ಪತ್ರಕರ್ತರಿಗೆ ಮಾದರಿಯಾದ ವ್ಯಕ್ತಿತ್ವವನ್ನು ಕೆ.ಬಿ.ರಾಮಪ್ಪ ಅವರು ಹೊಂದಿದ್ದರು ಎಂದು ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್.ಸುಂದರಾಜ್ ಹೇಳಿದರು.
ಪತ್ರಿಕಾಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಮುದ್ರಣ ಕೆಲಸದ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಬಂದಿದ್ದ ಅವರಿಗೆ ಯು.ಆರ್.ಅನಂತಮೂರ್ತಿ, ಜೆ.ಹೆಚ್.ಪಟೇಲ್ ಅವರ ಒಡನಾಟ ಇತ್ತು. ಸಮಾಜವಾದಿ ಸಿದ್ಧಾಂತದ ಒಲವು ಹೊಂದಿದ್ದ ರಾಮಪ್ಪ ಅವರು ಕೊನೇ ತನಕ ಸರಳ ಸಜ್ಜನಿಕೆಯ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ನಾಲ್ಕುದಶಕಗಳ ಕಾಲ ಶಿವಮೊಗ್ಗದ ಎಲ್ಲ ಆಗುಹೋಗುಗಳಿಗೆ ಸಾಕ್ಷಿಪ್ರಜ್ಷೆಯಂತೆ ರಾಮಪ್ಪ ಅವರು ಬದುಕಿದ್ದರು ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಶೃಂಗೇಶ್ ಮಾತನಾಡಿ, ರಾಮಪ್ಪ ಅವರು ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಿದ್ದರು ಅವರ ಅಗಲಿಕೆ ನೋವು ತಂದಿದೆ ಎಂದರು.
ವೈ.ಕೆ.ಸೂರ್ಯನಾರಾಯಣ್ ಮಾತನಾಡಿ, ಕೆ.ಬಿ.ರಾಮಪ್ಪ ಅವರು ಕಷ್ಟಕಾಲದಲ್ಲಿ ಪತ್ರಿಕೆ ನಡೆಸುತ್ತಿದ್ದರು. ಅವರು ಸರಳಸಜ್ಜನಿಕೆ ಎಲ್ಲರಿಗೂ ಮಾದರಿಯಾಗಿತ್ತು ಎಂದು ಹೇಳಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಕೆ.ಬಿ.ರಾಮಪ್ಪ ಅವರದು ಸಜ್ಜನಿಕೆಯ ವ್ಯಕ್ತಿತ್ವ. ನಲವತ್ತು ವರ್ಷಗಳಿಂದ ಅವರ ಒಡನಾಟ ಇತ್ತು. ಅವರ ಎಲ್ಲ ಕಷ್ಟ ಸುಖದಲ್ಲಿ ಭಾಗಿಯಾದ್ದ ನನಗೆ ಅವರೊಬ್ಬ ಮಾರ್ಗದರ್ಶಕರಂತಿದ್ದರು. ಮಾರಿಕಾಂಬ ದೇವಾಲಯದಲ್ಲಿ ಅವರು ದೇವಿ ಅಲಂಕಾರದಲ್ಲಿ ಸಿದ್ದಹಸ್ತರಾಗಿದ್ದರು. ಪತ್ರಿಕೋದ್ಯಮದಲ್ಲಿ ಅವರು ಅಗಾಧ ಅನುಭವ ಹೊಂದಿದ್ದರು. ರಾಮಪ್ಪ ಅವರ ನಿಧನ ಮನೆಯ ಸದಸ್ಯರನ್ನು ಕಳೆದುಕೊಂಡಂತಾಗಿದೆ. ಶಿವಮೊಗ್ಗದಲ್ಲಿ ಪ್ರೆಸ್‌ಗಿಲ್ಡ್,
ಪ್ರೆಸ್ ಕ್ಲಬ್ ಅಧ್ಯಕ್ಷರಾಗಿದ್ದ ಅವರು ಪತ್ರಿಕಾ ಸಂಘಟನೆಯ ರಾಜ್ಯ ಮತ್ತು ರಾಷ್ಟ್ರೀಯ ಸಂಘಗಳ ಸದಸ್ಯರಾಗಿ ಕೆಲಸ ಮಾಡಿದ್ದರು ಎಂದರು.
ಕಾರ್ಯದರ್ಶಿ ನಾಗರಾಜ್ ನೇರಿಗೆ, ಹಿರಿಯ ಪತ್ರಕರ್ತ ವಿವೇಕ್ ಮಹಾಲೆ ಮಾತನಾಡಿದರು. ಶ್ರದ್ಧಾಂಜಲಿ ಸಭೆಯಲ್ಲಿ
ಪತ್ರಕರ್ತರಾದ ಜೇಸುದಾಸ್, ಪಿ.ಸಿ.ನಾಗರಾಜ್, ಜೋಸೆಫ್ ಟೆಲ್ಲಿಸ್, ಲಕ್ಷ್ಮೀಪ್ರಸಾದ್, ಶಿವಮೊಗ್ಗ ನಾಗರಾಜ್, ಆರುಂಡಿ ಶ್ರೀನಿವಾಸ್, ಸತ್ಯನಾರಾಯಣ್, ನಾಗರಾಜ್ ಚಟ್ನಹಳ್ಳಿ ಮತ್ತಿತರರು ಭಾಗವಹಿಸಿದ್ದರು.
next post