Malenadu Mitra
ರಾಜ್ಯ ಶಿವಮೊಗ್ಗ

ಕೋಡಿಹಳ್ಳಿ ಚಂದ್ರಶೇಖರ್ ವಜಾ, ನೂತನ ಅಧ್ಯಕ್ಷರಾಗಿ ಬಸವರಾಜಪ್ಪ

ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಉಚ್ಚಾಟಿಸಲಾಗಿದೆ.
ಶಿವಮೊಗ್ಗದ ರೈತ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈವರೆಗೂ ಸಂಘದ ಗೌರವಾಧ್ಯಕ್ಷರಾಗಿದ್ದ ಹೆಚ್.ಆರ್.ಬಸವರಾಜಪ್ಪ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸಮಿತಿ ಆಯ್ಕೆ ಮಾಡಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ನೂತನ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಇನ್ನುಮುಂದೆ ಕೋಡಿಹಳ್ಳಿ ಚಂದ್ರಶೇಖರ್ ಹೊರಗಿಟ್ಟು ಸಂಘಟನೆ ಬಲಪಡಿಸುತ್ತೇವೆ. ಎಲ್ಲಾ ರೈತ ಸಂಘದ ಎಲ್ಲಾ ಬಣಗಳು ಒಂದಾಗಿ ಮಾತುಕತೆಗೆ ಬಂದಲ್ಲಿ ನಾನು ಅಧ್ಯಕ್ಷ ಸ್ಥಾನ ತ್ಯಜಿಸುತ್ತೇನೆ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ರೈತ ಸಂಘದ ಪದಾಧಿಕಾರಿ ಭ್ರಷ್ಟಾಚಾರ ಬಯಲಾಗಿದೆ. ಹಸಿರು ಟವೆಲ್ ಹಾಕಿಕೊಂಡು ಓಡಾಡುವುದು ಕಷ್ಟವಾಗಿದೆ ಎನ್ನುವಂತಹ ಪರಿಸ್ಥಿತಿ ಇದೆ. ಕೋಡಿಹಳ್ಳಿ ಚಂದ್ರಶೇಖರ್‌ಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ನಮ್ಮ ಸಂಘಟನೆ ಇದುವರೆಗೆ ರಾಜ್ಯಮಟ್ಟದ ಸದಸ್ಯರಿಗೆ ವಾಟ್ಸಾಪ್ ನಲ್ಲೇ ಮೆಮೋ ಹಾಕಿ ಮೀಟಿಂಗ್ ಕರೆಯಲಾಗುತ್ತದೆ. ಅದೇ ರೀತಿ ನಾನೇ ಮೀಟಿಂಗ್ ಕರೆದಿದ್ದೆ, ಆ ಸಭೆಗೆ ಯಾರೂ ಹೋಗದಂತೆ ಹೇಳಲಾಗಿತ್ತು. ೧೮ ಜಿಲ್ಲೆಗಳ ಪದಾಧಿಕಾರಿಗಳು, ಶೇ. ೭೫ ರಷ್ಟು ಮಂದಿ ಬಂದಿದ್ದಾರೆ.
ಕೋಡಿಹಳ್ಳಿ ಅವರ ಕಡೆಯಿಂದ ಯಾವುದೇ ಸ್ಪಷ್ಟನೆಯೂ ಬಂದಿಲ್ಲ. ಅವರು ನಮ್ಮ ಮನೆಯಲ್ಲಿ ಉಂಡು ತಿಂದು ಮೋಸ ಮಾಡಿದ್ದಾರೆ ಎಂದು ಹೇಳಿದ್ದು, ಈ ಮೂಲಕ ಅದೆಲ್ಲವೂ ಸತ್ಯ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಈಗ ತನಿಖೆಗೆ ಒತ್ತಾಯಿಸಿದ್ದಾರೆ. ಮೇಲ್ನೋಟಕ್ಕೆ ಹಣ ವರ್ಗಾವಣೆ ಆಗಿರುವುದು ಕಂಡು ಬಂದಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಸತ್ಯಾಂಶ ಹೊರತರಬೇಕು ಎಂದು ಆಗ್ರಹಿಸಿದರು.

