ಶಿವಮೊಗ್ಗ,ಏ.೧೪: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಗುರುವಾರ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರರಾಗಿದ್ದ ಸಂತೋಷ್ ಪಾಟೀಲ್ ಅವರು ಮಂಗಳವಾರ ಉಡುಪಿಯ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಮಾಡಿರುವ ೪ ಕೋಟಿ ರೂ.ಮೊತ್ತದ ಕಾಮಗಾರಿಗಳಿಗೆ ಬಿಲ್ ಪಾವತಿಸಲು ಶೇ.೪೦ ಕಮೀಷನ್ ಕೇಳುತ್ತಿದ್ದಾರೆ. ನನ್ನ ಆತ್ಮಹತ್ಯೆಗೆ ಸಚಿವರೇ ಕಾರಣ ಎಂದು ವಾಟ್ಸ್ ಅಪ್ ಸಂದೇಶ ಕಳಿಸಿದ್ದ ಈ ಆತ್ಮಹತ್ಯೆ ಪ್ರಕರಣ ರಾಜ್ಯ ಹಾಗೂ ದೇಶದಲ್ಲಿ ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿದ್ದು, ಸಚಿವ ಈಶ್ವರಪ್ಪ ಮೊದಲ ಆರೋಪಿಯಾಗಿದ್ದರೆ, ಅವರ ಆಪ್ತಕಾರ್ಯದರ್ಶಿ ಬಸವರಾಜ್ ಮತ್ತಿತರರ ವಿರುದ್ಧ ದೂರು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಂತೋಷ್ ಪಾಟೀಲ್ ಪ್ರಕರಣದ ಬಳಿಕ ರಾಜ್ಯದಲ್ಲಿ ಪ್ರತಿಪಕ್ಷಗಳು ಬೀದಿಗಿಳಿದು ಪ್ರತಿಭಟನೆ ಮಾಡಿ ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಪ್ರತಿಭಟನೆ ನಡೆಸಿದ್ದರು. ಘಟನೆ ನಡೆದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಈಶ್ವರಪ್ಪ ಆವರು, ಸಹಿ ಇಲ್ಲದ ಡೆತ್ ನೋಟ್‌ಗೆ ಮೌಲ್ಯ ಇಲ್ಲ. ಯಾರೊ ಹೇಳಿದ ಮಾತ್ರಕ್ಕೆ ಅದು ಸತ್ಯವಲ್ಲ. ಸಂತೋಷ್‌ಪಾಟೀಲ್ ಯಾರೆಂಬುದೇ ನನಗೆ ಗೊತ್ತಿಲ್ಲ. ನಾನೇಕೆ ರಾಜೀನಾಮೆ ಕೊಡಲಿ ಎಂದು ಹಠಮಾರಿತನ ತೋರಿದ್ದರು. ಮಾತ್ರವಲ್ಲದೆ ಗುರುವಾರ ಬೆಳಗ್ಗೆ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ನಾನು ಇನ್ನು ಮೂರು ದಿನ ಮಾಧ್ಯಮಗಳೊಂದಿಗೆ ಮಾತನ್ನೇ ಆಡುವುದಿಲ್ಲ ಎಂದು ಹೇಳಿದ್ದ ಈಶ್ವರಪ್ಪ ದಿಢೀರನೇ ರಾಜೀನಾಮೆ ನಿರ್ಧಾರ ಪ್ರಕಟಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಮುಜುಗರವಾಗದಿರಲಿ ಎಂದು ಪದತ್ಯಾಗ:
ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಅವರು, ನನ್ನನ್ನು ಬೆಳೆಸಿದ ಪಕ್ಷ ಮತ್ತು ನಾಯಕರಿಗೆ ಮುಜುಗರವಾಗದಿರಲಿ ಎಂಬ ಕಾರಣಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಚತೆ ಮಾತನಾಡಿದ್ದೇನೆ. ಶುಕ್ರವಾರ ಬೆಂಗಳೂರಿನಲ್ಲಿ ಅವರನ್ನು ಭೇಟಿ ಮಾಡಿ ರಾಜೇನಾಮೆ ಪತ್ರ ಸಲ್ಲಿಸುವೆ ಎಂದು ಹೇಳಿದರು.
