ಶಿವಮೊಗ್ಗ ನಗರದ ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಶೈಕ್ಷಣಿಕ ಹಿತದೃಷ್ಠಿಯಿಂದ ಎಸ್‌ಎಸ್‌ಎಲ್‌ಸಿ ಶಿಕ್ಷಣವನ್ನು ಕೇವಲ ಒಂದು ರೂಪಾಯಿಗೆ ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಶಾಲೆಯ ಸಂಸ್ಥಾಪಕ ನಿರ್ದೇಶಕ ಎಸ್.ಬಿ. ಜಗದೀಶ್ ಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಳೆಹೊನ್ನೂರು ರಸ್ತೆಯ ಗುರುಪುರದಲ್ಲಿ 2013 ರಲ್ಲಿಯೇ ಆರಂಭವಾಗಿರುವ ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆ ಮಲೆನಾಡಿನಲ್ಲಿಯೇ ಮನೆ ಮಾತಾಗಿದ್ದು, ಅತ್ಯಂತ ಪ್ರಸಿದ್ಧಿಯಾಗಿದೆ. ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಎಂದರು.
ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂದು ನಮ್ಮ ಸಂಸ್ಥೆ ಒಂದು ವಿನೂತನ ಯೋಜನೆ ಜಾರಿಗೆ ತಂದಿದೆ. ಬರುವ ಶೈಕ್ಷಣಿಕ ವರ್ಷದಿಂದ ಶಾಲೆಯಲ್ಲಿ ಕೇವಲ ಒಂದು ರೂಪಾಯಿ ಪಡೆದು ಹತ್ತನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗುವುದು. ಇದು ಖಾಸಗಿ ಶಾಲೆಗಳ ಇತಿಹಾಸದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಶಿಕ್ಷಣ ದುಬಾರಿಯಾಗಿರುವ ಈ ಕಾಲದಲ್ಲಿ ಪ್ರತಿಭಾವಂತರಿದ್ದರೂ ಬಡವರ ಮಕ್ಕಳು ಉತ್ತಮ ಶಾಲೆಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ ಈ ಕಾರಣದಿಂದ ನಮ್ಮ ಶಾಲೆ ನೂತನ ಯೋಜನೆ ಜಾರಿಗೆ ತಂದಿದೆ ಎಂದರು.
ಪ್ರವೇಶ ಪರೀಕ್ಷೆ ಮೂಲಕ ಮಕ್ಕಳನ್ನು ಆಯ್ಕೆಮಾಡಿಕೊಂಡು ಅವರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ವಿದ್ಯಾರ್ಥಿ ಜೀವನ ಉಜ್ವಲಗೊಳಿಸುವ ಉದ್ದೇಶದಿಂದ ಒಂದು ರೂಪಾಯಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸೌಲಭ್ಯವನ್ನು ಶಿವಮೊಗ್ಗದ ಪೋಷಕರು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹಲವು ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳಿಂದ ಕಲಿಕೆಯಲ್ಲಿ ಹಿಂದುಳಿದ ಶೇ.40 ರಷ್ಟು ಅಂಕ ಪಡೆದ ಮಕ್ಕಳಿಗೆ ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆ ಸವಾಲಿನ ರೀತಿಯಲ್ಲಿ ಪ್ರವೇಶ ನೀಡಲಾಗುತ್ತದೆ. ಗುಣಮಟ್ಟದ ಶಿಕ್ಷಣದಿಂದಾಗಿ ಅವರನ್ನು ಶೇ. ೯೦ ಕ್ಕಿಂತ ಹೆಚ್ಚು ಅಂಕ ಗಳಿಸುವಂತೆ ತಯಾರು ಮಾಡಲಾಗುತ್ತಿದೆ. ಸಂಸ್ಥೆಯಲ್ಲಿ ಪ್ರಸ್ತುತ ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇದು ನಮ್ಮ ಶಾಲೆಯ ಹೆಮ್ಮೆಯಾಗಿದೆ ಎಂದು ಜಗದೀಶ್ ಗೌಡ ಹೇಳಿದರು.
ಪರಿಣಿತ ಶಿಕ್ಷಕ ವೃಂದ:
ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪರಿಣಿತ ಶಿಕ್ಷಕ ವೃಂದವಿದೆ. ಸಿಬಿಎಸ್ಸಿ ಮಾರ್ಗದರ್ಶಿಗಳಂತೆ ಎಲ್ಲರಿಗೂ ಕಾಲಕಾಲಕ್ಕೆ ತರಬೇತಿ ನೀಡಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವ ಸ್ಪರ್ಧೆಗೆ ನಮ್ಮ ಮಕ್ಕಳನ್ನು ಅಣಿಗೊಳಿಸಲು ಶಿಕ್ಷಕರಿಗೂ ಉತ್ತಮ ವಾತಾವರಣ ಮತ್ತು ತರಬೇತಿಯನ್ನು ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಶಾಲೆಯಲ್ಲಿ ಈಗ ಪ್ಲೇಗ್ರೂಪ್ ನಿಂದ ೯ ನೇ ತರಗತಿಗಳಿಗೆ (ಸಿ.ಬಿ.ಎಸ್.ಇ.) ಪ್ರವೇಶ ಆರಂಭ ಗೊಂಡಿದೆ. ಎಸ್‌ಎಸ್‌ಎಲ್ಸಿ ದಾಖಲಾತಿ ಕೂಡ ಆರಂಭವಾಗಿದ್ದು, ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ತಮ್ಮ ಹೆಸರು ನೋಂದಾಯಿಸಿಕೊಳ್ಳುವುದರ ಮೂಲಕ ಪಡೆಯ ಬಹುದಾಗಿದೆ. ಹೆಚ್ಚಿನ ವಿವರಗಳಿಗೆ9448220170,81053 60578 ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕರಾದ ಅನಿತಾ ಸುರೇಶ್, ಶಶಿಕುಮಾರ್ ಎಸ್.ಪಿ., ಜಗದೀಶ್, ಸವಿತಾ, ಪ್ರತಾಪ್ ಎಲ್.ಪಿ. ಇದ್ದರು.