Malenadu Mitra
ರಾಜ್ಯ ಶಿವಮೊಗ್ಗ

ಸಂಪದ್ಬರಿತ ರಾಜ್ಯಕ್ಕಾಗಿ ಜಲಧಾರೆ ಯಾತ್ರೆ, ಪಕ್ಷ ಅಧಿಕಾರಕ್ಕೆ ಬಂದರೆ ಸುಭಿಕ್ಷ ಆಡಳಿತ ನೀಡುವೆ ಎಂದ ಕುಮಾರಸ್ವಾಮಿ

ಪಕ್ಷದ ಜನತಾ ಜಲಾಧಾರೆ ಯಾತ್ರೆಯು ರಾಜ್ಯದ ಪ್ರತಿಯೊಬ್ಬ ರೈತನ ಹೊಲಕ್ಕೆ ನೀರುಣಿಸುವ ಹಾಗೂ ಎಲ್ಲಾ ಮನೆಗಳಿಗೆ ಕುಡಿಯುವ ನೀರೊದಗಿಸುವ ಮಹತ್ತರ  ಸಂಕಲ್ಪ ಯಾತ್ರೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಚಿಕ್ಕೂಡ್ಲಿ ಗ್ರಾಮದಲ್ಲಿ ಜೆಡಿಎಸ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಜನತಾ ಜಲಧಾರೆ ರಥಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಏ.೧೬ರಿಂದ ರಾಜ್ಯದ ೧೬ ಪ್ರಮುಖ ನದಿಗಳ ಪುಣ್ಯ ತೀರ್ಥ ಸಂಗ್ರಹಿಸಲು ಜಲಧಾರೆ ರಥಯಾತ್ರೆ ಆರಂಭಿಸಲಾಗಿದೆ. ೯೪ ಸ್ಥಳಗಳಲ್ಲಿ ಗಂಗೆ ಪೂಜೆ ಮಾಡಿ ರೈತರಿಗೆ ಸಮೃದ್ಧ ಬೆಳೆ ನೀಡುವಂತೆ ಪ್ರಾರ್ಥಿಸುತ್ತಿದ್ದೇವೆ. ರಾಜ್ಯ ಸರಕಾರ ಸುಮಾರು ೭೫ ವರ್ಷಗಳಿಂದಲೂ ಈ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದು ಸರಿಪಡಿಸುವ ಉದ್ದೇಶ ಇಲ್ಲದಾಗಿದೆ. ಎಚ್.ಡಿ.ದೇವೇಗೌಡ ಅವರ ಅಧಿಕಾರಾವಧಿಯಲ್ಲಿ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ, ರೈತನ ಹೊಲಗಳಿಗೆ ಕಾಲುವೆ, ಜಲಾಶಯಗಳ ನಿರ್ಮಾಣ ಮಾಡಿ ಪುನಶ್ಚೇತನ ಮಾಡಲಾಗಿದೆ. ಆದರೆ ಈಗ ರಾಜ್ಯದಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಶಿಕ್ಷಣ ಪಡೆಯುತ್ತಿರುವ ಮಕ್ಕಳಲ್ಲಿ ತಾರತಮ್ಯ, ಕೋವಿಡ್ ಸಂದರ್ಭ ನಿರ್ಲಕ್ಷತನದಿಂದ ಜನರ ಸಾವು, ರೈತರ ಬೆಳೆಗೆ ಸರಿಯಾದ ಬೆಲೆ ನೀಡುತ್ತಿಲ್ಲ ಎಂದರು.
 ಯುವ ಜನರಿಗೆ ಉದ್ಯೋಗ ಸೌಲಭ್ಯ ಇಲ್ಲದಾಗಿದೆ. ರೈತರ ಬದುಕು ಹಸನುಗೊಳಿಸಲು ಸುಮಾರು ೪ಲಕ್ಷ ಕೋಟಿ ರೂ. ಅಗತ್ಯ ಇದೆ. ಆದರೆ ರಾಜ್ಯ ಸರಕಾರವು ಪ್ರತಿವರ್ಷ ಕೇವಲ ೮ ಸಾವಿರ ಕೋಟಿ ಮಾತ್ರ ವ್ಯಯಿಸುತ್ತಿದೆ. ಅದರಲ್ಲೂ ಶೇ.೪೦ ಕಮಿಷನ್ ಪಡೆಯಲಾಗುತ್ತಿದೆ. ಅದರ ಪರಿಣಾಮ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರ ತಲೆದಂಡವಾಗಿದೆ. ಕಾಂಗ್ರೆಸ್‌ನಲ್ಲಿದ್ದ ಕಮೀಷನ್ ದಂದೆ ದುಪ್ಪಟ್ಟು ಆಗಿದೆ. ಚುನಾವಣೆ ಸಂದರ್ಭ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಕೊಟ್ಟ ಮಾತು ಉಳಿಸಿಕೊಳ್ಳಲು ಪೂರ್ಣ ಪ್ರಮಾಣದ ಬಹುಮತ ಸಾಧ್ಯವಾಗಲಿಲ್ಲ. ಆಗ ಕಾಂಗ್ರೆಸ್ ಕೈಗೂಡಿ ಸಮ್ಮಿಶ್ರ ಸರಕಾರ ರಚಿಸಿ ಕೇವಲ ೧೪ ತಿಂಗಳಲ್ಲಿ ಸುಮಾರು ೨೫,೦೦೦ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಯಿತು. ಇದರಲ್ಲಿ ಯಾವುದೇ ಕಮಿಷನ್ ಹೊಡೆದಿಲ್ಲ. ಹಾಗೇನಾದರು ಮಾಡಿದ್ದರೆ ಸುಮಾರು ೧೦ಕೋಟಿ ರೂ. ಹಣ ಮಾಡಬಹುದಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ಬರಪೂರ ಭರವಸೆ


 ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನಪರ ಯೋಜನೆ ಜಾರಿ ಮಾಡುವುದಾಗಿ ಹೇಳಿದ ಅವರು, ರಾಜ್ಯದ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಿಣಿ ಪಡೆಯುತ್ತಿರುವ ಪ್ರತಿ ಫಲಾನುಭವಿಗೆ ೨,೦೦೦ರೂ. ಪಿಂಚಿಣಿ. ರಾಜ್ಯದ ಗ್ರಾ.ಪಂ. ಮಟ್ಟದ ಸುಮಾರು ೬೦,೦೦೦ ಮಕ್ಕಳ ಎಲ್‌ಕೆಜಿ ಯಿಂದ ಪಿಯು ತರಗತಿವರೆಗೆ ಆಂಗ್ಲ ಮಾಧ್ಯಮ ಸಂಪೂರ್ಣ ಉಚಿತ ಶಿಕ್ಷಣ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೩೦ ಹಾಸಿಗೆಯ ಆರೋಗ್ಯ ಕೇಂದ್ರ ಸ್ಥಾಪಿಸಿ ೨೪ ಗಂಟೆ ಸೇವೆ. ಪ್ರತಿ ಕುಟುಂಬದ ಒಬ್ಬರಿಗೆ ಉದ್ಯೋಗ ಭರವಸೆ. ನಿವೇಶನ ರಹಿತರಿಗೆ ವಸತಿ ವ್ಯವಸ್ಥೆ. ಆಶ್ರಯ ಇಲ್ಲದ ಹೆಣ್ಣು ಮಕ್ಕಳ ಕುಟುಂಬಕ್ಕೆ ಪ್ರತಿ ತಿಂಗಳು ೬,೦೦೦ರೂ. ರೈತರ ಹೊಲಗಳಿಗೆ ನೀರು ಹಾಗೂ ಬೆಳೆಗೆ ಸೂಕ್ತ ಬೆಲೆ ಒದಗಿಸಿ ರಾಜ್ಯ ಪ್ರತಿ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಒತ್ತು ನೀಡಲಾಗುತ್ತದೆ. ಎಂದರು.


ಬಿಜೆಪಿಯಿಂದ ಬೆಂಕಿ ಹಚ್ಚುವ ಕೆಲಸ:  


ರಾಜ್ಯದಲ್ಲಿ ಬಿಜೆಪಿ ಸರಕಾರ ಧರ್ಮ ಹೆಸರಿನಲ್ಲಿ ಎಲ್ಲೆಡೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟದಂತೆ ಸೌಹಾರ್ದತೆಯಿಂದ ಜನರು ಬದುಕುತ್ತಿದ್ದ ಸಮಾಜದಲ್ಲಿ ಈಗ ಎಲ್ಲೆಡೆ ಗಲಭೆ ನಡೆಸುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಸರಕಾರದ ಯೋಜನೆ ಬಿಜೆಪಿಯವರು ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.

ಶಾರದಾ ಪೂರ್‍ಯಾನಾಯ್ಕ್ ಸಚಿವೆ:

ನನ್ನ ತಂಗಿ ಮಾಜಿ ಶಾಸಕಿ ಶಾರದಾ ಪೂರ್‍ಯಾನಾಯ್ಕ ಅವರು ಅಧಿಕಾರಾವಧಿಯಲ್ಲಿ ಯಾವುದೇ ಕಮಿಷನ್ ಪಡೆದು ಹಣ ಗಳಿಸದೆ ಅಭಿವೃದ್ಧಿ ಕಾರ್‍ಯ ಮಾಡಿ ಜನರ ಪ್ರೀತಿ ಸಂಪಾದಿಸಿದ್ದಾರೆ. ಅವರನ್ನು ಮತ್ತೆ ಮಾಡಿದರೆ ಒಬ್ಬ ಒಳ್ಳೆಯ ಸಚಿವೆಯಾಗಿ ಇನ್ನಷ್ಟು ಪ್ರಗತಿ ಕೆಲಸ ಮಾಡಲು ಎಲ್ಲರ ಸಹಕಾರ  ಬೇಕು ಎಂದು ಕೋರಿದರು.
ಮಾಜಿ ಶಾಸಕಿ ಶಾರದಾಪೂರ್‍ಯಾನಾಯ್ಕ್ ಮಾತನಾಡಿ, ರಾಜ್ಯಕ್ಕೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ. ತುಂಗಭದ್ರಾ ಸಂಗಮದ ದೈವ ಸಂಕಲ್ಪದಿಂದ ಮುಂದಿನ ದಿನಗಳಲ್ಲಿ ಕ್ಷೇತ್ರ ಸುಭಿಕ್ಷವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ರಾಜ್ಯದ ಮುಖ್ಯಮಂತ್ರಿ ಉತ್ತಮವಾಗಿದ್ದರೆ ರಾಜ್ಯ ಸುಭೀಕ್ಷವಾಗಿರುತ್ತದೆ. ಮುಂದಿನ ದಿನಗಳಲ್ಲಿ ರೈತರ ಜತೆಗಿರುವ ಉದ್ದೇಶದಿಂದ ಜನತಾ ಜಲಧಾರೆ ಯಾತ್ರೆ ನಡೆಸಲಾಗುತ್ತಿದೆ ಎಂದರು
ಇದಕ್ಕೂ ಮುನ್ನಾ ಶ್ರೀಕ್ಷೇತ್ರ ಕೂಡ್ಲಿ ಗ್ರಾಮದ ತುಂಗಭದ್ರಾ ಸಂಗಮ ಸ್ಥಳದಲ್ಲಿ ಶ್ರೀ ಸಂಗಮೇಶ್ವರಸ್ವಾಮಿ ಪೂಜೆ, ಪೂರ್ಣಕುಂಬ ಪೂಜೆ ಮಾಡಿ ನದಿಗೆ ಬಾಗೀನ ಅರ್ಪಿಸಲಾಯಿತು. ಬಳಿಕ ಪೂರ್ಣಕುಂಬದೊಂದಿಗೆ ಮೆರವಣಿಗೆ ಮೂಲಕ ಶ್ರೀ ಶಾರದಾಂಬೆ ದೇವಸ್ಥಾನಕ್ಕೆ ಆಗಮಿಸಿ ಮಂಗಳಾರತಿ ಮಾಡಿಸಿ ನಂತರ ಪುಣ್ಯ ತೀರ್ಥವನ್ನು ಜನತಾ ಜಲಧಾರೆ ರಥದಲ್ಲಿ ಸಂಗ್ರಹಿಸಲಾಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಮಾತನಾಡಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾಸತೀಶ್, ಜೆಡಿಎಸ್ ಮುಖಂಡ ಕಾಂತರಾಜ್ ಸೋಮಿನಕೊಪ್ಪ,  ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್, ಜಿ.ಪಂ. ಮಾಜಿ ಸದಸ್ಯ ಮಣಿಶೇಖರ್, ಎಂ.ದಾನೇಶ್, ಕುಮಾರ್‌ನಾಯ್ಕ್, ತೀರ್ಥಹಳ್ಳಿ ನಿಯೋಜಿತ ಅಭ್ಯರ್ಥಿ ರಾಜರಾಂ ಹೆಗ್ಡೆ, ಶಿಕಾರಿಪುರ ಹೆಚ್.ಟಿ.ಬಳಿಗಾರ್, ದಾನವಾಡಿ ಗಿರೀಶ್, ಎಂ.ಹರೀಶ್‌ಕುಮಾರ್, ಎಚ್.ಕೆ.ಶ್ರೀನಿವಾಸ್, ಎಚ್.ಜಿ.ವೆಂಕಟೇಶ್, ಜಿ.ಎನ್.ಪರಶುರಾಮರಾವ್ ಗಡದೆ, ಆನವೇರಿ ಕುಬೇಂದ್ರಪ್ಪ, ರಫೀಕ್ ಮತ್ತಿತರರು ಭಾಗವಹಿಸಿದ್ದರು.

Ad Widget

Related posts

ಶಿವಮೊಗ್ಗದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ, ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಸಂಸದರ ಸೂಚನೆ,ಆರೋಪಿಗಳು ಪೊಲೀಸ್ ವಶಕ್ಕೆ

Malenadu Mirror Desk

ಬಂಜಾರ ಸಮಾಜದ ಏಳಿಗೆಗೆ ಅನುದಾನ : ಯಡಿಯೂರಪ್ಪ ಭರವಸೆ
ಬಂಜಾರ ಕನ್ವೆನ್ಶನಲ್ ಹಾಲ್ ಲೋಕಾರ್ಪಣೆ

Malenadu Mirror Desk

ಅಡಿಕೆ ಮೌಲ್ಯವರ್ಧನೆಯಿಂದ ಉತ್ತಮ ಆದಾಯ ಗಳಿಸಲು ಸಾಧ್ಯ: ಡಾ.ಸೆಲ್ವಮಣಿ ಆರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.