ತಪ್ಪಿದ್ದರೆ ಶಿಕ್ಷೆಯಾಗಲಿ:
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನದು ಶೇ ೧ ರಷ್ಟು ತಪ್ಪಿದ್ದರೂ ನನಗೆ ಶಿಕ್ಷೆಯಾಗಲಿ. ನಾನು ದೇವರನ್ನು ನಂಬಿದವನು. ನನ್ನ ಮನೆದೇವತೆ ಚೌಡೇಶ್ವರಿ ತಾಯಿಯಲ್ಲಿ ನನ್ನ ತಪ್ಪಿದ್ದರೆ ನನಗೆ ಶಿಕ್ಷೆ ಕೊಡು ಎಂದು ಬೇಡಿಕೊಂಡಿದ್ದೇನೆ. ಈ ಪ್ರಕರಣದಲ್ಲಿ ನಾನು ನಿರ್ದೋಷಿ ಎಂದು ಸಾಬೀತಾಗುವ ವಿಶ್ವಾಸವಿದೆ. ಎರಡು ದಿನಗಳ ಹಿಂದೆಯೇ ರಾಜೀನಾಮೆ ನೀಡುವ ಚಿಂತನೆ ಮಾಡಿದ್ದೆ. ಆದರೆ ನಮ್ಮ ನಾಯಕರು ಆತುರ ಬೇಡ ಸ್ವಲ್ಪ ಕಾಯಿರಿ ಎಂಬ ಸಲಹೆ ನೀಡಿದ್ದರು. ಆದರೆ ಪಕ್ಷ, ಸರಕಾರ ಮತ್ತು ನನ್ನ ನಾಯಕರಿಗೆ ಮುಜುಗರವಾಗಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಪ್ರಕರಣದ ತನಿಖೆ ಆಗಬೇಕು. ಈ ಬಗ್ಗೆ ಸಿಎಂ ಜತೆ ಮಾತನಾಡಿದ್ದು, ಅವರು ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ ಎಂದು ಈಶ್ವರಪ್ಪ ಮಾಧ್ಯಮಗಳಿಗೆ ವಿವರಿಸಿದರು.
ಕೆಲಸ ತೃಪ್ತಿ ತಂದಿದೆ
ನನಗೆ ವಹಿಸಿದ್ದ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಜಲಧಾರೆ, ನರೇಗಾ, ಪಿಎಂಎಸ್‌ಜಿವೈ, ಮನೆಮನೆಗೆ ಗಂಗೆಯಂತಹ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ಈಶ್ವರಪ್ಪ ತಿಳಿಸಿದರು.
ಪಕ್ಷನಿಷ್ಠನಿಗೆ ಪಕ್ಷ ಕೊಟ್ಟ ಸಂದೇಶ ಏನು?
ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸೇರಿದಂತೆ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಪಕ್ಷ ಹಾಗೂ ಸಂಘನಿಷ್ಠೆಯ ಕಾರಣಕ್ಕೆ ಪ್ರಭಾವಿ ನಾಯಕರಾಗಿ ಬೆಳೆದವರು. ಪಕ್ಷ ತಾಯಿ ಇದ್ದಂತೆ ಎಂದು ಹೇಳುತ್ತಿದ್ದ ಈಶ್ವರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿತ್ತು ಎಂಬ ಮಾಹಿತಿಗಳು ಲಭ್ಯವಾಗಿವೆ. ಪಕ್ಷದ ವಲಯದಲ್ಲಿ ಎಷ್ಟೇ ಪ್ರಭಾವಿಯಾಗಿದ್ದರೂ, ಭ್ರಷ್ಟಾಚಾರದ ಆರೋಪ ಹೊರಿಸಿ ಪಕ್ಷದ ಕಾರ್ಯಕರ್ತನೇ ಮಾಡಿದ್ದ ಆರೋಪಕ್ಕೆ ಈಶ್ವರಪ್ಪ ಅವರು ಅನಿವಾರ್ಯವಾಗಿ ಹುದ್ದೆ ತ್ಯಜಿಸುವ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ರಾಜಕೀಯ ಲಾಭ ತಂದುಕೊಡುವ ಹಿಜಾಬ್ ವಿವಾದ, ಹರ್ಷಕೊಲೆ ವಿಚಾರ, ಹಲಾಲ್, ಆಜಾನ್ ವಿಚಾರಗಳನ್ನು ಮುನ್ನೆಲೆಗೆ ತಂದಿದ್ದ ಬಿಜೆಪಿಯು ಕಾಂಗ್ರೆಸ್ ಕಟ್ಟಿಹಾಕುವ ಪ್ರಯತ್ನ ಮಾಡಿತ್ತು. ಅದರೆ ಈ ಹೊತ್ತಲ್ಲೇ ಭ್ರಷ್ಟಾಚಾರದ ಆರೋಪ ಹೊರಿಸಿ ಗುತ್ತಿಗೆದಾರ ಆತ್ಮ ಹತ್ಯೆ ಮಾಡಿಕೊಂಡಿದ್ದ ಪ್ರಕರಣ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚುವಂತೆ ಮಾಡಿತ್ತು. ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇರುವ ಸಂದರ್ಭ ಅನಗತ್ಯ ವಿವಾದ ಬೆಳೆಸುವ ಇಚ್ಚೆ ಇಲ್ಲದ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈಶ್ವರಪ್ಪ ಅವರ ರಾಜೀನಾಮೆ ಪಡೆಯುಂತೆ ಸೂಚನೆ ನೀಡಿತ್ತೆನ್ನಲಾಗಿದೆ.
ಅಧಿಕಾರದ ಹಾದಿ
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಜಲಸಂಪನ್ಮೂಲ ಮತ್ತು ಇಂಧನ ಖಾತೆ ನಿರ್ವಹಿಸಿದ್ದ ಈಶ್ವರಪ್ಪ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಉಪ ಮುಖ್ಯಮಂತ್ರಿ ಹುದ್ದೆಗೂ ಏರಿದ್ದರು. ೨೦೧೮ ರಲ್ಲಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಡಾ.ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿಯಂತವರಿಗೆ ಡಿಸಿಎಂ ಹುದ್ದೆ ನೀಡಿದ್ದ ಪಕ್ಷ ಪ್ರಭಾವಿ ನಾಯಕ ಈಶ್ವರಪ್ಪರಿಗೆ ಹಿಂಬಡ್ತಿ ನೀಡಿ ಕೇವಲ ಸಂಪುಟ ದರ್ಜೆ ಸಚಿವಸ್ಥಾನ ನೀಡಿತ್ತು. ಯಡಿಯೂರಪ್ಪ ಸಿಎಂ ಗಾದಿಯಿಂದ ಇಳಿಯುತ್ತಿದ್ದಂತೆ ಈಶ್ವರಪ್ಪ ಅವರಿಗೆ ಉನ್ನತ ಹುದ್ದೆ ಸಿಗಲಿದೆ ಎಂದೇ ಅವರ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಬಸವರಾಜ್ ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆ ಈಶ್ವರಪ್ಪ ಅವರು ಸಂಪುಟ ಸೇರಲು ಕೂಡಾ ಹರಸಾಹಸ ಪಡುವಂತಾಗಿತ್ತು. ಪರಿವಾರದ ಬಲದಿಂದ ಪ್ರಭಾವಿ ಖಾತೆಯನ್ನೇ ಗಿಟ್ಟಿಸಿದ್ದ ಈಶ್ವರಪ್ಪ ಅವರು ಈಗ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಬಿಜೆಪಿಯಲ್ಲಿ ಫೈರ್ ಬ್ರಾಂಡ್ ಎಂದು ಖ್ಯಾತಿವೆತ್ತಿದ್ದ ಈಶ್ವರಪ್ಪ ಅವರು ಭ್ರಷ್ಟಾಚಾರದ ಆರೋಪಕ್ಕೆ ಬಲಿಯಾಗಿದ್ದಾರೆ.