾವು ಮಾತ್ರ ಏನೂ ಮಾಡಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿ ಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಚಂದ್ರಭೂಪಾಲ, ರೇಖಾ ರಂಗನಾಥ್, ಮೆಹಖ್ ಶರೀಫ್, ಎಲ್. ರಾಮೇಗೌಡ, ಚಂದನ್, ಹೆಚ್.ಎಂ. ಮಧು, ಧರ್ಮರಾಜ್, ಎನ್.ಡಿ. ಪ್ರವೀಣ್ ಇದ್ದರು
ಜಿಲ್ಲಾ ಕಾಂಗ್ರೆಸ್ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತನ್ನ ಹೋರಾಟವನ್ನು ಮುಂದುವರಿಸುತ್ತಿದೆ. ಬೆಲೆ ಏರಿಕೆ ಸೇರಿದಂತೆ ಬಿಜೆಪಿಯವರ ಸುಳ್ಳನ್ನು ಜನರಿಗೆ ತಿಳಿಸಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕೂಡ ಕಾಂಗ್ರೆಸ್ ಪಕ್ಷ ತನ್ನ ಹೋರಾಟ ಆರಂಭಿಸಲಿದೆ
ಹೆಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