ಬಸವಣ್ಣನವರು ಮನುಷ್ಯನ ಹೃದಯ ಪರಿವರ್ತನೆಯನ್ನು ಪವಾಡ ರೂಪದಲ್ಲಿ ಮಾಡಿದರು. ಈಗಲೂ ಪರಿವರ್ತನೆಯ ಕೆಲಸ ಆಗಬೇಕಿದೆ. ಇಡೀ ಮನುಷ್ಯ ಕುಲವನ್ನು ಕಾಯಕ ಮತ್ತು ದಾಸೋಹ ತತ್ವಗಳಿಂದ ಪ್ರೀತಿಸಿದಾತ ಬಸವಣ್ಣ. ಭಯ ಮತ್ತು ಅನುಮಾನದಿಂದ ಹೊರಬರಲು ಏಕೈಕ ದಾರಿ ಬಸವತತ್ವವಾಗಿದೆ. ಹುಟ್ಟು ಸಾವು ಎನ್ನುವುದು ಸ್ವಾಭಾವಿಕ. ಆದರೆ, ಅದರ ಮಧ್ಯದಲ್ಲಿ ಯಾವ ರೀತಿ ಬಾಳುತ್ತೇವೆ ಎನ್ನುವುದು ಅತೀ ಮುಖ್ಯವಾಗುತ್ತದೆ ಎಂದು ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಸವ ಸ್ಮರಣೆ ಹಾಗೂ ಶರಣರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬಸವ ಜಯಂತಿಯನ್ನು ಅಕ್ಷಯ ತದಿಗೆಯಿಂದ ಒಂದು ತಿಂಗಳ ಕಾಲ ಎಲ್ಲರೂ ಹಬ್ಬವನ್ನಾಗಿ ಆಚರಿಸುತ್ತಾರೆ. ವಿದ್ಯುತ್ ಇಲಾಖೆಯ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೂಡ ಬಸವ ಜಯಂತಿಯನ್ನು ಕಾಯಕ ದಾಸೋಹ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಆಚರಿಸಿ ಕೊಂಡು ಬಂದಿದೆ ಎಂದರು
.ಬಸವಣ್ಣನವರು ಹುಟ್ಟು-ಸಾವಿನ ಮಧ್ಯದ ಬದುಕನ್ನು ಸಮಾಜಕ್ಕಾಗಿ ಮೀಸಲಿಟ್ಟು ಮಹಾ ಪುರುಷರಾದರು. ಆದರೆ, ಈಗಿನ ಜನರ ಬದುಕು ಹುಟ್ಟು ಸಾವಿನ ನಡುವೆ ಏನೂ ಮಾಡದೇ ಕಳೆದು ಹೋಗುತ್ತಿರುವುದು ದೊಡ್ಡ ದುರಂತ. ಅನೇಕರು ತಮ್ಮ ಅರ್ಧ ಆಯಸ್ಸನ್ನು ತಮ್ಮ ಹುಟ್ಟಿನ ಬಗ್ಗೆಯೇ ಯೋಚಿಸಿ ಕಳೆಯುತ್ತಾರೆ. ಕೆಲವರು ಸಾವಿನ ಬಗ್ಗೆ ಭಯದಿಂದ ಕಳೆಯುತ್ತಾರೆ. ಇದರ ನಡುವಿನ ಬದುಕನ್ನು ಏನೂ ಮಾಡದೇ ಅಂತ್ಯವಾಗುತ್ತಾರೆ. ಆದರೆ, ಮಹಾಪುರುಷರಿಗೆ ಹುಟ್ಟು ಮತ್ತು ಸಾವು ಮುಖ್ಯವಲ್ಲ. ತಾವು ಬದುಕುಳಿದ ಅವಧಿಯಲ್ಲಿ ಸಮಾಜಕ್ಕಾಗಿಯೇ ತಮ್ಮ ಜೀವನ ಸಮರ್ಪಿಸುವುದರಿಂದ ಅವರನ್ನು ಜನ ನೆನಪಿಸಿಕೊಳ್ಳುತ್ತಾರೆ ಎಂದರು.
ನಮ್ಮ ಬದುಕಿನ ಕ್ಷಣಗಳನ್ನು ಅಲಕ್ಷಿಸಬಾರದು. ಜೀವನದಲ್ಲಿ ಒಂದು ಶ್ರೇಷ್ಠವಾದ ಗುರಿಯನ್ನಿಟ್ಟುಕೊಂಡು ಅದನ್ನು ತಲುಪುವುದು ಎಲ್ಲರ ಕರ್ತವ್ಯವಾಗಿದೆ. ಅಟ್ಟದ ಮೇಲೆ ಏರಲು ಏಣಿಯ ಸಹಾಯ ಬೇಕೇ ಬೇಕು. ಹತ್ತಿದ ಮೇಲೆ ಅದನ್ನು ತಳ್ಳಿದರೆ ಅದರ ಪರಿಣಾಮ ಆತ ಇಳಿಯಬೇಕಾದಾಗ ಅರಿವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಹುಟ್ಟಿಕೊಂಡ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಕಾಯಕವೇ ಕೈಲಾಸ ಎಂದು ಹೇಳಿ ಕಾಯಕದಲ್ಲೇ ದೇವರನ್ನು ಕಂಡ ಮಹಾಪುರುಷರು ಜೀವನದಲ್ಲಿ ಕೆಲವೊಂದಾದರೂ ಬಸವತತ್ವಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯುತ್ ಇಲಾಖೆಯ ವೀರಶೈವ ನೌಕರರ ಕ್ಷೇಮಾಭಿವೃದ್ಧಿಸಂಘ ತಮ್ಮ ನಿರಂತರ ಚಟುವಟಿಕೆಗಳಿಗೆ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ಸ್ಥಳದ ಬೇಡಿಕೆ ಇಟ್ಟಿದ್ದಾರೆ. ಅದನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಡಿ.ಎಸ್. ಅರುಣ್, ಕೆಪಿಟಿಸಿಎಲ್ ನಿವೃತ್ತ ನಿರ್ದೇಶಕ ಕೆ.ವಿ. ಶಿವಕುಮಾರ್, ಪ್ರಮುಖರಾದ ಎಸ್.ಪಿ. ದಿನೇಶ್, ಕತ್ತಿಗೆ ಚನ್ನಪ್ಪ, ಪಿ. ಚಂದ್ರಕಲಾ, ಮೋಹನ್ ಕುಮಾರ್, ಕುಮಾರಸ್ವಾಮಿ, ಪ್ರಕಾಶ್, ವಸಂತಕುಮಾರ್, ದ್ವಾರಾಕಾರಾಧ್ಯ ಮತ್ತಿತರರಿದ್ದರು.
12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಹುಟ್ಟಿಕೊಂಡ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಕಾಯಕವೇ ಕೈಲಾಸ ಎಂದು ಹೇಳಿ ಕಾಯಕದಲ್ಲೇ ದೇವರನ್ನು ಕಂಡ ಮಹಾಪುರುಷರು ಜೀವನದಲ್ಲಿ ಕೆಲವೊಂದಾದರೂ ಬಸವತತ್ವಗಳನ್ನು ಅಳವಡಿಸಿಕೊಳ್ಳಬೇಕು.
ಬಿ.ವೈ. ರಾಘವೇಂದ್ರ ,ಸಂಸದ