Malenadu Mitra
ರಾಜ್ಯ ಶಿವಮೊಗ್ಗ

ಈಶ್ವರಪ್ಪರಿಗೆ ಕಣ್ಣೀರಿನ ಬಿಳ್ಕೋಡುಗೆ , ಕಾರ್ಯಕರ್ತರನ್ನು ಸಮಾಧಾನ ಪಡಿಸಿದ ಕೆಎಸ್‌ಇ

ಸಚಿವಗಾದಿಗೆ ರಾಜೀನಾಮೆ ಸಲ್ಲಿಸಲು ಬೆಂಗಳೂರಿಗೆ ಹೊರಟ ಸಚಿವ ಈಶ್ವರಪ್ಪ ಅವರನ್ನು ಶಿವಮೊಗ್ಗದ ಬಿಜೆಪಿ ಕಾರ್ಯಕರ್ತರು ದುಃಖತಪ್ತರಾಗಿ ಬೀಳ್ಕೊಟ್ಟ ಪ್ರಸಂಗ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಜರುಗಿತು.
ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಚಿವ ಈಶ್ವರಪ್ಪನವರಿಗೆ ಕಾರ್ಯಕರ್ತರು ರಾಜೀನಾಮೆ ನೀಡದಂತೆ ಕೇಳಿಕೊಂಡರು. ಮಧ್ಯಾಹ್ನ 12 ರ ಸಮಯಕ್ಕೆ ಕಚೇರಿಗೆ ಆಗಮಿಸಿದ ಸಚಿವರಿಗೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ತಾವು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಮುಂದುವರೆಯುವಂತೆ ಘೋಷಣೆ ಕೂಗಿದರು.
ಆರೋಪ ಮುಕ್ತನಾಗಿ ಹೊರಬರುತ್ತೇನೆ
ನಾನು ಆರೋಪಮುಕ್ತನಾಗಿ ಹೊರ ಬರುತ್ತೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಸಂತೈಸಿದ ಅವರು, ಆಪಾದನೆಯಿಂದ ನಾನು ಮುಕ್ತನಾಗಿ ಬರಲು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ತನಿಖೆಗೆ ಅಡ್ಡಿಯಾಗುತ್ತದೆ ಎಂಬ ಭಾವನೆ ಇದೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ನೀವೆಲ್ಲರೂ ಅತ್ತು ನನ್ನನ್ನು ಕಳಿಸಬಾರದು ಎಂದರು.
ಪ್ರಸ್ತುತ ನನಗೆ ಅಗ್ನಿ ಪರೀಕ್ಷೆ ಎದುರಾಗಿದ್ದು, ಇದನ್ನು ಎದುರಿಸಿ ಯಶಸ್ವಿಯಾಗಿ ಹೊರ ಬರುತ್ತೇನೆ. ಜೀವನ ಇರುವವರೆಗೆ ಸಂಘಟನೆ ಮೂಲಕ ದೇಶದ ಕೆಲಸವನ್ನು ಮಾಡುತ್ತೇನೆ. ದೇಶದ ಬಡಜನರು, ಹಿಂದುಳಿದವರು, ದಲಿತರ ಪರ ಕೆಲಸ ಮಾಡೋಣ, ರಾಜ್ಯದಲ್ಲಿ ಹಿಂದೂಗಳ ಮೇಲಾಗುತ್ತಿರುವ ಸಂಘರ್ಷದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ನಾಯಕರಿಗೆ ಸರಿಯಾದ ಉತ್ತರ ಕೊಡೋಣ ಎಂದರು.
ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಹಿಸಿದಾಗ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈಗ ಆರೋಪ ಕೇಳಿ ಬಂದ ಕಾರಣ ರಾಜೀನಾಮೆ ಕೊಡುತ್ತಿದ್ದೇನೆ. ನಾಲ್ಕೈದು ದಿನಗಳಿಂದ ರಾಜ್ಯದ ಜನರು, ಹಿರಿಯರು, ಮಠಾಧೀಶರು, ಕಾರ್ಯಕರ್ತರು, ಮುಖಂಡರ ಪ್ರೀತಿಯನ್ನು ಕಂಡು ಆಶ್ಚರ್ಯವಾಗಿದೆ. ಅವರೆಲ್ಲರ ಪ್ರೀತಿಗೆ ಪಾತ್ರನಾಗಿದ್ದೇನೆ ಎಂದರು.

