ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವ ನಿರ್ಧಾರವನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ, ‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ’ ಎಂದು ಪ್ರಕಟಿಸಿದ್ದರು. ಈ ಕುರಿತು ಭಾನುವಾರ ಪತ್ರ ಬರೆದಿರುವ ಯಡಿಯೂರಪ್ಪ, ‘ನಿಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿ, ರಾಷ್ಟ್ರದ, ನಾಡಿನ ಅಭಿವೃದ್ಧಿಗೆ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡಿರುವ ಮಹನೀಯರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿ’ ಎಂದು ಕೋರಿದ್ದಾರೆ.
‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರನ್ನು ಇಡುವುದಾಗಿ ಪ್ರಕಟಿಸಿದ್ದೀರಿ. ನಿಮ್ಮ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು. ರಾಷ್ಟ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ಹಾಗೂ ದೇಶಭಕ್ತರು ಇದ್ದಾರೆ. ಅವರ ಕೊಡುಗೆಗೆ ಹೋಲಿಸಿದಾಗ ನನ್ನದು ಅಳಿಲು ಸೇವೆ ಮಾತ್ರ. ನನ್ನನ್ನು ಸತತವಾಗಿ ಬೆಂಬಲಿಸಿದ ಜಿಲ್ಲೆಯ ಜನರ ಸೇವೆ ಮಾಡಿದ್ದೇನೆ ಎಂಬ ಧನ್ಯತಾ ಭಾವವಿದೆ. ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲವೆಂದು ಎಂದು ಯಡಿಯೂರಪ್ಪ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕೆಂಬ ಚರ್ಚೆ ಬಹಳ ದಿನಗಳಿಂದ ಇದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಹೆಸರಿಡಲು ನಿರ್ಣಯ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದರಿಂದ ಚರ್ಚೆಗೆ ತೆರೆ ಬಿದ್ದಿತ್ತು. ಆದರೆ ಈಗ ಯಡಿಯೂರಪ್ಪ ಅವರೇ ತಮ್ಮ ಹೆಸರ ಬೇಡ ಯಾರಾದರೂ ಮಹನೀಯರ ಹೆಸರನ್ನು ನಾಮಕರಣ ಮಾಡಿ ಎಂದು ಸಲಹೆ ನೀಡುವ ಮೂಲಕ ಜನಪ್ರೀತಿಗೆ ಪಾತ್ರರಾಗಿದ್ದಾರೆ.