ಶಿವಮೊಗ್ಗ: ಜನರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ರೌಡಿಶೀಟರ್ ಅರ್ಷದ್ ಖಾನ್ ಎಂಬಾತನ ಕಾಲಿಗೆ ಗುಂಡು ಹೊಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅನುಪಿನಕಟ್ಟೆ ಸಮೀಪ ಈ ಘಟನೆ ನಡೆದಿದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆಯಾದರೂ ಕೂಡ, ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಪಡೆದು ಓಡಾಡುತ್ತಿದ್ದ ಅರ್ಷದ್ ಎಂಬಾತ, ಚಾಕು ತೋರಿಸುತ್ತಾ ಜನರನ್ನು ದರೋಡೆ ಮಾಡುವ ಕೃತ್ಯಕ್ಕೆ ಕೈ ಹಾಕಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆತನನ್ನು ಬಂಧಿಸಲು ಹೋಗಿದ್ದ ವೇಳೆ ಪೊಲೀಸರಿಗೆ ಚಾಕು ತೋರಿಸಿ ಹಲ್ಲೆಗೆ ಮುಂದ್ದಾಗಿದ್ದಾನೆ.
ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದನ್ನ ಗಮನಿಸಿದ ಇನ್ಸ್‌ಪೆಕ್ಟರ್ ಮಂಜುನಾಥ್, ಅರ್ಷದ್ ಕಾಲಿಗೆ ಗುಂಡು ಹಾರಿಸಿ, ಆತನನ್ನು ಹಿಡಿದಿದ್ದಾರೆ. ಬುದ್ದನಗರ ನಿವಾಸಿಯಾಗಿರುವ ಅರ್ಷದ್ ಮೇಲೆ ಕೋಟೆ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು. ಆ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯು ಆಗಿತ್ತು. ಸುಪ್ರೀಂಕೋರ್ಟ್‌ನಲ್ಲಿ ಬೇಲ್ ತೆಗೆದುಕೊಂಡು ಬಂದಿರುವ ಅರ್ಷದ್ ಶಿವಮೊಗ್ಗದಲ್ಲಿ ಸುಲಿಗೆ, ದರೋಡೆ, ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.