ಈಶ್ವರಪ್ಪ ಮತ್ತೊಮ್ಮೆ ಸಚಿವರಾಗಲಿದ್ದಾರೆ : ಬಿಎಸ್‌ವೈ

ಸಚಿವ ಈಶ್ವರಪ್ಪ ಯಾವುದೇ ರೀತಿಯ ತಪ್ಪು ಮಾಡಿಲ್ಲ. ಅನಿವಾರ್ಯವಾಗಿ ಅವರೇ ಕಾನೂನಿಗೆ ತಲೆಬಾಗಿ ರಾಜೀನಾಮೆ ಕೊಟ್ಟಿದ್ದಾರೆ. ಮತ್ತೊಮ್ಮೆ ಅವರು ಸಚಿವರಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರು ಸ್ವಯಂಪ್ರೇರಿತರಾಗಿ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಅವರು ಏನು ತಪ್ಪು ಮಾಡಿಲ್ಲ. ಖಂಡಿತವಾಗಿಯೂ ಆರೋಪ ಮುಕ್ತರಾಗಿ ಹೊರಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ತನಿಖೆಗೆ ಸಹಾಯವಾಗಲಿ ಎಂದು ಸಚಿವ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ರಾಜೀನಾಮೆ ನೀಡಬೇಕೆಂದು ಅವರ ಮೇಲೆ ಯಾವ ಒತ್ತಡವೂ ಇರಲಿಲ್ಲ. ಹಿರಿಯರು ಕೂಡ ಸಲಹೆಯನ್ನು ನೀಡಿರಲಿಲ್ಲ ಎಂದರು.
ಎರಡು ಮೂರು ತಿಂಗಳಲ್ಲಿ ತನಿಖೆ ಮುಗಿದು ಸತ್ಯಾಂಶ ಆಚೆ ಬರಬೇಕು. ನನಗೆ ಖಂಡಿತವಾಗಿಯೂ ಅವರು ಆರೋಪ ಮುಕ್ತರಾಗಿ ಪುನಃ ಬರುತ್ತಾರೆ ಎಂಬ ವಿಶ್ವಾಸವಿದೆ. ಈ ಬೆಳವಣಿಗೆಯಿಂದ ಪಕ್ಷಕ್ಕೆ ಯಾವುದೇ ರೀತಿಯ ಮುಜುಗರವಾಗುವುದಿಲ್ಲ ಎಂದು ಹೇಳಿದರು.

