ಶಿವಮೊಗ್ಗದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹಿಂದೂ ಹರ್ಷನ ಹೆಸರಲ್ಲಿ ಹರ್ಷ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಹಾಗೂ ಹರ್ಷನ ಸಹೋದರಿ ಅಶ್ವಿನಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ಷನ ಸಾವಿನ ದುಃಖದಿಂದ ನಾವು ಹೊರಬಂದಿಲ್ಲ. ಮಗನನ್ನು ಕಳೆದುಕೊಂಡ ನಮ್ಮ ತಾಯಿ ಇನ್ನೂ ದುಃಖದಲ್ಲಿದ್ದಾರೆ. ತಂದೆಗೆ ಹುಷಾರಿಲ್ಲ. ಇವುಗಳ ಮಧ್ಯೆಯೇ ಸರ್ಕಾರ, ಸಂಘ -ಸಂಸ್ಥೆಗಳು, ಹಿಂದೂ ಧರ್ಮದ ಮುಖಂಡರು ನಮ್ಮ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಹರ್ಷನ ಕನಸಿನಂತೆ ಈ ಆರ್ಥಿಕ ಸಹಾಯದ ಒಂದು ಭಾಗವನ್ನು ಟ್ರಸ್ಟ್ ಗಾಗಿ ಮೀಸಲಿಡುತ್ತೇವೆ ಎಂದರು.
ಹರ್ಷ ಚಾರಿಟೇಬಲ್ ಟ್ರಸ್ಟ್‌ಗೆ ನಾನು ಅಧ್ಯಕ್ಷೆಯಾಗಿದ್ದೇನೆ. ನನ್ನ ಸಹೋದರಿ ರಜನಿ ಉಪಾಧ್ಯಕ್ಷರಾಗಿದ್ದಾರೆ. ವ್ಯವಸ್ಥಾಪಕ ಟ್ರಸ್ಟಿಯಾಗಿ ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಕಾರ್ಯದರ್ಶಿಯಾಗಿ ಸಚಿನ್ ರಾಯ್ಕರ್, ಜಂಟಿ ಕಾರ್ಯದರ್ಶಿಯಾಗಿ ಪುರುಷೋತ್ತಮ್ ಕೆ.ಕೆ., ಖಜಾಂಚಿಯಾಗಿ ಕೆ. ಫಣೀಶ್ ಅವರಿದ್ದು, ಇಂದಿನಿಂದಲೇ ಇದು ಜಾರಿಗೆ ಬಂದಿದೆ ಎಂದರು.
ಟ್ರಸ್ಟ್ ನ ಉದ್ದೇಶ ಕುರಿತು ಮಾತನಾಡಿದ ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಟ್ರಸ್ಟ್ ನ ಮುಖ್ಯ ಉದ್ದೇಶ ಬಡತನದ ಮಧ್ಯದಲ್ಲಿಯೇ ಉತ್ತಮ ಸಾಧನೆ ಮಾಡಿ ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ಮುಂದುವರಿಸಲು ಕಷ್ಟಪಡುವ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗುವುದು. ಅನಾರೋಗ್ಯದಿಂದಿರುವ ಬಡವರಿಗೆ ನೆರವು ನೀಡುವುದು, ಗೋಶಾಲೆಗಳ ನಿರ್ಮಾಣ ಮಾಡುವುದಾಗಿದೆ. ಪ್ರಮುಖವಾಗಿ ಈ ವರ್ಷ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಈಗಾಗಲೇ ಟ್ರಸ್ಟ್ ಪಿಎಫ್‌ಐ ಪ್ರಚೋದಿತ ಗಲಭೆಯಲ್ಲಿ ಮೃತನಾದ ವಿಶ್ವನಾಥ ಶೆಟ್ಟಿ ಅವರ ಪುತ್ರ ಯಶಸ್‌ನ ವಿದ್ಯಾಭ್ಯಾಸಕ್ಕೆ ಮತ್ತು ಕಾಸರಗೋಡಿನಲ್ಲಿ ಮೃತರಾದ ಆರ್.ಎಸ್.ಎಸ್. ಕಾರ್ಯಕರ್ತ ಜ್ಯೋತಿಷ್ ಅವರ ಕುಟುಂಬಕ್ಕೆ ೨ ಲಕ್ಷ ರೂ. ನೀಡಿರುವುದಲ್ಲದೇ ಅವರ ಎರಡನೇ ಮಗನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಹರ್ಷನ ಕುಟುಂಬ ಒಪ್ಪಿಗೆ ನೀಡಿದ್ದು, ಇದು ಟ್ರಸ್ಟ್ ಆರಂಭಕ್ಕೆ ಮುನ್ನುಡಿಯಾಗಿದೆ ಎಂದರು.
ಟ್ರಸ್ಟ್ ಇದೀಗ ಆರಂಭವಾಗಿದ್ದು, ಹರ್ಷನ ಕುಟುಂಬಕ್ಕೆ ಸಹಾಯ ಮಾಡಿದ ಹಣದ ಒಂದು ಭಾಗವನ್ನು ಇದಕ್ಕೆ ಮೀಸಲಿಡಲಾಗಿದೆ. ಅಲ್ಲದೇ, ಟ್ರಸ್ಟ್ ಗೆ ಸಹಾಯ ಮಾಡುವವರು ಕೂಡ ಮಾಡಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹರ್ಷನ ತಂದೆ ನಾಗರಾಜ್, ತಾಯಿ ಪದ್ಮಾ ನಾಗರಾಜ್, ಸೋದರಿ ರಜನಿ, ಕಾರ್ಯದರ್ಶಿ ಸಚಿನ್ ರಾಯ್ಕರ್, ಜಂಟಿ ಕಾರ್ಯದರ್ಶಿ ಪುರುಷೋತ್ತಮ್ ಕೆ.ಕೆ., ಖಜಾಂಚಿ ಫಣೀಶ್, ವಿನಯ್ ಇದ್ದರು.
ಎಲ್ಲರ ಜೀವವೂ ಅಮೂಲ್ಯವಾದದ್ದು ಸೋದರನನ್ನು ಕಳೆದುಕೊಂಡ ನಮಗೆ ಆ ನೋವು ಅರ್ಥವಾಗುತ್ತದೆ. ಯಾರೂ ಯಾರನ್ನೂ ದ್ವೇಷ ಮಾಡಬಾರದು ಮತ್ತು ಜೀವ ತೆಗೆಯುವ ಮಟ್ಟಕ್ಕೆ ಯಾರೂ ಮುಂದಾಗಬಾರದು. ಎಲ್ಲಾ ಧರ್ಮದವರಿಗೂ ನಾನು ಇದನ್ನೇ ಕೇಳಿಕೊಳ್ಳುವೆ. ಯಾವುದೇ ಧರ್ಮವಿರಲಿ ಹೆತ್ತವರಿಗೆ ಅವರ ಮಕ್ಕಳು ಅಕಾಲಿಕವಾಗಿ ಸಾವಿಗೀಡಾಗುವುದರಿಂದ ಕುಟುಂಬ ನಿರ್ಗತಿಕವಾಗುತ್ತದೆ. ಎಲ್ಲರಿಗೂ ಕೈಮುಗಿದು ಕೇಳುವೆ ಯಾರ ಜೀವವನ್ನೂ ತೆಗೆಯಬೇಡಿ
–ಅಶ್ವಿನಿ, ಮೃತ ಹರ್ಷನ ಸೋದರಿ