ಸ್ಮಾರ್ಟ್ ಸಿಟಿ ಯೋಜನೆ ಭ್ರಷ್ಟಾಚಾರಕ್ಕೆ ಬುನಾದಿ ಹಾಕಿದ್ದು, ಇದರ ರೂವಾರಿ ಎನಿಸಿಕೊಂಡಿರುವ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಉಪಮುಖ್ಯಮಂತ್ರಿ, ಮಂತ್ರಿ, ಶಾಸಕ, ಪರಿಷತ್ ಸದಸ್ಯರಾಗಿ ಶಿವಮೊಗ್ಗಕ್ಕೆ ಕೊಟ್ಟ ಕೊಡುಗೆ ಏನು ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಪ್ರಶ್ನಿಸಿದ್ದಾರೆ.
ಶಿವಮೊಗ್ಗ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗುವಾಗ ನಾವು ಇಡೀ ಶಿವಮೊಗ್ಗ ನಗರದ ಎಲ್ಲಾ ವಾರ್ಡ್‌ಗಳಲ್ಲಿ ನಾಗರಿಕ ಸಮಿತಿಗಳನ್ನು ರಚಿಸಿ ಸಮಿತಿಗಳು ಕೊಟ್ಟ ಸಲಹೆಗಳನ್ನು ಪಡೆದು ಸ್ಮಾರ್ಟ್ ಸಿಟಿ ಯೋಜನೆ ಬರ ಮಾಡಿಕೊಂಡಿದ್ದೆವು ಎಂದರು. ಆದರೆ, ನಮ್ಮ ಆಶಯಗಳಿಗೆ ಇಂದು ಧಕ್ಕೆಯಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯೇ ದಿಕ್ಕು ತಪ್ಪುತ್ತಿದೆ. ಭ್ರಷ್ಟಾಚಾರಕ್ಕೆ ನಾಂದಿಯಾಗಿದೆ. ಕಾಮಗಾರಿಗಳೆಲ್ಲ ಅವೈಜ್ಞಾನಿಕವಾಗಿವೆ. ಶಾಸಕರು ಜವಾಬ್ದಾರಿ ಮರೆತಿದ್ದಾರೆ ಎಂದರು.
ನಗರದಲ್ಲಿ ೨೪*೭ ಕುಡಿಯುವ ನೀರಿನ ಯೋಜನೆ ಇನ್ನೂ ಜಾರಿಯಾಗಿಲ್ಲ. ೫೯ ಜೋನ್‌ಗಳಿವೆ. ಯಾವ ಜೋನ್‌ಗಳೂ ಪರಿಪೂರ್ಣಗೊಂಡಿಲ್ಲ. ಅವ್ಯವಸ್ಥೆಯ ಆಗರವಾಗಿದೆ. ಕೆಲವು ಬಡಾವಣೆಗಳಿಗೆ ಮೀಟರ್ ಅಳವಡಿಸಿ ಹೆಚ್ಚು ದರ ವಿಧಿಸಲಾಗಿತ್ತು. ನಾಗರಿಕ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದ ನಂತರ ಸಭೆ ಕರೆದು ತಿಂಗಳಿಗೆ ೧೭೫ ರೂ. ನೀರಿನ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದಾರೆ. ಆದರೆ ಇದರಲ್ಲಿ ಈಶ್ವರಪ್ಪ ಅವರ ಚಾಣಾಕ್ಷತನ ಎದ್ದು ಕಾಣುತ್ತಿದೆ. ನೀರಿನ ದರವನ್ನು ೧೭೫ ರೂ.ಗಳೆಂದು ರಾಜ್ಯ ಸರ್ಕಾರವು ೨೦೧೧ರಲ್ಲಿಯೇ ಆದೇಶ ಹೊರಡಿಸಿತ್ತು. ಜನರಿಗೆ ಹೊರೆಯಾಗುತ್ತದೆ ಎಂಬ ಕಾರಣದಿಂದ ಅದನ್ನು ಜಾರಿ ಗೊಳಿಸಿರಲಿಲ್ಲ. ಈಗ ಜನರ ಹೋರಾಟಕ್ಕೆ ಹೆದರಿ ಅದನ್ನು ನಿಗದಿಪಡಿಸಿ ದ್ದಾರೆ ಎಂದರು.
ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದನ್ನು ಈಶ್ವರಪ್ಪ ನಿಲ್ಲಿಸಬೇಕು. ನಾನು ಶಾಸಕನಾಗಿದ್ದಾಗ ಆಚಾರ್ಯತ್ರಯರ ಭವನ ನಿರ್ಮಿಸಿದ್ದು, ನಾಲ್ಕೂವರೆ ವರ್ಷವಾದರೂ ಉದ್ಘಾಟನೆಯಾಗಿಲ್ಲ. ಇದರ ಜೊತೆಗೆ ಆಂಜನೇಯ ಸ್ವಾಮಿ ದೇವಾಲಯದ ಪ್ರಸಾದ ಕೊಠಡಿ ಕೂಡ ಕೆಡವಿದ್ದಾರೆ. ಹಿಂದೂ ಧರ್ಮದ ಹೆಸರು ಹೇಳಿಕೊಳ್ಳುತ್ತಾರೆ ವಿನಹ ಯಾವ ಪುರಾತನ ದೇವಾಲಯಗಳನ್ನು ಪುನರುಜ್ಜೀವನಗೊಳಿಸಿಲ್ಲ. ಮೊದಲು ಈ ಎಲ್ಲ ಕೆಲಸಗಳನ್ನು ಮಾಡಲಿ. ಭ್ರಷ್ಟಾಚಾರಕ್ಕೆ ಕೊನೆ ಹಾಡಲಿ. ಆಮೇಲೆ ರಾಜಕಾರಣದ ಮಾತನಾಡಲಿ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಟಿ. ಹಾಲಪ್ಪ, ಲಕ್ಷ್ಮಣ್ , ದೀಪಕ್ ಸಿಂಗ್, ಪ್ರಸನ್ನ, ಶಿವಾನಂದ್, ಮಂಜುನಾಥ್, ಸುವರ್ಣಾ, ಚಂದ್ರು, ರಘು, ಶಾಮಸುಂದರ್, ವೆಂಕಟೇಶ, ಮಂಜುನಾಥ್ ಬಾಬು ಮೊದಲಾದವರಿದ್ದರು.
ಬಿ.ಎಚ್. ರಸ್ತೆ ಇಕ್ಕೆಲಗಳಲ್ಲಿ ಆಸ್ತಿ ಮಾಡಿದ್ದೇ ಸಾಧನೆ
ಶಿವಮೊಗ್ಗ ನಗರದ ಇಕ್ಕೆಲಗಳಲ್ಲಿ ಆಸ್ತಿ ಮಾಡಿರುವುದೇ ಈಶ್ವರಪ್ಪರ ಸಾಧನೆಯಾಗಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಶಿವಮೊಗ್ಗ ನಗರವನ್ನು ಕುಖ್ಯಾತಿ ಗೊಳಿಸುವ ಮೂಲಕ ರಾಜ್ಯದಲ್ಲಿ ನಗರವನ್ನು ಅತೀ ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿ ಸೇರಿಸಿರುವುದೇ ಈಶ್ವರಪ್ಪರ ಸಾಧನೆಯಾಗಿದೆ ಎಂದು ಪ್ರಸನ್ನ ಕುಮಾರ್ ಟೀಕಿಸಿದರು.
ಈಗ ಶಿವಮೊಗ್ಗ ನಗರದಲ್ಲಿ ಬಿಜೆಪಿಯಿಂದ ಮುಂದೆ ಈಶ್ವರಪ್ಪನರಿಗೆ ಟಿಕೆಟ್ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಅಪವಾದಗಳಿಂದ ಈಶ್ವರಪ್ಪ ಹೊರಬರಬೇಕು ಅಂದ್ರೆ ಇರುವ ಆರು ತಿಂಗಳಲ್ಲಾದ್ರೂ ಉತ್ತಮ ಕೆಲಸ ಮಾಡಲಿ
ಆಂಜನೇಯ ಸ್ವಾಮಿ ದೇವಸ್ಥಾನ ಪ್ರಸಾದ ಭವನ ಕೆಡವಿದ್ದು, ವರ್ಷಕ್ಕೊಂದು ಹೆಣ ಉರುಳಿಸಿದ್ದು, ಆಚಾರ್ಯತ್ರಯರ ಭವನ ಉದ್ಘಾಟನೆ ಮಾಡದೆ ಇರುವಂತಹ ಅಪಖ್ಯಾತಿಗಳಿಂದ ಅವರು ಮುಕ್ತರಾಗಿ ಹೊರಬರಲಿ ಎಂದು ಹೇಳಿದರು.