Malenadu Mitra
ರಾಜ್ಯ ಶಿವಮೊಗ್ಗ

ಬಸವರಾಜಪ್ಪ ಚಳವಳಿಗಾರರಿಗೆ ಮಾದರಿ, ಹಸಿರು ಹಾದಿಯ ಕಥನ ಬಿಡುಗಡೆ ಕಾರ್ಯಕ್ರಮದಲ್ಲಿ ಹೋರಾಟಗಾರನ ಗುಣಗಾನ

ಕಳೆದ 50 ವರ್ಷಗಳಿಂದ ರೈತ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಹಸಿರು ಕ್ರಾಂತಿಗೆ ಪ್ರೇರಣೆಯಾಗಿರುವ ರೈತನಾಯಕ ಹೆಚ್.ಆರ್. ಬಸವರಾಜಪ್ಪನವರ ‘ಹಸಿರು ಹಾದಿಯ ಕಥನ’ ಪುಸ್ತಕ ಬಿಡುಗಡೆ, ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ ಬುಧವಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಿತು.
ಹೆಚ್.ಆರ್. ಬಸವರಾಜಪ್ಪ ಅವರ ಹೋರಾಟದ ಹಾದಿಯ ಆತ್ಮಕಥನ ‘ಹಸಿರು ಹಾದಿಯ ಕಥನ’ ಪುಸ್ತಕವನ್ನು ಸಿರಿಗೆರ ಬೃಹನ್ಮಠದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು. ಸಾಕ್ಷ್ಯ ಚಿತ್ರವನ್ನು ರೈತ ಹೋರಾಟಗಾರ ಕಡಿದಾಳು ಶಾಮಣ್ಣ ಬಿಡುಗಡೆ ಮಾಡಿದರು.
ಪುಸ್ತಕ ಕುರಿತು ಮಾತನಾಡಿದ ಚಿಂತಕ ನೆಂಪೆ ದೇವರಾಜ್, ಹೆಚ್.ಆರ್. ಬಸವರಾಜಪ್ಪ ಅವರು ಕಳೆದ ೫೦ ವರ್ಷಗಳಿಂದ ರೈತ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರೈತಸಮುದಾಯವನ್ನು ಒಗ್ಗೂಡಿಸುವ ಶಕ್ತಿ ಬಸವರಾಜಪ್ಪನವರಿಗೆ ವರವಾಗಿ ಬಂದಿದೆ. ಚಳುವಳಿಗಾರರಿಗೆ ಅವರು ಮಾದರಿಯಾಗಿದ್ದಾರೆ. ಇಂದಿಗೂ ಚಳುವಳಿಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಅವರಲ್ಲಿದೆ. ಅವರು ಕೇವಲ ರೈತ ಚಳುವಳಿ ಅಲ್ಲದೇ ಜಿಲ್ಲೆಯಲ್ಲಿ ನಡೆದ ಇತರ ಚಳುವಳಿಗಳನ್ನೂ ಕೊಂಡಿಯಾಗಿ ಬಳಸಿಕೊಂಡಿದ್ದಾರೆ. ನಿರೂಪಣೆಯ ಶೈಲಿ ತುಂಬಾ ಸರಳವಾಗಿದ್ದು, ಎಲ್ಲರಿಗೂ ಅರ್ಥವಾಗುವಂತಿದೆ. ಹಸಿರು ಕ್ರಾಂತಿಗಾಗಿ 5ದಶಕಗಳ ಕಾಲ ನಡೆಸಿದ ಹೋರಾಟವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಬಸವರಾಜಪ್ಪನವರು ರೈತನ ಬದುಕು ಹಸನುಗೊಳ್ಳದ ವಿನಃ ರಾಷ್ಟ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ತತ್ವದಲ್ಲಿ ನಂಬಿಕೆ ಇಟ್ಟವರು ಎಂದರು.
ಜಾತಿಯನ್ನು ಮೀರಿ ನಿಂತ ಅವರು, ಎಲ್ಲಿಯೂ ಜಾತಿಯನ್ನು ರೈತ ಹೋರಾಟದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಯುವಕನಾಗಿರುವಾಗಲೇ ಚಳುವಳಿಗೆ ಧುಮುಕಿದ ಅವರು ಗೆರಿಲ್ಲಾ ತರಹದ ಹೋರಾಟಕ್ಕೆ ಹೆಸರುವಾಸಿಯಾಗಿದ್ದವರು. ತಮ್ಮೂರಿನ ವೀರಭದ್ರೇಶ್ವರ ಸಂಘದ ಅಧ್ಯಕ್ಷರಾಗುವ ಮೂಲಕ ಗಮನ ಸೆಳೆದ ಅವರು, ಅನಂತರ ತಿರುಗಿ ನೋಡಲಿಲ್ಲ. ನಾಗಸಮುದ್ರದಲ್ಲಿ ನಡೆದ ರೈತರ ಮೇಲಿನ ಗೋಲಿಬಾರ್ ದೃಶ್ಯವನ್ನು ಕಣ್ಣಾರೆ ಕಂಡವರು. ನಿರಂತರ ಹೋರಾಟದ ಬದುಕು ರೈತ ಸಂಘ ಇಬ್ಭಾಗವಾದಾಗಲೂ ಸಹ ತಟಸ್ಥ ಮನೋಭಾವನೆಯನ್ನು ತಾಳಿದ ಅವರು ರೈತರ ಅನೇಕ ಸಮಸ್ಯೆಗಳನ್ನ ನಿವಾರಿಸಿದವರು ಎಂದರು.
ಇದೇ ಸಂದರ್ಭದಲ್ಲಿ ರೈತ ಹೋರಾಟದಲ್ಲಿ ತಮ್ಮ ಬದುಕನ್ನು ಸವೆಸಿದ ಕಡಿದಾಳು ಶಾಮಣ್ಣ, ಡಾ. ಬಿ.ಎಂ. ಚಿಕ್ಕಸ್ವಾಮಿ, ಕೃತಿಕಾರ ಹೆಚ್.ಆರ್. ಬಸವರಾಜಪ್ಪ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಜನಶಕ್ತಿಯ ಕೆ.ಎಲ್. ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತಹೋರಾಟಗಾರ್ತಿ ಅನಸೂಯಮ್ಮ, ದಲಿತಸಂಘರ್ಷ ಸಮಿತಿಯ ಟಿ.ಹೆಚ್. ಹಾಲೇಶಪ್ಪ, ಪತ್ರಕರ್ತರಾದ ವೀರಭದ್ರಪ್ಪ ಬಿಸ್ಲಳ್ಳಿ, ಗಿರೀಶ್ ತಾಳಿಕಟ್ಟೆ, ಹೆಚ್.ಆರ್.ಬಿ. ಅವರ ಸಾಕ್ಷ್ಯಚಿತ್ರ ನಿರ್ಮಿಸಿದ ಚಂದ್ರು ಉಪಸ್ಥಿತರಿದ್ದರು.

Ad Widget

Related posts

ಸ್ಟುಡಿಯೊ ತೆರೆಯಲು ಅವಕಾಶಕ್ಕೆ ಮನವಿ

Malenadu Mirror Desk

ಜುಲೈ ೧ರಿಂದ ಶಿವಮೊಗ್ಗಜಿಲ್ಲೆಯ 18+ ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕೆ: ಸಂಸದ

Malenadu Mirror Desk

ಕಾಗೋಡು ತಿಮ್ಮಪ್ಪ ಎಂಬ ಜನರ ನಾಯಕ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.