ಈಶ್ವರಪ್ಪರ ಮೇಲೆ ಯಾವುದೇ ಒತ್ತಡ ಇಲ್ಲ: ಗೃಹ ಸಚಿವ

ಸಚಿವ ಕೆ.ಎಸ್. ಈಶ್ವರಪ್ಪ ಅವರೇನು ಅಪರಾಧ ಮಾಡದೇ ಇದ್ದರೂ, ಅವರ ಮೇಲೆ ಆರೋಪ ಬಂದಿದೆ. ನಿಷ್ಪಕ್ಷಪಾತವಾಗಿ, ತನಿಖೆ ನಡೆಯಬೇಕೆಂಬ ಉದ್ದೇಶದಿಂದ ರಾಜೀನಾಮೆ ನೀಡಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ ಬಿಜೆಪಿ ಕಚೇರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪ ರಾಜೀನಾಮೆ ನೀಡುವ ವಿಚಾರ ಗೊತ್ತಾಗಿದೆ. ಸಚಿವ ಸ್ಥಾನದಲ್ಲಿದ್ದರೆ, ತನಿಖೆಗೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡುತ್ತಿದ್ದಾರೆ ಎಂದರು.
ಈ ಪ್ರಕರಣದಲ್ಲಿ ಒತ್ತಡಕ್ಕೆ ಮಣಿದು ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುತ್ತಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಒತ್ತಡವಿಲ್ಲ ಎಂದು ಅವರೇ ಹೇಳಿದ್ದಾರೆ. ನಾನಾಗೇ, ಸ್ವಯಂ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಿರುವುದಾಗಿ ಆರಗ ಜ್ಞಾನೇಂದ್ರ ತಿಳಿಸಿದರು.
ಈಗಾಗಲೇ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ, ತನಿಖೆಯಲ್ಲಿ ಏನು ಬರುತ್ತೊ ನೋಡೋಣ. ಕಾಂಗ್ರೆಸ್ ವಿರೋಧ ಪಕ್ಷವಾಗಿ ಏನು ಮಾತನಾಡುತ್ತಾರೋ ಅದು ಮುಖ್ಯವಲ್ಲ. ಈಗಾಗಲೇ ಸಂತೋಷ್ ಪ್ರಕರಣದಲ್ಲಿ ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸಿದ್ದಾರೆ ಎಂದರು.
ಸಂತೋಷ್ ನದ್ದು ಯಾವುದೇ ಡೆತ್ ನೋಟ್ ಇಲ್ಲ. ಅವರು ವಾಟ್ಸಾಪ್ ನಲ್ಲಿ ಟೈಪ್ ಮಾಡಿ ಕಳಿಸಿದ್ದಾರಷ್ಟೇ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅವರೇ, ಟೈಪ್ ಮಾಡಿದ್ದಾರೋ, ಅಥವಾ ಬೇರೆಯವರು ಟೈಪ್ ಮಾಡಿದ್ದಾರೋ ತಿಳಿಯಬೇಕಿದೆ. ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ. ಉಡುಪಿ ಎಸ್.ಪಿ. ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿದೆ. ಸದ್ಯದಲ್ಲೇ ವಿವರವಾದ ವರದಿ ಬರಲಿದೆ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಮಹಾನಾಯಕ ಯಾರು ಎಂಬುದರ ಬಗ್ಗೆ ನನಗೇನು ಗೊತ್ತಿಲ್ಲ. ಎಲ್ಲವೂ ಪೊಲೀಸ್ ತನಿಖೆಯಿಂದ ಹೊರಬರಲಿದೆ. ಹಿಂದೆ, ಮುಂದೆ ನೋಡದೇ, ತನಿಖೆ ಮುಂದುವರೆಯಲಿದೆ. ಉಳಿದವರಿಗೆ ಹುಲ್ಲುಕಡ್ಡಿ ಆಧಾರ ಎಂಬುವ ಹಾಗೆ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಅವರು ರಾಜಕಾರಣ ಮಾಡುತ್ತಿರುವುದು ಜನರಿಗೆ ತಿಳಿಯುತ್ತದೆ. ಪರ್ಸಂಟೇಜ್ ವ್ಯವಹಾರದ ಬಗ್ಗೆ ಸಾಬೀತು ಮಾಡಬೇಕು. ಅವಕಾಶವಿದೆ, ಮೊದಲು ಸಾಬೀತು ಮಾಡಲಿ. ಬಿಜೆಪಿಗೆ ಯಾವುದೇ ಹಿನ್ನಡೆಯಾಗಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.

Ad Widget

Related posts

ಆಯುಷ್ ವೈದ್ಯರ ಪ್ರತಿಭಟನೆ

Malenadu Mirror Desk

ಗಲ್ಲಿ ಹುಡುಗರ ವೈಷಮ್ಯ ಗಲಭೆ ರೂಪ ಪಡೆಯಿತೆ ?, ರಾಗಿಗುಡ್ಡ ಕಲ್ಲುತೂರಾಟ, ಪ್ರಕ್ಷುಬ್ಧತೆ ಹಿಂದಿನ ಅಸಲಿಯತ್ತೇನು ಗೊತ್ತೇ ?

Malenadu Mirror Desk

ಭದ್ರಾವತಿ ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಚಿರತೆ ಸೆರೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.