ಸಿಎಂಎನ್ ಚಂದ್ರಶೇಖರ್, ಪತ್ನಿ ಮೀನಾಕ್ಷಿ, ಮಗ ನೇಗಿಲು ಹೆಸರಲ್ಲಿ ಕಂಪನಿ ಮಾಡಿದ್ದಾರೆ. ಅವರು ವ್ಯವಹಾರ ಕಂಪನಿ ಮಾಡಿಕೊಳ್ಳಲಿ. ಹಸಿರು ಟವೆಲ್ ತೆಗೆದಿಟ್ಟು ರಿಯಲ್ ಎಸ್ಟೇಟ್ ವ್ಯವಹಾರ ಮಾಡಲಿ. ಹಸಿರು ಶಾಲು ಧರಿಸಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಬಾರದು ಎಂದರು.
ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿದೆ. ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಿಸಿ ರೈತ ಸಂಘಟನೆ ಬೆಳೆಸುತ್ತೇವೆ. ಮೂಲ ಸ್ಥಾಪಕರಾದ ಹೆಚ್.ಎಸ್. ರುದ್ರಪ್ಪ, ಡಾ. ಚಿಕ್ಕಸ್ವಾಮಿ, ಕಡಿದಾಳ್ ಶಾಮಣ್ಣ, ಎನ್.ಡಿ. ಸುಂದರೇಶ್, ಪ್ರೊ ನಂಜುಂಡಸ್ವಾಮಿ ಅವರ ತತ್ವ ಸಿದ್ಧಾಂತಗಳ ಅಡಿಯಲ್ಲಿ ಈ ಹಿಂದೆನಂತೆಯೇ ಸಂಘಟನೆ ನಡೆಯಲಿದೆ ಎಂದರು.
ರೈತ ಸಂಘದ ಇತಿಹಾಸವನ್ನೇ ಮರೆ ಮಾಚಲು ಹೊರಟಿದ್ದರು. ಅದಕ್ಕೆ ನಾವು ಅವಕಾಶ ಕೊಡಲ್ಲ. ಸಂಘಟನೆ ವೈಭವ ಮತ್ತೆ ಮರುಕಳಿಸುತ್ತದೆ. ರೈತ ಸಂಘ ನಾಶ ಮಾಡಿದವರು ಮುಖಂಡರೇ ಹೊರತು ರೈತರು ರೈತಸಂಘ ನಾಶ ಮಾಡಿಲ್ಲ. ರೈತ ಸಂಘಟನೆ ಕಟ್ಟಲು ನನ್ನ ಎಲ್ಲಾ ಶ್ರಮ ಹಾಕುತ್ತೇನೆ. ಸಂಘಟನೆಯಿಂದ ದೂರವಾದವರನ್ನು ಮತ್ತೆ ಕರೆ ತರುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಂಘಟನೆ ಬಲಪಡಿಸುತ್ತೇವೆ ಎಂದರು.
ಹಿಂದೆ ರಾಜಕಾರಣಿಗಳು ತಮ್ಮ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟಿದ್ದರು. ಇವರು ಕೂಡ ಅದೇ ರೀತಿ ಆರೋಪ ಕೇಳಿ ಬಂದಾಗ ರಾಜೀನಾಮೆ ಕೊಡಬೇಕಿತ್ತು. ನಾವು ಮರ್ಯಾದೆ ಉಳಿಸಿಕೊಳ್ಳುವ ಉದ್ದೇಶದಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದೇವೆ
ಪತ್ರಿಕಾಗೋಷ್ಠಿಯಲ್ಲಿ ಡಾ. ಚಿಕ್ಕಸ್ವಾಮಿ, ಹಿಟ್ಟೂರು ರಾಜು, ಶಶಿಕಾಂತ್ ಪಡಸಲಗಿ, ಸಿದ್ಧವೀರಪ್ಪ, ಕುರುವ ಗಣೇಶ್, ಟಿ.ಎಂ. ಚಂದ್ರಪ್ಪ, ನಿಂಗಪ್ಪ, ಸಿದ್ಧವೀರಪ್ಪ, ಸುಭಾಷ್, ಬಸವನಗೌಡ ಪಾಟೀಲ್, ದುಗ್ಗಪ್ಪಗೌಡ, ಅಗ್ನಿ ಶಿವಪ್ಪ ಮೊದಲಾದವರಿದ್ದರು.

ಆರೋಪ ಬಂದ ತಕ್ಷಣ ರಾಜೀನಾಮೆ ನೀಡಬೇಕಿತ್ತು.ಇದು ಮಾನಹಾನಿಯಂತಹ ಪ್ರಕರಣವಲ್ಲ. ಅತಿದೊಡ್ಡ ಹಣ ವರ್ಗಾವಣೆ ಪ್ರಕರಣ. ನನ್ನಂತಹವನಾಗಿದ್ದರೆ. ವಾಹಿನಿಯಲ್ಲಿ ಸುದ್ದಿ ಬಂದ ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ಪ್ರಾಮಾಣಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ರೈತ ಸಂಘಟನೆಯಿಂದ ಕೋಡಿಹಳ್ಳಿ ಹೊರಹಾಕಿದ್ದೇವೆ
ಹೆಚ್.ಆರ್.ಬಸವರಾಜಪ್ಪ

Ad Widget

Related posts

ಕಚೇರಿ ಮುತ್ತಿಗೆ ಮುಂದಕ್ಕೆ

Malenadu Mirror Desk

ಶಿವಮೊಗ್ಗ ಜಿಲ್ಲೆಯಲ್ಲಿ 288 ಮಂದಿಗೆ ಸೋಂಕು, 1168 ಸಕ್ರಿಯ ಪ್ರಕರಣ

Malenadu Mirror Desk

‘ಹೆದ್ದಾರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ’: ಬಿವೈಆರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.