ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಹೆಸರನ್ನಿಡಲು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಎರಡು ದಿನಗಳ ತಮ್ಮ ಭೇಟಿಯಲ್ಲಿ ಸೋಗಾನೆಯಲ್ಲಿನ ವಿಮಾನ ನಿಲ್ದಾಣ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಅವರ ಕಾರಣದಿಂದ ನಗರಕ್ಕೆ ವಿಮಾನ ನಿಲ್ದಾಣ ಮಂಜೂರಾಗಿ ಭರದಿಂದ ಕೆಲಸ ಸಾಗುತ್ತಿದೆ. ಬೆಂಗಳೂರು ನಂತರ ರಾಜ್ಯದ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣ ಇದಾಗಿದೆ. ಈ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರನ್ನು ನಾಮಕಾರಣ ಮಾಡಲು ರಾಜ್ಯ ಸಚಿವ ಸಂಪುಟದಲ್ಲಿ ನಿರ್ಣಯ ಮಾಡಲಾಗಿದೆ. ಕೇಂದ್ರ ಸರಕಾರಕ್ಕೆ ಈ ಶಿಫಾರಸು ಕಳಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಈ ಮೂಲಕ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕೆಂಬ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆದಂತಾಗಿದೆ. ಕಳೆದ ಕೆಲ ತಿಂಗಳಿಂದ ರಾಜಕಾರಣಿಗಳು, ಸಂಘ ಸಂಸ್ಥೆಗಳು ಹಾಗೂ ಜಾತಿ ಸಂಘಟನೆಗಳು ಹಲವು ಹೆಸರುಗಳನ್ನು ಇಡಬೇಕೆಂಬ ಒತ್ತಾಯವನ್ನು ಮಾಡಿದ್ದವು. ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಶಾಂತವೇರಿ ಗೋಪಾಲಗೌಡ ಸೇರಿದಂತೆ ಅನೇಕ ಹೆಸರುಗಳು ಕೇಳಿಬಂದಿದ್ದವು. ಅಂತಿಮವಾಗಿ ವಿಮಾನ ನಿಲ್ದಾಣ ನಿರ್ಮಾತೃ ಯಡಿಯೂರಪ್ಪ ಅವರ ಹೆಸರನ್ನೇ ರಾಜ್ಯ ಸರಕಾರ ಶಿಫಾರಸು ಮಾಡಿದ್ದು, ಕೇಂದ್ರ ಸರಕಾರ ಇನ್ನಷ್ಟೇ ತೀರ್ಮಾನ ಮಾಡಬೇಕಿದೆ.
ಸಂಸದ ಬಿ.ವೈ.ರಾಘವೇಂದ್ರ, ಸಚಿವರಾದ ಭೈರತಿ ಬಸವರಾಜ, ಗೃಹಸಚಿವ ಆರಗಜ್ಞಾನೇಂದ್ರ, ಶಾಸಕ ಕೆ.ಬಿ.ಅಶೋಕನಾಯ್ಕ್, ಹರತಾಳು ಹಾಲಪ್ಪ, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಎಂ.ಎ.ಡಿ.ಬಿ. ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಎಸ್.ದತ್ತಾತ್ರಿ, ಶ್ರೀಮತಿ ಪವಿತ್ರಾ ರಾಮಯ್ಯ, ಜ್ಯೋತಿಪ್ರಕಾಶ್, ಜಿಲ್ಲಾಧಿಕಾರಿ ಡಾ||ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮತ್ತಿತರರಿದ್ದರು.
ವಿಮಾನ ನಿಲ್ದಾಣದ ಆರಂಭದಿಂದಾಗಿ ಕೈಗಾರಿಕಾ ಕ್ಷೇತ್ರದ ವಿಕಾಸಕ್ಕೆ ಅವಕಾಶಗಳು ಹೆಚ್ಚಾಗಲಿವೆ. ಅಲ್ಲದೇ ವಾಣಿಜ್ಯ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಮಹತ್ವದ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಅಲ್ಲದೇ ಸಮಯ ಮತ್ತು ಹಣ ನಿರ್ವಹಣೆಗೆ ಅನುಕೂಲವಾಗಲಿದೆ. ಪ್ರಸ್ತುತ ಶಿವಮೊಗ್ಗ, ರಾಯಚೂರು, ಬಿಜಾಪುರ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ. ಶಿವಮೊಗ್ಗ ನಗರದ ಎಂ.ಆರ್.ಎಸ್.ನಿಂದ ನಿಲ್ದಾಣದವರೆಗೆ ಅಂತರಾಷ್ಟ್ರೀಯ ಮಟ್ಟದ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಸೂಚಿಸಲಾಗುವುದು. ದೂರದೃಷ್ಠಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಶಕಗಳ ಹಿಂದೆಯೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದರು
ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